ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಹಾಗೂ ವಿವಿಧ ಮಾಧ್ಯಮ ಸಂಸ್ಥೆಗಳು ಅವಹೇಳನಕಾರಿ ವಿಚಾರ ಪ್ರಕಟಿಸದಂತೆ ಇಲ್ಲವೇ ಪ್ರಸಾರ ಮಾಡದಂತೆ ತಡೆಯಲು ಕೋರಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇಬ್ಬರೂ ಮಾಡಿರುವ ಆರೋಪಗಳು ಆಧಾರಹಿತ ಮತ್ತು ಮಾನಹಾನಿಕರವಾಗಿವೆ. ಅಲ್ಲದೆ, ಇದರಿಂದಾಗಿ ತನ್ನ ಘನತೆ, ಖ್ಯಾತಿ, ಗೌರವ ಹಾಗೂ ಜನರು ತನ್ನ ಬಗ್ಗೆ ಹೊಂದಿರುವ ಸದ್ಭಾವನೆಗೆ ಗಂಭೀರ ಧಕ್ಕೆ ಒದಗಿದೆ ಎಂದು ತಿಳಿಸಿರುವ ಮಹುವಾ ಅವರು ಪ್ರತಿವಾದಿಗಳ ಹೇಳಿಕೆಗಳಿಗೆ ತಡೆಯಾಜ್ಞೆ ನೀಡಬೇಕು ಅಲ್ಲದೆ ತಮಗಾದ ನಷ್ಟಕ್ಕೆ ₹ 2 ಕೋಟಿ ಪರಿಹಾರ ದೊರಕಿಸಿಕೊಡಬೇಕು ಎಂದು ಕೋರಿದ್ದಾರೆ.
ಮೊಯಿತ್ರಾ ಅವರು ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆಯಲ್ಲಿ ಎತ್ತಿದ ಐದು ಆಧಾರಗಳು ಇಲ್ಲಿವೆ:
ಆರೋಪಗಳು ಆಧಾರರಹಿತ ಮತ್ತು ತನ್ನ ಎದುರಾಳಿಗಳ ಸಮೃದ್ಧ ಕಲ್ಪನೆಯ ಫಲ. ವಿಶ್ವಾಸಾರ್ಹ ಪತ್ರಕರ್ತರು ಆರೋಪಗಳನ್ನು, ವಾಸ್ತವಾಂಶಗಳನ್ನು ಪರಿಶೀಲಿಸಿ ಬೆಂಬಲ ನೀಡದೆ ಇದ್ದುದರಿಂದ ಕಡೆಗೆ ವಕೀಲ ದೆಹ್ರದಾಯ್, ಸಂಸದ ದುಬೆ ಅವರನ್ನು ಸಂಪರ್ಕಿಸಿದ್ದಾರೆ;
ದುಬೆ ಮತ್ತು ತನ್ನ ನಡುವೆ ಹಲವು ಬಾರಿ ಸಂಘರ್ಷ ಏರ್ಪಡ್ಡಿದ್ದು ಅವರ ಆರೋಪಗಳು ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಪ್ರತೀಕಾರದ ಒಟ್ಟು ಮೊತ್ತವಾಗಿವೆ;
ಆರೋಪಗಳ ಸತ್ಯಾಸತ್ಯತೆ ಸಾಬೀತುಪಡಿಸಲು ದುಬೆ ಯಾವುದೇ ಶ್ರಮವಹಿಸಿಲ್ಲ. ರಾಜಕೀಯ ಲಾಭ ಪಡೆಯಲು ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ದುಬೆ ಉತ್ಪ್ರೇಕ್ಷೆಯಿಂದ ಆರೋಪಕ್ಕೆ ಮರುಜೀವ ನೀಡಿದ್ದಾರೆ.
ನನ್ನ ಖಾಸಗಿ ಛಾಯಾಚಿತ್ರಗಳನ್ನು ದುಬೆ ಖುದ್ದು ತಿರುಚಿ ಸೋರಿಕೆ ಮಾಡಿದ್ದಾರೆ. ಈ ಫೋಟೋಗಳನ್ನು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಮಹಿಳೆ ಹಾಗೂ ಪ್ರಮುಖ ಸಾರ್ವಜನಿಕ ವ್ಯಕ್ತಿಯಾಗಿರುವ ತನ್ನ ಪ್ರತಿಷ್ಠೆ ಮತ್ತು ಘನತೆಗೆ ಧಕ್ಕೆ ತರುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸುದ್ದಿ ಸಂಸ್ಥೆಗಳು ನನ್ನ ಕುರಿತ ವಸ್ತು ವಿಷಯವನ್ನು ಪ್ರಸಾರ ಮಾಡುತ್ತಿದ್ದು ಅವು ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳಿಂದ ಕೂಡಿವೆ.
ಮೊಯಿತ್ರಾ ಅವರ ಮೊಕದ್ದಮೆಯನ್ನು ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಶುಕ್ರವಾರ (ಅಕ್ಟೋಬರ್ 20) ವಿಚಾರಣೆ ನಡೆಸುವ ಸಾಧ್ಯತೆ ಇದೆ.