High Court of Karnataka
High Court of Karnataka 
ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ಗೆ ಇಂದಿನಿಂದ ಐದು ದಿನ ರಜೆ, ಆಗಸ್ಟ್‌ 29ಕ್ಕೆ ಬದಲಾಗಿ ಅ.15ರಂದು ಕಾರ್ಯನಿರ್ವಹಿಸಲಿರುವ ನ್ಯಾಯಾಲಯ

Bar & Bench

ಕರ್ನಾಟಕ ಹೈಕೋರ್ಟ್‌ನ ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಗೆ ಇಂದಿನಿಂದ ಆಗಸ್ಟ್‌ 31ರವರೆಗೆ ಸತತ ಐದು ದಿನಗಳು ರಜೆ ಇರಲಿದೆ. ಸ್ವರ್ಣ ಗೌರಿ ಮತ್ತು ಗಣೇಶ ಹಬ್ಬದ ಮುನ್ನಾ ದಿನವಾದ ಆಗಸ್ಟ್‌ 29ರಂದು ಅಧಿಕೃತ ರಜೆ ಘೋಷಿಸಿರುವ ಹೈಕೋರ್ಟ್‌ ಅದಕ್ಕೆ ಬದಲಾಗಿ ಅಕ್ಟೋಬರ್‌ 15ರ ಶನಿವಾರ ಕಾರ್ಯನಿರ್ವಹಿಸಲು ನಿರ್ಧರಿಸಿದೆ. ಹೀಗಾಗಿ, ಸತತ ಐದು ದಿನ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಹಾಗೂ ಸಿಬ್ಬಂದಿಗೆ ರಜೆ ಸಿಕ್ಕಂತಾಗಿದೆ.

ಹೈಕೋರ್ಟ್‌ನಲ್ಲಿ ಬಹುತೇಕ ಎರಡು ದಿನ ವಾರಾಂತ್ಯದ ರಜೆ ಇರುತ್ತದೆ. ಮುಂದಿನ ಸೋಮವಾರ ಕಾರ್ಯನಿರ್ವಹಿಸಬೇಕಾಗಿರುವುದರಿಂದ ಬದಲಾವಣೆ ಮಾಡಿಕೊಳ್ಳಲಾಗಿದೆ. ಆಗಸ್ಟ್‌ 30ರಂದು ಗೌರಿ ಹಬ್ಬದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಕ್ಯಾಲೆಂಡರ್‌ ಪ್ರಕಾರ ನಿರ್ಬಂಧಿತ ರಜೆ ಎಂದು ತಿಳಿಸಲಾಗಿದೆ.

ಆಗಸ್ಟ್‌ 5ರ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ, ಆಗಸ್ಟ್‌ 9ರಂದು ಮೋಹರಂ ಕೊನೆಯ ದಿನ ಹಾಗೂ ಆಗಸ್ಟ್‌ 19ರಂದು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹೈಕೋರ್ಟ್‌ನಲ್ಲಿ ನಿರ್ಬಂಧಿತ ರಜೆ ಘೋಷಿಸಲಾಗಿತ್ತು. ಈ ಮಧ್ಯೆ, ಆಗಸ್ಟ್‌ 15ರಂದು ಸೋಮವಾರ ಸ್ವಾತಂತ್ರ್ಯ ದಿನಾಚರಣೆ ಇದ್ದುದನ್ನು ನೆನೆಯಬಹುದಾಗಿದೆ. ಒಟ್ಟಾರೆಯಾಗಿ ಈ ತಿಂಗಳು 17 ದಿನ ಕಾರ್ಯನಿರ್ವಹಿಸಿದಂತಾಗಿದೆ.

ಜಿಲ್ಲಾ ನ್ಯಾಯಾಲಯಗಳಲ್ಲಿ ವರ್ಗಾವಣೀಯ ಲಿಖಿತಗಳ ಅಧಿನಿಯಮದ ಅಡಿ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಲಾಗಿರುತ್ತದೆ. ಅವುಗಳ ವಿಚಾರದಲ್ಲಿ ಸರ್ಕಾರವು ಕ್ರಮಕೈಗೊಳ್ಳಬೇಕಾಗುತ್ತದೆ. ಆದ್ದರಿಂದ, ಒಂದೊಮ್ಮೆ ಸಂಬಂಧಿತ ಪ್ರಕರಣದಲ್ಲಿ ವಕೀಲರು ನ್ಯಾಯಾಲಯಕ್ಕೆ ಹಾಜರಾಗದಿದ್ದರೂ ಪ್ರತಿಕೂಲ ಆದೇಶ ಮಾಡದಂತೆ ಹೈಕೋರ್ಟ್‌ ಸೂಚನೆ ನೀಡಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ತಿಳಿಸಿದರು.