S M Krishna 
ಸುದ್ದಿಗಳು

ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ನಿಧನ: ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳಿಗೆ ಬುಧವಾರ ರಜೆ ಘೋಷಣೆ

ಡಿಸೆಂಬರ್‌ 10ರಿಂದ 12ರವರೆಗೆ ಮೂರು ದಿನಗಳ ಶೋಕಾಚರಣೆ ಹಾಗೂ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Bar & Bench

ಮಾಜಿ ಮುಖ್ಯಮಂತ್ರಿ ಎಂ ಎಸ್‌ ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅವರ ಗೌರವಾರ್ಥ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದು ಬುಧವಾರ ಸಾರ್ವಜನಿಕ ರಜೆ ಇರಲಿದೆ. ಈ ಪ್ರಯುಕ್ತ ಕರ್ನಾಟಕ ಹೈಕೋರ್ಟ್‌ ಮತ್ತು ರಾಜ್ಯದ ಎಲ್ಲಾ ವಿಚಾರಣಾಧೀನ ನ್ಯಾಯಾಲಯಗಳಿಗೆ ಬುಧವಾರ ರಜೆಯನ್ನು ಘೋಷಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಕೆ ಎಸ್‌ ಭರತ್‌ ಕುಮಾರ್‌ ಅಧಿಸೂಚನೆ ಹೊರಡಿಸಿದ್ದಾರೆ.

ಡಿಸೆಂಬರ್‌ 10ರಿಂದ 12ರವರೆಗೆ ಮೂರು ದಿನಗಳ ಶೋಕಾಚರಣೆ ಹಾಗೂ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲು ಮುಖ್ಯ ನ್ಯಾಯಮೂರ್ತಿಗಳ ಆದೇಶಿತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಎಸ್‌ ಎಂ ಕೃಷ್ಣ ಅವರು ಮಂಗಳವಾರ ಬೆಳಗಿನ ಜಾವ 2.30ಕ್ಕೆ ನಿಧನರಾದರು. ಮಂಡ್ಯ ಜಿಲ್ಲೆಯ ಅವರ ಹುಟ್ಟೂರಿನಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಲಿದೆ. ಎಸ್‌ ಎಂ ಕೃಷ್ಣ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮೂರು ದಿನ ಶೋಕಾಚರಣೆಗೆ ಆದೇಶಿಸಿದ್ದು, ಬುಧವಾರ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಕರ್ನಾಟಕ ವಿಧಾನಸಭಾ ಸ್ಪೀಕರ್‌ ಆಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ ಅನೇಕ ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಕೃಷ್ಣ ಅವರು ನಿರ್ವಹಿಸಿದ್ದರು.