ಸುದ್ದಿಗಳು

ಮೂರು ವರ್ಷದೊಳಗಿನ ಮಕ್ಕಳನ್ನು ಪ್ರಿಸ್ಕೂಲ್‌ಗೆ ಹೋಗುವಂತೆ ಒತ್ತಾಯಿಸುವುದು ಕಾನೂನುಬಾಹಿರ: ಗುಜರಾತ್ ಹೈಕೋರ್ಟ್

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ (2023-24) 6 ವರ್ಷ ವಯಸ್ಸಿನ ಮಕ್ಕಳನ್ನು 1ನೇ ತರಗತಿಗೆ ಸೇರ್ಪಡೆ ಮಾಡಿಕೊಳ್ಳುವುದನ್ನು ನಿಷೇಧಿಸಿ ಗುಜರಾತ್ ಸರ್ಕಾರ ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

Bar & Bench

ಪ್ರಸ್ತುತ ಶೈಕ್ಷಣಿಕ ವರ್ಷದಿಂದ (2023-24) 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿದ್ದ ಅರ್ಜಿಗಳನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ಶುಭ್ರಾ ಹಿತೇಶ್‌ಭಾಯ್ ಗುಪ್ತಾ ವಿರುದ್ಧ ಗುಜರಾತ್ ಸರ್ಕಾರ ನಡುವಣ ಪ್ರಕರಣ].

ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ ಕಾಯಿದೆ) ಮತ್ತು ಸಂವಿಧಾನದ 21 ಎ ವಿಧಿ ಅಡಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಮಗುವಿಗೆ 6 ವರ್ಷ ತುಂಬಿದ ನಂತರ ಮಾತ್ರ ಲಭ್ಯವಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್ ಮತ್ತು ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರಿದ್ದ ಪೀಠ ತಿಳಿಸಿತು.

"ಸಂವಿಧಾನದ 21ಎ ಮತ್ತು ಆರ್‌ಟಿಇ ಕಾಯಿದೆ-2009ರ ಸಾಂವಿಧಾನಿಕ ನಿಬಂಧನೆ ಪ್ರಕಾರ ಮಗುವಿಗೆ ನೀಡಲಾದ ಹಕ್ಕು 6 ವರ್ಷಗಳು ಪೂರ್ಣಗೊಂಡ ನಂತರ ಪ್ರಾರಂಭವಾಗುತ್ತದೆ. ಆರ್‌ಟಿಇ ಕಾಯಿದೆ- 2009ರ ವಿವಿಧ ನಿಬಂಧನೆಗಳನ್ನು ಸಂಯೋಜಿಸಿ ಓದಿದಾಗ ಔಪಚಾರಿಕ ಶಾಲೆಯಲ್ಲಿ 6 ವರ್ಷಗಳನ್ನು ಮೀರಿದ ಮಗುವಿಗೆ ಶಿಕ್ಷಣ ನಿರಾಕರಿಸುವಂತಿಲ್ಲ ಮತ್ತು ಆರ್‌ಟಿಇ ಕಾಯಿದೆ ಅಡಿಯಲ್ಲಿ 'ಮಗು' ಎಂಬ ವ್ಯಾಖ್ಯಾನದೊಳಗೆ ಬರುವ ಅಂತಹ ಮಗುವು ಯಾವುದೇ ಅಡೆತಡೆಯಿಲ್ಲದೆ ತನ್ನ ಪ್ರಾಥಮಿಕ ಶಿಕ್ಷಣ  ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿರಬೇಕು" ಎಂದು ತೀರ್ಪು ಹೇಳಿದೆ.

ಆದ್ದರಿಂದ, ತಮ್ಮ ಮಕ್ಕಳು ಈಗಾಗಲೇ  ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವುದರಿಂದ 1ನೇ ತರಗತಿಗೆ ಮುಂಚಿತವಾಗಿ ಪ್ರವೇಶಾತಿಗೆ ಅನುಮತಿಸಬೇಕು ಎಂದು ಅರ್ಜಿ ಸಲ್ಲಿಸಿದ್ದ ವಿವಿಧ ಪೋಷಕರ ವಾದವನ್ನು ನ್ಯಾಯಾಲಯವು ತಿರಸ್ಕರಿಸಿತು.

“3 ವರ್ಷದೊಳಗಿನ ಮಕ್ಕಳನ್ನು ಪ್ರಿಸ್ಕೂಲ್‌ಗೆ ಹೋಗುವಂತೆ ಒತ್ತಾಯಿಸುವುದು ನಮ್ಮ ಮುಂದೆ  ಮನವಿ ಸಲ್ಲಿಸಿರುವ ಪೋಷಕರ ಕಾನೂನುಬಾಹಿರ ಕ್ರಮವಾಗುತ್ತದೆ. 2020-21ರ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದಿರುವುದರಿಂದ ತಮ್ಮ ಮಕ್ಕಳು 3 ವರ್ಷಗಳ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದು ಶಾಲೆಗೆ ತೆರಳಲು ಸಿದ್ಧರಾಗಿದ್ದಾರೆ ಎಂಬ ವಾದ ಯಾವುದೇ ಕಾರಣಕ್ಕೂ ನಮ್ಮನ್ನು ಮೆಚ್ಚಿಸುವುದಿಲ್ಲ“ ಎಂದು ನ್ಯಾಯಾಲಯ ನುಡಿದಿದೆ.

ಹೀಗಾಗಿ ಸರ್ಕಾರದ ಅಧಿಸೂಚನೆಯನ್ನು ಎತ್ತಿಹಿಡಿದ ನ್ಯಾಯಾಲಯ ಇದನ್ನು ಅನಿಯಂತ್ರಿತ ಎಂದು ಪರಿಗಣಿಸಬಾರದು ಎಂದು ಅಭಿಪ್ರಾಯಪಟ್ಟಿದೆ.