High Court of Karnataka 
ಸುದ್ದಿಗಳು

ಪಾದಚಾರಿ ಮಾರ್ಗದಲ್ಲಿ 1,155 ಟ್ರಾನ್ಸ್‌ಫಾರ್ಮರ್‌ ಪರಿವರ್ತನೆ: ಹೈಕೋರ್ಟ್‌ಗೆ ಬೆಸ್ಕಾಂ ವಿವರಣೆ

ಬೆಸ್ಕಾಂನ ಮುಖ್ಯ ಪ್ರಧಾನ ವ್ಯವಸ್ಥಾಪಕ (ಯೋಜನೆಗಳು) ಗೋಪಾಲ್ ಸಾಲಿಯಾನ್ ಅವರು ಸಲ್ಲಿಸಿದ್ದ ಅಫಿಡವಿಟ್‌ ಅನ್ನು ಬೆಸ್ಕಾಂ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.

Bar & Bench

ಬೆಂಗಳೂರು ನಗರದ ಪಾದಚಾರಿ ಮಾರ್ಗಗಳ ಮೇಲಿದ್ದ ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಈಗಾಗಲೇ 1,155 ಟ್ರಾನ್ಸ್‌ಫಾರ್ಮರ್‌ಗಳನ್ನು ಹೊಸ ಸ್ಪನ್ ಪೋಲ್ ರಚನೆಗೆ (ನೆಲಮಟ್ಟದಿಂದ ಎತ್ತರಿಸಿದ) ಪರಿವರ್ತಿಸಲಾಗಿದೆ. ಉಳಿದ 1,433 ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ನಿಗಮವು (ಬೆಸ್ಕಾಂ) ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಫುಟ್‌ಪಾತ್‌ಗಳು ಹಾಗೂ ರಾಜಕಾಲುವೆಗಳ ಮೇಲೆ ಅಳವಡಿಸಲಾಗಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ ಬಿ ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಬೆಸ್ಕಾಂನ ಮುಖ್ಯ ಪ್ರಧಾನ ವ್ಯವಸ್ಥಾಪಕ (ಯೋಜನೆಗಳು) ಗೋಪಾಲ್ ಸಾಲಿಯಾನ್ ಅವರು ಸಲ್ಲಿಸಿದ್ದ ಅಫಿಡವಿಟ್‌ ಅನ್ನು ಬೆಸ್ಕಾಂ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು. ನಗರದಲ್ಲಿ ಪಾದಚಾರಿ ಮಾರ್ಗಗಳ ಮೇಲಿದ್ದ ಒಟ್ಟು 5,784 ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸುವ ಅಥವಾ ಅವುಗಳನ್ನು ನೆಲಮಟ್ಟದಿಂದ ಎತ್ತರಿಸುವ ಅಗತ್ಯವಿತ್ತು. ಈ ಕಾರ್ಯವನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗಿದ್ದು, ಮೊದಲ ಹಂತದಲ್ಲಿ 3,194 ಟ್ರಾನ್ಸ್‌ಫಾರ್ಮರ್‌ಗಳನ್ನು ಹೊಸ ಸ್ಪನ್ ಪೋಲ್ ರಚನೆಯ ಮೂಲಕ ಎತ್ತರಿಸಲಾಗಿದೆ. ಎರಡು ಟ್ರಾನ್ಸ್‌ಫಾರ್ಮರ್‌ಗಳನ್ನು ಅನುಕೂಲಕರ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮೊದಲ ಹಂತದ ಕೆಲಸಗಳು ಪೂರ್ಣಗೊಂಡಿವೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಎರಡನೇ ಹಂತದಲ್ಲಿ 2,588 ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ಈಗಾಗಲೇ 1,155 ಟ್ರಾನ್ಸ್‌ಫಾರ್ಮರ್‌ಗಳನ್ನು ಎತ್ತರಿಸಲಾಗಿದೆ. ಉಳಿದ 1,433 ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 2023ರ ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ. ಇದನ್ನು ದಾಖಲಿಸಿಕೊಂಡ ಪೀಠವು ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಕಾರ್ಯ ಮುಂದುವರಿಸಿ, ಮುಂದಿನ ವಿಚಾರಣೆ ವೇಳೆ ಪ್ರಗತಿ ವರದಿ ಸಲ್ಲಿಸುವಂತೆ ಬೆಸ್ಕಾಂ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಡಿಸೆಂಬರ್‌ 9ಕ್ಕೆ ಮುಂದೂಡಿತು.