Transgender persons 
ಸುದ್ದಿಗಳು

ತೃತೀಯ ಲಿಂಗಿ ಕೈದಿಗಳಿಗೆ ಪ್ರತ್ಯೇಕ ಜೈಲು ಕೋಣೆ: ಕೇಂದ್ರದ ಮಾರ್ಗಸೂಚಿ ತಪ್ಪದೆ ಪಾಲಿಸಲು ಸೂಚಿಸಿದ ಪಾಟ್ನಾ ಹೈಕೋರ್ಟ್

ಕಾನೂನು ಸಂಘರ್ಷ ಎದುರಿಸುತ್ತಿರುವ ತೃತೀಯ ಲಿಂಗಿಗಳ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಕೆಲವು ಕ್ರಮಗಳನ್ನು ತೆಗೆದುಕೊಂಡಿರುವುದನ್ನು ಹೈಕೋರ್ಟ್ ಗಮನಿಸಿತು.

Bar & Bench

ಜೈಲುವಾಸ ಅನುಭವಿಸುತ್ತಿರುವ ತೃತೀಯ ಲಿಂಗಿಗಳನ್ನು ಪುರುಷ ಅಥವಾ ಮಹಿಳೆಯರ ಕೋಣೆಗಳಲ್ಲಿ ಇರಿಸದೆ ಅವರಿಗಾಗಿ ಪ್ರತ್ಯೇಕ ಕೋಣೆಗಳನ್ನು ಮೀಸಲಿಡಲು ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸಲಾಗಿದೆಯೇ ಎಂಬದನ್ನು ಖಾತ್ರಿಪಡಿಸುವಂತೆ ಪಾಟ್ನಾ ಹೈಕೋರ್ಟ್ ಇತ್ತೀಚೆಗೆ ಬಿಹಾರ ಸರ್ಕಾರಕ್ಕೆ ಸೂಚಿಸಿದೆ [ಲಾ ಫೌಂಡೇಷನ್‌ ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣ]

ಜೈಲುಗಳಲ್ಲಿ ಬಂಧಿಯಾಗಿರುವ ತೃತೀಯ ಲಿಂಗಿ ವ್ಯಕ್ತಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರ ಕೆಲವು ಕ್ರಮಗಳನ್ನು ತೆಗೆದುಕೊಂಡಿರುವುದನ್ನು ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎಸ್ ಕುಮಾರ್ ಅವರಿದ್ದ  ಪೀಠ ಗಮನಿಸಿತು.

ನ್ಯಾಯಾಂಗ ಬಂಧನ ಅಥವಾ ಪೊಲೀಸ್‌ ವಶದಲ್ಲಿರುವಾಗ ತೃತೀಯ ಲಿಂಗಿ ಕೈದಿಗಳಿಗೆ ಪ್ರತ್ಯೇಕ ಜೈಲು ಕೋಣೆಗಳು, ವಾರ್ಡ್‌ಗಳು: ಅಥವಾ ಆಸ್ಪತ್ರೆಗಳು ಮತ್ತು ಲಾಕಪ್‌ಗಳನ್ನ ಒದಗಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಲು ರಾಜ್ಯ ಜೈಲು ಅಧಿಕಾರಿಗಳು ಮತ್ತು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಮನವಿಗೆ ಸಂಬಂಧಿಸಿದಂತೆ ಸರ್ಕಾರ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು  ಹೆಚ್ಚಿನ ಆದೇಶಗಳನ್ನು ನೀಡುವ ಅಗತ್ಯವಿಲ್ಲ ಎಂದು ಪೀಠವು ಹೇಳಿತು. ಆದರೂ, ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳದ ಯಾವುದೇ ಅಹವಾಲು ಅಥವಾ ಸಮಸ್ಯೆ ಇದ್ದರೆ ಅದನ್ನು ಪ್ರಸ್ತಾಪಿಸಲು ಅರ್ಜಿ ಸಲ್ಲಿಸಿರುವ ಸರ್ಕಾರೇತರ ಸಂಸ್ಥೆ ಮುಕ್ತವಾಗಿದೆ ಎಂದು ತಿಳಿಸಿದ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು.