M M Kalburgi and Gauri Lankesh 
ಸುದ್ದಿಗಳು

[ಕಲಬುರ್ಗಿ, ಗೌರಿ ಹತ್ಯೆ ಪ್ರಕರಣ] ವಿಚಾರಣೆಗೆ ವಿಶೇಷ ನ್ಯಾಯಾಲಯ ರಚನೆ, ಪೂರ್ಣಾವಧಿ ನ್ಯಾಯಾಧೀಶರ ನೇಮಕ: ಸಿಎಂ ಸೂಚನೆ

ಎಂ ಎಂ ಕಲಬುರ್ಗಿ ಅವರ ಪತ್ನಿ ಉಮಾದೇವಿ ಮತ್ತು ಗೌರಿ ಸಹೋದರಿ ಕವಿತಾ ಲಂಕೇಶ್‌ ಅವರ ಕೋರಿಕೆಯನ್ನು ಉಲ್ಲೇಖಿಸಿ ಮುಖ್ಯಮಂತ್ರಿಗಳು ಟಿಪ್ಪಣಿಯ ಮೂಲಕ ಸೂಚನೆ ನೀಡಿದ್ದಾರೆ.

Bar & Bench

ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ ಮತ್ತು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣದ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ರಚನೆಗೆ ಹಾಗೂ ಪೂರ್ಣಾವಧಿ ನ್ಯಾಯಾಧೀಶರ ನೇಮಕ ಮಾಡುವ ಸಂಬಂಧ ಕ್ರಮವಹಿಸುವಂತೆ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರಿಗೆ ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಎಂ ಎಂ ಕಲಬುರ್ಗಿ ಅವರ ಪತ್ನಿ ಉಮಾದೇವಿ ಮತ್ತು ಗೌರಿ ಸಹೋದರಿ ಕವಿತಾ ಲಂಕೇಶ್‌ ಅವರ ಕೋರಿಕೆಯನ್ನು ಉಲ್ಲೇಖಿಸಿ ಮುಖ್ಯಮಂತ್ರಿಗಳು ಟಿಪ್ಪಣಿಯ ಮೂಲಕ ಸೂಚನೆ ನೀಡಿದ್ದಾರೆ.

ಡಿಸೆಂಬರ್‌ 2ರ ಟಿಪ್ಪಣಿಯಲ್ಲಿ ಹಿರಿಯ ಸಾಹಿತಿ ಹಾಗೂ ಸಂಶೋಧನಾ ಕ್ಷೇತ್ರದ ದಿಗ್ಗಜರಾದ ಕಲಬುರ್ಗಿ ಅವರು ಧಾರವಾಡದ ತಮ್ಮ ನಿವಾಸದಲ್ಲಿ 2015ರ ಆಗಸ್ಟ್‌ 31ರಂದು ಹತ್ಯೆಯಾಗಿದ್ದಾರೆ. 2018-19ರಲ್ಲಿ ಪ್ರಕರಣದ ಸಂಬಂಧ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಕುಟುಂಬಸ್ಥರ ವಿಚಾರಣೆ ಮುಗಿದಿದ್ದು, ವಿಚಾರಣಾ ಪ್ರಕ್ರಿಯೆ ಮುಂದುವರಿದಿದೆ. ಹತ್ಯೆಯಾಗಿ ಸಾಕಷ್ಟು ಸಮಯವಾಗಿರುವುದರಿಂದ ವಿಶೇಷ ನ್ಯಾಯಾಲಯ ರಚಿಸುವಂತೆ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ಕೋರಿದ್ದು, ಈ ಬಗ್ಗೆ ಜರೂರು ಅಗತ್ಯ ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಇನ್ನು, ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್‌ ಅವರನ್ನು 2017ರ ಸೆಪ್ಟೆಂಬರ್‌ 5ರಂದು ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ ರಚಿಸಲಾಗಿತ್ತು. 18 ಆರೋಪಿಗಳ ಬಂಧನ ಮಾಡಲಾಗಿದ್ದು, 1,200 ಪುರಾವೆ ಹಾಗೂ 500ಕ್ಕೂ ವಿವಿಧ ಸಾಕ್ಷಿಗಳನ್ನು ಒಳಗೊಂಡ ಆರೋಪ ಪಟ್ಟಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. 2022ರ ಜುಲೈನಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿದೆ. ವಿಚಾರಣಾಧೀನ ನ್ಯಾಯಾಲಯವು ಈ ಪ್ರಕರಣದ ಜೊತೆಗೆ ಬೇರೆ ಪ್ರಕರಣಗಳ ವಿಚಾರಣೆಯನ್ನೂ ನಡೆಸಬೇಕಿರುವುದರಿಂದ ತಡವಾಗುತ್ತಿದೆ. ಈ ನೆಲೆಯಲ್ಲಿ ಗೌರಿ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಿ, ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದು ಕವಿತಾ ಅವರು ಕೋರಿದ್ದಾರೆ. ಈ ಬಗ್ಗೆ ಜರೂರು ಅಗತ್ಯ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಗೌರಿ ಲಂಕೇಶ್‌ ಪ್ರಕರಣವನ್ನು 2022ರ ಜೂನ್‌ನಿಂದ ಪ್ರತಿ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಸರಾಸರಿ ಐದು ದಿನ ವಿಚಾರಣೆ ನಡೆಸಲಾಗುತ್ತಿದೆ.

“ಗೌರಿ ಲಂಕೇಶ್‌ ಪ್ರಕರಣದಲ್ಲಿ ಒಟ್ಟು 438 ಸಾಕ್ಷಿಗಳಿದ್ದು, ಇದುವರೆಗೆ 100 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಇನ್ನೂ 338 ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ಗೌರಿ ಪ್ರಕರಣದಲ್ಲಿ ಕೋಕಾ ಕಾಯಿದೆ ಅನ್ವಯಿಸಲಾಗಿದ್ದು, ಕರ್ನಾಟಕ ಹೈಕೋರ್ಟ್‌ ವಿಶೇಷ ನ್ಯಾಯಾಲಯ ರಚಿಸುವ ಅಧಿಕಾರ ಹೊಂದಿದೆ. ಇದು ಸಾಧ್ಯವಾದರೆ ಪ್ರಕರಣ ಒಂದು ವರ್ಷದಲ್ಲಿ ಇತ್ಯರ್ಥವಾಗಬಹುದು” ಎಂದು ಗೌರಿ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿರುವ ಎಸ್‌ ಬಾಲಕೃಷ್ಣನ್‌ ಅವರು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದ್ದಾರೆ.

2017ರ ಸೆಪ್ಟೆಂಬರ್‌ 5ರಂದು ಗೌರಿ ಲಂಕೇಶ್‌ ಅವರು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೂ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪವು ಗಣೇಶ್ ಮಿಸ್ಕಿನ್ ಮೇಲೂ ಇದೆ.

ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್‌ ಪಾಟೀಲ್‌, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಮತ್ತು ಹೃಶಿಕೇಶ್ ದಿಯೋದಿಕರ್‌ ಪ್ರಕರಣದ ಆರೋಪಿಗಳಾಗಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯಿದೆಯ ಸೆಕ್ಷನ್‌ಗಳಾದ 25(1), 25(1B), 27(1) ಮತ್ತು ಕೋಕಾ ಕಾಯಿದೆಯ ಸೆಕ್ಷನ್‌ಗಳಾದ 3(1)(I), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿದೆ.

ಕಲಬುರ್ಗಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 2019ರ ಆಗಸ್ಟ್‌ನಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಅಮೋಲ್‌ ಕಾಳೆ, ಗಣೇಶ್‌ ಮಿಸ್ಕಿನ್‌, ಪ್ರವೀಣ್‌ ಚತೂರ್‌ ಸೇರಿದಂತೆ ಆರೋಪಿಗಳಿದ್ದು, ಎಲ್ಲರ ವಿರುದ್ಧ ಐಪಿಸಿ ಮತ್ತು ಸಶಸ್ತ್ರ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ.