Madhya Pradesh High Court, Indore Bench mphc.gov.in
ಸುದ್ದಿಗಳು

ಸರ್ಕಾರಿ ನೌಕರರ ಆರ್‌ಎಸ್‌ಎಸ್‌ ಸೇರ್ಪಡೆ: ತಪ್ಪು ಸರಿಪಡಿಸಲು ಕೇಂದ್ರಕ್ಕೆ 5 ದಶಕ ಬೇಕಾಯಿತು ಎಂದ ಮ. ಪ್ರದೇಶ ಹೈಕೋರ್ಟ್

ಆರ್‌ಎಸ್‌ಎಸ್‌ ಮೂಲಕ ದೇಶಕ್ಕೆ ಸೇವೆ ಸಲ್ಲಿಸುವ ಅನೇಕ ಕೇಂದ್ರ ಸರ್ಕಾರಿ ನೌಕರರ ಆಕಾಂಕ್ಷೆಗಳು ಈ ಐದು ದಶಕಗಳಲ್ಲಿ ಕ್ಷೀಣವಾಯಿತು ಎಂದು ನ್ಯಾಯಾಲಯ ಹೇಳಿದೆ.

Bar & Bench

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ತೊಡಗದಂತೆ ನಿರ್ಬಂಧಿಸಿ ತಾನು ಮಾಡಿದ್ದ ತಪ್ಪನ್ನು ಸರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸುಮಾರು ಐದು ದಶಕಗಳೇ ಬೇಕಾಯಿತು ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.

ತನ್ನ ತಪ್ಪಿನ ಅರಿವಾಗಲು ಕೇಂದ್ರ ಸರ್ಕಾರಕ್ಕೆ ಸುಮಾರು ಐದು ದಶಕಗಳೇ ಬೇಕಾಯಿತು. ಆರ್‌ಎಸ್‌ಎಸ್‌ನಂತಹ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಸಂಸ್ಥೆಯನ್ನು ತಪ್ಪಾಗಿ ನಿಷೇಧಿತ ಸಂಘಟನೆಗಳ ಸಾಲಿನಲ್ಲಿರಿಸಲಾಗಿದ್ದು ನಿರ್ಬಂಧ ತೆರವಿಗೊಳಿಸುವುದು ಸರ್ವೋತ್ಕೃಷ್ಟವಾದುದು ಎಂದು ಒಪ್ಪಿಕೊಳ್ಳಲು ಅದಕ್ಕೆ ಸಾಕಷ್ಟು ಸಮಯ ಹಿಡಿಯಿತು ಎಂದು  ನ್ಯಾಯಮೂರ್ತಿಗಳಾದ ಎಸ್ ಎ ಧರ್ಮಾಧಿಕಾರಿ  ಮತ್ತು ಗಜೇಂದ್ರ ಸಿಂಗ್ ಅವರಿದ್ದ ಪೀಠ ವಿವರಿಸಿದೆ.

ನಿಷೇಧದಿಂದಾಗಿ ಆರ್‌ಎಸ್‌ಎಸ್‌ ಮೂಲಕ ದೇಶಕ್ಕೆ ಸೇವೆ ಸಲ್ಲಿಸುವ ಅನೇಕ ಕೇಂದ್ರ ಸರ್ಕಾರಿ ನೌಕರರ ಆಕಾಂಕ್ಷೆಗಳು ಈ ಐದು ದಶಕಗಳಲ್ಲಿ ಕ್ಷೀಣವಾಯಿತು. ಪ್ರಸ್ತುತ ಪ್ರಕ್ರಿಯೆ ಮೂಲಕ ನ್ಯಾಯಾಲಯದ ಗಮನಕ್ಕೆ ತಂದ ಬಳಿಕವಷ್ಟೇ ನಿರ್ಬಂಧ ತೆಗೆದುಹಾಕಲಾಯಿತು ಎಂದು ನ್ಯಾಯಾಲಯ ಹೇಳಿದೆ.

ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಕೋಮು ಭಾವನೆಗಳು ಮತ್ತು ಕೋಮುವಾದಿ ಪಕ್ಷಪಾತ ಉಂಟಾಗುತ್ತದೆ ಎಂಬುದಕ್ಕೆ ಇರುವ ಆಧಾರವನ್ನು ನ್ಯಾಯಾಲಯ ತನ್ನ ಆದೇಶದಲ್ಲಿ ಪ್ರಶ್ನಿಸಿದೆ.

ಆರ್‌ಎಸ್‌ಎಸ್‌ ಸರ್ಕಾರಿ ಅಧಿಕಾರಶಾಹಿಯಾಚೆಗೆ ಸ್ಥಾಪಿತವಾದ ಸ್ವಾಯತ್ತ ಸ್ವಯಂ ಸೇವಾ ಸಂಸ್ಥೆಯಾಗಿದ್ದು ಅದು ಮತ್ತು ಅದರ ಅಂಗಸಂಸ್ಥೆಗಳ ಚಟುವಟಿಕೆಗಳು ಸಕ್ರಿಯ ರಾಜಕೀಯದೊಂದಿಗೆ ಯಾವುದೇ ನಂಟು ಹೊಂದಿಲ್ಲ ಎಂದು ನ್ಯಾಯಾಲಯ ನುಡಿದಿದೆ.

ಕಾರ್ಯಾಂಗದ ಆದೇಶ ಮೂಲಕ ನಿಷೇಧ ವಿಧಿಸದೆ ಕಾಯಿದೆ ಮೂಲಕ ನಿರ್ಬಂಧಿಸಬೇಕಿತ್ತು. ಎಲ್ಲಾ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಕೋಮುವಾದಿ, ಜಾತ್ಯತೀತ ವಿರೋಧಿ ಮತ್ತು ರಾಷ್ಟ್ರೀಯ ಹಿತಾಸಕ್ತಿ ವಿರುದ್ಧ ಎಂದು ಹಣೆಪಟ್ಟಿ ಹಚ್ಚುವ ಸುತ್ತೋಲೆ ಹೊರಡಿಸುವುದು ಸಂಘ ಮತ್ತು ಸಮುದಾಯ ಸೇವೆಗಾಗಿ ಅದನ್ನು ಸೇರಲು ಬಯಸುವವರ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತದೆ ಎಂದು ನ್ಯಾಯಾಲಯ ವಿವರಿಸಿದೆ. ಆರ್‌ಎಸ್‌ಎಸ್‌ ನಿರ್ಬಂಧ ತೆರವಿಗೆ ಕೇಂದ್ರ ಪ್ರಸ್ತುತ ನಿರ್ಧರಿಸಿದ್ದರೂ ಮತ್ತೆ ನಿರ್ಬಂಧ ವಿಧಿಸಲಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅದು ಹೇಳಿದೆ.

ನಿಷೇಧ ತೆರವುಗೊಳಿಸಿ ಕೇಂದ್ರ ಹೊರಡಿಸಿರುವ ಸುತ್ತೋಲೆ ಕುರಿತಂತೆ ಜಾಗೃತಿ ಮೂಡಿಸಲು ತಮ್ಮ ಅಧಿಕೃತ ಜಾಲತಾಣಗಳ ಮುಖ್ಯ ಪುಟದಲ್ಲಿ ಸುತ್ತೊಲೆಯನ್ನು ಪ್ರಕಟಿಸುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಆದೇಶಿಸಿದ ಹೈಕೋರ್ಟ್‌ ಅರ್ಜಿಯನ್ನು ಇತ್ಯರ್ಥಗೊಳಿಸಿತು.

ಹಿನ್ನೆಲೆ

ಕೇಂದ್ರ ಸರ್ಕಾರ  1966, 1970 ಹಾಗೂ 1980ರಲ್ಲಿ ಹೊರಡಿಸಿದ ಮೂರು ಕಚೇರಿ ಜ್ಞಾಪನಾ ಪತ್ರಗಳನ್ನು ಪ್ರಶ್ನಿಸಿ ಇಂದೋರ್‌ನ ನಿವೃತ್ತ ಕೇಂದ್ರ ಸರ್ಕಾರಿ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.  ಅವರು ಕೇಂದ್ರ ನಾಗರಿಕ ಸೇವಾ (ನಡತೆ) ನಿಯಮಾವಳಿ 1964 ರ ನಿಯಮ 5 ಸೇರಿದಂತೆ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿದ್ದರು.

ಯಾವುದೇ ಸರ್ಕಾರಿ ನೌಕರ ರಾಜಕೀಯ ಪಕ್ಷ ಅಥವಾ ಇನ್ನಾವುದೇ ಸಂಘಟನೆಯ ಸದಸ್ಯನಾಗಿರಬಾರದು ಅಥವಾ ನಂಟು ಹೊಂದಿರಬಾರದು ಅಥವಾ ಯಾವುದೇ ರಾಜಕೀಯ ಚಳವಳಿಯಲ್ಲಿ ಭಾಗವಹಿಸಬಾರದು. ಚಂದಾದಾರರಾಗಬಾರದು ಅಥವಾ ಇನ್ನಾವುದೇ ರೀತಿಯ ಸಹಾಯ ನೀಡಬಾರದು ಎಂದು ನಿಯಮಾವಳಿಗಳಲ್ಲಿ ಉಲ್ಲೇಖಿಸಲಾಗಿತ್ತು.

ಸರ್ಕಾರಿ ನೌಕರರು ಜಾತ್ಯತೀತ ನಿಲವು ಹೊಂದಿರಬೇಕು ಮತ್ತು ಕೋಮು ಭಾವನೆ ಮತ್ತು ಪಕ್ಷಪಾತಹೋಗಲಾಡಿಸುವುದಕ್ಕಾಗಿ ಆರ್‌ಎಸ್‌ಎಸ್‌, ಜಮಾತ್‌- ಎ- ಇಸ್ಲಾಮಿಯಾ ರೀತಿಯ ಸಂಘಟನೆಗಳಲ್ಲಿ ತೊಡಗದಂತೆ ನಿರ್ಬಂಧ ವಿಧಿಸಿತ್ತು.

ನ್ಯಾಯಾಲಯದ ಪ್ರಕ್ರಿಯೆಗಳು ಪ್ರಾರಂಭವಾದ ನಂತರ, ಕೇಂದ್ರ ಸರ್ಕಾರ ಜುಲೈ 9 ರಂದು ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಇದ್ದ ನಿಷೇಧವನ್ನು ತೆಗೆದುಹಾಕಿತ್ತು. ಈ ಅಧಿಸೂಚನೆಯನ್ನು ಬಹಿರಂಗಪಡಿಸುವ ಅಫಿಡವಿಟನ್ನು ಕೇಂದ್ರ ಸರ್ಕಾರ ಜುಲೈ 11ರಂದು ನ್ಯಾಯಾಲಯಕ್ಕೆ ಸಲ್ಲಿಸಿತ್ತು.