ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರು ಸಿಂಗಪೋರ್ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ (ಎಸ್‌ಐಎಂಸಿ) ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಎಸ್‌ಐಎಂಸಿ ಅಧ್ಯಕ್ಷ ಜಾರ್ಜ್ ಲಿಮ್ ಅವರು ಮಂಗಳವಾರ ನ್ಯಾಯಮೂರ್ತಿ ರಮಣ ಅವರಿಗೆ ನೇಮಕಾತಿ ಪತ್ರ ನೀಡಿದರು.
ಸಿಂಗಪೋರ್‌ನ ಕಾನೂನು ಸಚಿವಾಲಯ, ಯೂನಿಸಿಟ್ರಾಲ್ ಹಾಗೂ ಇಪ್ಪತ್ತಕ್ಕೂ ಹೆಚ್ಚು ಭಾಗೀದಾರ ಸಂಸ್ಥೆಗಳು ಆಯೋಜಿಸಿರುವ ವಾರ್ಷಿಕ ಸಮಾವೇಶವಾದ "ಸಿಂಗಪೋರ್ ಕನ್ವೆನ್ಷನ್ ವೀಕ್" ನಲ್ಲಿ ಭಾಗವಹಿಸಲು ನ್ಯಾ. ರಮಣ ಅವರು ಸಿಂಗಪೋರ್‌ಗೆ ತೆರಳಿದ್ದಾರೆ. ಅಧಿಕಾರದಲ್ಲಿದ್ದ ಅವಧಿಯಲ್ಲಿ ರಮಣ ಅವರು ಪರ್ಯಾಯ ವ್ಯಾಜ್ಯ ಪರಿಹಾರ ವಿಧಾನಗಳ ಪರ ಗಟ್ಟಿಯಾಗಿ ಧ್ವನಿ ಎತ್ತಿದ್ದರು.
ಮಧ್ಯಸ್ಥಿಕೆ ಎಂಬುದು ಭಾರತೀಯ ನೈತಿಕತೆಯಲ್ಲಿ ಆಳವಾಗಿ ಬೇರುಬಿಟ್ಟಿದ್ದು ಬ್ರಿಟಿಷರ ಆಗಮನಕ್ಕೂ ಮುಂಚೆಯೇ ಭಾರತದಲ್ಲಿ ರಾಜೀ ಸಂಧಾನ ಪ್ರಚಲಿತದಲ್ಲಿತ್ತು ಎಂದು ಅವರು ಜುಲೈ 2021 ರಲ್ಲಿ ಹೇಳಿದ್ದರು.
ಅಲ್ಲದೆ ವಿವಾದಗಳ ಇತ್ಯರ್ಥದ ಮೊದಲ ಹಂತವಾಗಿ ಮಧ್ಯಸ್ಥಿಕೆಯನ್ನು ಕಡ್ಡಾಯವಾಗಿ ಸೂಚಿಸಿದರೆ ದೇಶದಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಬಹಳ ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಕಳೆದ ವರ್ಷ ಏಪ್ರಿಲ್‌ನಲ್ಲಿ, ಮಹಾಭಾರತವನ್ನು ಪ್ರಸ್ತಾಪಿಸಿಸುತ್ತಾ ನ್ಯಾ. ರಮಣ ಅವರು ಕುರುಕ್ಷೇತ್ರ ಯುದ್ಧ ತಡೆಯಲು ಶ್ರೀಕೃಷ್ಣ ರಾಜಿ ಸಂಧಾನದಲ್ಲಿ ಯಶಸ್ವಿಯಾಗಿದ್ದರೆ, ಅನೇಕ ಜೀವಗಳು ಉಳಿಯುತ್ತಿದ್ದವು ಎಂದಿದ್ದರು.