X corp and Karnataka High Court 
ಸುದ್ದಿಗಳು

ವಿದೇಶಿ ಸಂಸ್ಥೆಗಳು ವಾಕ್ ಸ್ವಾತಂತ್ರ್ಯದ ಹಕ್ಕು ಪಡೆಯುವಂತಿಲ್ಲ: ಎಕ್ಸ್ ಕಾರ್ಪ್ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್

ಸಂವಿಧಾನದ 19(1)(ಎ) ವಿಧಿಯಡಿ ವಾಕ್ ಸ್ವಾತಂತ್ರ್ಯ ಸಮಂಜಸ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ತೀರ್ಪು ಪುನರುಚ್ಚರಿಸಿದೆ.

Bar & Bench

-

ಮಾಹಿತಿ ನಿರ್ಬಂಧ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಆದೇಶಿಸಲು ಕೇಂದ್ರ ಸರ್ಕಾರವು ಸಹಯೋಗ್ ಪೋರ್ಟಲ್ ಆರಂಭಿಸಿರುವುದನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ವಾರ ವಜಾಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಸಂವಿಧಾನದ 19 ನೇ ವಿಧಿಯಡಿ ವಿದೇಶಿ ಕಂಪನಿಗಳು ಮೂಲಭೂತ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಲು ಸಾಧ್ಯವಿಲ್ಲ ಎಂದಿದೆ. [ಎಕ್ಸ್ಕಾರ್ಪ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]

ಆ ರೀತಿಯ ಹಕ್ಕುಗಳು ಭಾರತದ ನಾಗರಿಕರಿಗೆ ಮಾತ್ರ ಮೀಸಲಾಗಿದ್ದುಎಕ್ಸ್ ಕಾರ್ಪ್ ರೀತಿಯ ಮಧ್ಯಸ್ಥ ಸಂಸ್ಥೆಗಳು ದೇಶದಲ್ಲಿ ಕಾರ್ಯನಿರ್ವಹಿಸಲು ಬಯಸಿದರೆ ಕಾನೂನು ಪಾಲಿಸಬೇಕು ಎಂದು ನ್ಯಾಯಮೂರ್ತಿ *ಎಂ ನಾಗಪ್ರಸನ್ನ* ತೀರ್ಪು ನೀಡಿದ್ದಾರೆ.

" ಭಾರತದಲ್ಲಿ ನೆಲೆ ಇಲ್ಲದ ಕಂಪನಿ ಆಧಾರರಹಿತ ಆರೋಪಗಳನ್ನು ನೆಚ್ಚಿಕೊಂಡು ದೇಶದ ಕಾನೂನುಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಇದು ಪರಸ್ಪರ ಸಂಬಂಧ ಹೊಂದಿದೆ, ಏಕೆಂದರೆ ಅಮೆರಿಕದಲ್ಲಿ ಯಾವುದೇ ನೆಲೆ ಇಲ್ಲದ ಸಂಸ್ಥೆ ಅಮೆರಿಕದ ಕೋರ್ಟ್ನಲ್ಲಿ ಅಮೆರಿಕದ ಕಾನೂನುಗಳನ್ನು ಸವಾಲು ಹಾಕಬಹುದು ಎಂದು ಕಲ್ಪಿಸುವುದು ಅಸಾಧ್ಯ. ಅದೇ ರೀತಿ ದೇಶದಲ್ಲಿ ನೆಲೆ ಇಲ್ಲದ ಸ್ಥಿತಿಯಲ್ಲಿ, ಮಧ್ಯಸ್ಥಗಾರನ ಪಾತ್ರ ನಿರ್ವಹಿಸುತ್ತಿರುವ ಎಕ್ಸ್ ಕಾರ್ಪ್ ಸಂವಿಧಾನದ 19ನೇ ವಿಧಿಯಡಿ ಕಾನೂನು ಪ್ರಶ್ನಿಸಲು ಸಾಧ್ಯವಿಲ್ಲ. ಇಲ್ಲಿ ಅದರ ಅಸ್ತಿತ್ವ ಇಲ್ಲ. ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸುವ ಕಾನೂನುಗಳಿಗೆ ಅದು ಸವಾಲು ಹಾಕಲು ಸಾಧ್ಯವಿಲ್ಲ. ಅದು ದೇಶದಲ್ಲಿ ಕಾರ್ಯನಿರ್ವಹಿಸಲು ಬಯಸಿದರೆ, ಅದು ಸರಳವಾಗಿ ಇಲ್ಲಿನ ಕಾನೂನುಗಳಿಗೆ ಬದ್ಧವಾಗಿರಬೇಕು” ಎಂದು ನ್ಯಾಯಾಲಯ ನುಡಿಯಿತು.

ಮಾಹಿತಿ ತಂತ್ರಜ್ಞಾನ ಕಾಯಿದೆ- 2000ರ ಸೆಕ್ಷನ್ 79(3)(ಬಿ) ಅಡಿಯಲ್ಲಿ ಮಾಹಿತಿ ನಿರ್ಬಂಧಿಸುವ ಆದೇಶಗಳನ್ನು ಹೊರಡಿಸಲು ಸಹಯೋಗ್ ಪೋರ್ಟಲ್ ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಐಟಿ ಕಾಯಿದೆಯ ಸೆಕ್ಷನ್ 69ಎ ಮತ್ತು ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಕಡ್ಡಾಯಗೊಳಿಸಲಾದ ಮಾರ್ಗಸೂಚಿ ಪಾಲಿಸಲು ಅಡ್ಡಿಯಾಗುತ್ತದೆ ಎಂದು ವಾದಿಸಿ ಎಕ್ಸ್ ಕಾರ್ಪ್ ನ್ಯಾಯಾಲಯದ ಮೆಟ್ಟಿಲೇರಿತ್ತು.

ನವದೆಹಲಿ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತದ ಬಗ್ಗೆ ಪ್ರಕಟವಾದ ಟ್ವೀಟ್ಗಳನ್ನು ತೆಗೆಯುವಂತೆ ರೈಲ್ವೆ ಸಚಿವಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿತ್ತು.

ಹೀಗಾಗಿ, ಸೆಕ್ಷನ್ 79(3)(b) ಮಾಹಿತಿ ನಿರ್ಬಂಧ ಆದೇಶ ಮಾಡಲು ಸರ್ಕಾರಕ್ಕೆ ಅವಕಾಶವಿಲ್ಲ. ಇದು ವಿಶೇಷವಾಗಿ ಸೆಕ್ಷನ್ 69Aರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಆದೇಶಿಸಬೇಕು ಎಂದು ಎಕ್ಸ್ ಕೋರಿತ್ತು.

ತೀರ್ಪಿನ ಮೂಲಕ ನ್ಯಾಯಾಲಯ ನಿಸ್ಸಂದಿಗ್ಧವಾಗಿ 19ನೇ ವಿಧಿಯಡಿ ಒದಗಿಸಲಾದ ಹಕ್ಕುಗಳನ್ನು ವಿದೇಶಿಯರಿಗೆ ನೀಡಲಾಗದು ಎಂದಿದೆ.

19ನೇ ವಿಧಿಯ ಮೂಲಕ ದೇಶದ ಕಾನೂನನ್ನು ಪ್ರಶ್ನಿಸಲು ಯತ್ನಿಸುವುದನ್ನು ಸಹಿಸಲಾಗದು ಎಂದಿರುವ ತೀರ್ಪು ಸಂವಿಧಾನದ 19(1)(ಎ) ವಿಧಿಯಡಿ ವಾಕ್ ಸ್ವಾತಂತ್ರ್ಯ ಸಮಂಜಸ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂಬುದಾಗಿ ಪುನರುಚ್ಚರಿಸಿದೆ.

ಅಲ್ಲದೆ ಯಾವುದೇ ಮಾಧ್ಯಮ ಕಾನೂನು ವ್ಯಾಪ್ತಿಯಿಂದ ಹೊರಗೆ ಇರುವಂತಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಶ್ರೇಯಾ ಸಿಂಘಾಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79ನ್ನು ರದ್ದುಗೊಳಿಸಿ ಸೆಕ್ಷನ್ 69 ಎ ಎತ್ತಿಹಿಡಿದಿದ್ದರೂ, ನಿಯಂತ್ರಕ ವ್ಯವಸ್ಥೆ ಸಾಂವಿಧಾನಿಕ ಮಿತಿಗಳಿಗೆ ಅನುಗುಣವಾಗಿ ಆದೇಶಗಳನ್ನು ನಿರ್ಬಂಧಿಸಲು ಸ್ಪಷ್ಟ ಮಾರ್ಗಗಳನ್ನು ಒದಗಿಸುತ್ತದೆ ಎಂದು ನ್ಯಾಯಪೀಠ ಹೇಳಿತು.

ಅನಾದಿ ಕಾಲದಿಂದಲೂ ಮಾಹಿತಿ ಮತ್ತು ಸಂಹವನವು ನಿಯಂತ್ರಣಕ್ಕೆ ಒಳಪಟ್ಟಿದ್ದು, ಮಾಹಿತಿದಾರರಿಂದ ಅಂಚೆ ಕಾಲದವರಿಗೆ, ಈಗ ವಾಟ್ಸಾಪ್, ಇನ್ಸ್ಟಾಗ್ರಾಂ ಮತ್ತು ಸ್ನ್ಯಾಪ್ಚಾಟ್ ಎಲ್ಲವೂ ಸ್ಥಳೀಯ ಮತ್ತು ಜಾಗತಿಕವಾಗಿ ನಿಯಂತ್ರಣಕ್ಕೆ ಒಳಪಟ್ಟಿವೆ ಎಂದಿತು.

ಅಮೆರಿಕದ ಕಾನೂನನ್ನು ಪರಿಶೀಲಿಸಿದ ನ್ಯಾಯಾಲಯ ಎಕ್ಸ್ ಕಾರ್ಪ್ನ ಅನಿಯಂತ್ರಿತ ವಾಕ್ ಸ್ವಾತಂತ್ರ್ಯದ ಪರವಾದ ವಾದ ತಪ್ಪಾಗಿದೆ ಎಂದು ಅದು ಹೇಳಿತು.