ವಿದೇಶದಲ್ಲಿ ವ್ಯಾಸಂಗ ಮಾಡಿದ ವೈದ್ಯಕೀಯ ವಿದ್ಯಾರ್ಥಿಗಳು ಪ್ರಾಯೋಗಿಕ ಕ್ಲಿನಿಕಲ್ ತರಬೇತಿ ಹೊಂದದ ಹೊರತು ಭಾರತದಲ್ಲಿ ಪ್ರಾಕ್ಟೀಸ್ ಮಾಡಲು ತಾತ್ಕಾಲಿಕ ನೋಂದಣಿ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ [ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಪೂಜಾ ಥಂಡು ನರೇಶ್ ಇನ್ನಿತರರು].
ಕ್ಲಿನಿಕಲ್ ತರಬೇತಿಯಿಲ್ಲದೆ ಅಂತಹ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೋಂದಣಿ ನೀಡುವುದಿಲ್ಲ ಎಂಬ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಿರ್ಧಾರ ಏಕಪಕ್ಷೀಯವಲ್ಲ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
"... ಪ್ರಾಯೋಗಿಕ ತರಬೇತಿಯಿಲ್ಲದೆ, ಯಾವುದೇ ವೈದ್ಯರು ದೇಶದ ನಾಗರಿಕರ ಕಾಳಜಿ ಮಾಡಲು ಸಾಧ್ಯವಿಲ್ಲ" ಎಂದು ತೀರ್ಪು ಹೇಳಿದೆ.
ಇದೇ ವೇಳೆ, ವಿದೇಶಿ ಸಂಸ್ಥೆಗಳಿಂದ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು "ರಾಷ್ಟ್ರೀಯ ಸಂಪನ್ಮೂಲ"ವಾಗಿದ್ದು ಅವರನ್ನು ರಾಷ್ಟ್ರೀಯ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಬಳಸಿಕೊಳ್ಳಬೇಕು ಎಂದು ಪೀಠ ತಿಳಿಸಿದೆ. ಈ ನಿಟ್ಟಿನಲ್ಲಿ ಇಂತಹ ವಿದ್ಯಾರ್ಥಿಗಳು ರಾಷ್ಟ್ರೀಯ ವೈದ್ಯಕೀಯ ಆಯೋಗ ಗುರುತಿಸಿರುವ ಸಂಸ್ಥೆಗಳಲ್ಲಿ ಕ್ಲಿನಿಕಲ್ ತರಬೇತಿಯನ್ನು ಪಡೆಯಬೇಕು ಎಂದು ಹೇಳಿದೆ.
ಚೀನಾದಲ್ಲಿ ವೈದ್ಯಕೀಯ ಕೋರ್ಸ್ ಕಲಿತ ವಿದ್ಯಾರ್ಥಿಗಳು ಇಲ್ಲಿ ತಾತ್ಕಾಲಿಕ ನೋಂದಣಿ ಮಾಡಿಸಿಕೊಂಡು ನಂತರ ಇಂಟರ್ನ್‌ಶಿಪ್ ಮಾಡಲು ಅವಕಾಶ ಕಲ್ಪಿಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಎನ್‌ಎಂಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಪ್ರಕರಣ ಇದಾಗಿದೆ. ಇದೀಗ ಕ್ಲಿನಿಕಲ್ ತರಬೇತಿ ಪಡೆಯದ ಹೊರತು ಪ್ರಾಕ್ಟೀಸ್ ಮಾಡಲು ತಾತ್ಕಾಲಿಕ ನೋಂದಣಿ ನೀಡಲಾಗದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.