ನಿವೃತ್ತ ನ್ಯಾಯಮೂರ್ತಿ ಅಜಿತ್ ಸಿಂಗ್
ನಿವೃತ್ತ ನ್ಯಾಯಮೂರ್ತಿ ಅಜಿತ್ ಸಿಂಗ್ 
ಸುದ್ದಿಗಳು

ನಿವೃತ್ತ ನ್ಯಾಯಾಧೀಶರಿಗೆ ಒಂದು ಶ್ರೇಣಿ ಒಂದು ಪಿಂಚಣಿ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ನಿವೃತ್ತ ನ್ಯಾಯಮೂರ್ತಿ

Bar & Bench

ನಿವೃತ್ತ ಸೇವಾ ಕೋಟಾದ ನ್ಯಾಯಮೂರ್ತಿಗಳಿಗೆ, ಅಂದರೆ ಜಿಲ್ಲಾ ನ್ಯಾಯಾಂಗದಿಂದ ನೇಮಕಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಒಂದು ಶ್ರೇಣಿ ಒಂದು ಪಿಂಚಣಿ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಅಲಾಹಾಬಾದ್ ಹೈಕೋರ್ಟ್, ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರಗಳ ಪ್ರತಿಕ್ರಿಯೆ ಕೇಳಿದೆ.

ನಿವೃತ್ತ ನ್ಯಾಯಮೂರ್ತಿ ಅಜಿತ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಫೆಬ್ರವರಿ 19ರಂದು ನೋಟಿಸ್ ನೀಡಿದೆ.

ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ

2018ರಲ್ಲಿ ಉತ್ತರ ಪ್ರದೇಶ ಉನ್ನತ ನ್ಯಾಯಾಂಗದಿಂದ ಹೈಕೋರ್ಟ್‌ಗೆ ನೇಮಕಗೊಂಡ ನ್ಯಾ. ಸಿಂಗ್, ಮಾರ್ಚ್ 29, 2023ರಂದು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತರಾಗಿ ಇದೀಗ ಮಾಸಿಕ ರೂ 15,005 ಪಿಂಚಣಿ ಪಡೆಯುತ್ತಿದ್ದಾರೆ.

ಜಿಲ್ಲಾ ನ್ಯಾಯಾಂಗದಿಂದ (ಸೇವಾ) ಬಡ್ತಿ ಪಡೆದ ಹೈಕೋರ್ಟ್ ನ್ಯಾಯಮೂರ್ತಿಗಳ ಸೇವಾವಧಿಯನ್ನು ಲೆಕ್ಕಿಸದೆ ವಕೀಲ ಸಮುದಾಯದಿಂದ ಪದೋನ್ನತಿ ಪಡೆದವರಿಗೆ ಲಭ್ಯವಿರುವ ಪಿಂಚಣಿಗೆ ಅರ್ಹರಾಗದಂತೆ ತಡೆಯುವ ಕೇಂದ್ರ ಕಾನೂನು ಸಚಿವಾಲಯದ ಪತ್ರವನ್ನು ಅವರು ಪ್ರಶ್ನಿಸಿದ್ದಾರೆ.

ಸೇವಾ ಕೋಟಾ ಹೈಕೋರ್ಟ್ ನ್ಯಾಯಮೂರ್ತಿಗಳ ಪಿಂಚಣಿಯನ್ನು ನಿರ್ಧರಿಸುವಾಗ ಜಿಲ್ಲಾ ನ್ಯಾಯಾಂಗದಲ್ಲಿನ ಅಧಿಕಾರಾವಧಿಯನ್ನು ಪರಿಗಣಿಸದಿರುವುದು ಏಕಪಕ್ಷೀಯ ನಿರ್ಧಾರವಾಗಿದೆ. ಆದರೆ ವಕೀಲ ವರ್ಗದಿಂದ ನೇಮಕಗೊಂಡ ನ್ಯಾಯಮೂರ್ತಿಗಳ ವಿಷಯದಲ್ಲಿ, ವಕೀಲರಾಗಿ ಹತ್ತು ವರ್ಷಗಳ ಅವಧಿಯನ್ನು ಅನುಭವವೆಂದು ಪರಿಗಣಿಸಲಾಗುತ್ತಿದೆ ಎಂದು ಅವರ ಮನವಿಯಲ್ಲಿ ತಿಳಿಸಲಾಗಿದೆ.

ಹೀಗಾಗಿ ಕಾನೂನು ಸಚಿವಾಲಯದ ಪತ್ರ ರದ್ದುಗೊಳಿಸಿ ಜಿಲ್ಲಾ ನ್ಯಾಯಾಂಗದಿಂದ ನೇಮಕಗೊಂಡ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಪಿಂಚಣಿ ವಕೀಲ ವರ್ಗದಿಂದ ನೇಮಕಗೊಂಡ ಹೈಕೋರ್ಟ್‌ ನ್ಯಾಯಮೂರ್ತಿಗಳ ಪಿಂಚಣಿಗೆ ಸಮಾನಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಜಿಲ್ಲಾ ನ್ಯಾಯಾಂಗದ ನ್ಯಾಯಮೂರ್ತಿಗಳಾಗಿ ತಮ್ಮ ಸೇವಾವಧಿಯನ್ನು ಗಣನೆಗೆ ತೆಗೆದುಕೊಂಡು ಪಿಂಚಣಿ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನ್ಯಾಯಮೂರ್ತಿ ಸಿಂಗ್ ಅವರ ಪರವಾಗಿ ಹಿರಿಯ ವಕೀಲ ಮತ್ತು ಅಲಾಹಾಬಾದ್ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸುಧೀರ್ ಕುಮಾರ್ ಸಕ್ಸೇನಾ , ವಕೀಲರಾದ ಅವಿರಾಲ್ ಸಕ್ಸೇನಾ, ಪಿಯೂಷ್ ತನ್ವಿ, ಮೊಹಮ್ಮದ್ ಇಮ್ರಾನ್ ಅಹ್ಮದ್ ಹಾಗೂ ಶ್ರಾವಣಿ ಹಾಜರಿದ್ದರು.

ಈಚೆಗೆ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ಸೂಕ್ತ ಪಿಂಚಣಿ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿತ್ತು. ಕೆಲ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಪಿಂಚಣಿ ನೀಡಲಾಗುತ್ತಿಲ್ಲ ಈ ಬಗ್ಗೆಯೂ ಗಮನಹರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸಿಜೆಐ ಸೂಚಿಸಿದ್ದರು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Justice Ajit Singh vs Union of India and ors.pdf
Preview