ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ವಕೀಲ ಕೆ ಎನ್ ಜಗದೀಶ್ ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಆಕ್ಷೇಪಾರ್ಹವಾದ ಹೇಳಿಕೆ/ಸುದ್ದಿ ಪ್ರಕಟಿಸದಂತೆ ಪ್ರತಿಬಂಧಕಾದೇಶ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ಬುಧವಾರಕ್ಕೆ ಆದೇಶ ಕಾಯ್ದಿರಿಸಿದೆ.
ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಸಲ್ಲಿಸಿರುವ ಮೂಲ ದಾವೆಯ ಭಾಗವಾಗಿ ಸಲ್ಲಿಕೆಯಾಗಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು 8ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ವಾಣಿ ಎ. ಶೆಟ್ಟಿ ಅವರು ನಡೆಸಿದರು.
“ಫಿರ್ಯಾದಿಯ ಪರವಾಗಿ ಸಲ್ಲಿಕೆಯಾಗಿರುವ ಮಧ್ಯಂತರ ಅರ್ಜಿಯ ಕುರಿತು ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರ ವಾದ ಆಲಿಸಲಾಗಿದೆ. ಸಂಬಂಧಿತ ದಾಖಲೆಗಳ ಮೆಮೊವನ್ನು ಸಲ್ಲಿಸಿದ್ದಾರೆ. ಆಗಸ್ಟ್ 28ರಂದು ಆದೇಶ ಮಾಡಲಾಗುವುದು” ಎಂದು ನ್ಯಾಯಾಲಯ ಹೇಳಿದೆ.
ಬಸವರಾಜ ಬೊಮ್ಮಾಯಿ ಅವರ ಆಪ್ತ ಸಹಾಯಕ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ತನ್ನನ್ನು ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ ಎಂದು ವಕೀಲ ಜಗದೀಶ್ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ.