ಚುನಾವಣಾ ಬಾಂಡ್ ಗಳು 
ಸುದ್ದಿಗಳು

ಬಿಜೆಪಿಗೆ ಚುನಾವಣಾ ಬಾಂಡ್‌ ಖರೀದಿಸುವ ನೆಪದಲ್ಲಿ ₹ 2.5 ಕೋಟಿ ವಂಚನೆ: ಹೈಕೋರ್ಟ್‌ ಮಾಜಿ ನ್ಯಾಯಮೂರ್ತಿ ಆರೋಪ

ಹಣಕ್ಕೆ ಬದಲಾಗಿ ಆರೋಪಿಗಳು ತನ್ನನ್ನು ಮತ್ತು ತನ್ನ ಮೊಮ್ಮಕ್ಕಳಿಗೆ ಅಮೆರಿಕದಲ್ಲಿ 'ಯೋಗ್ಯ ಸ್ಥಾನಮಾನ' ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಆರೋಪಿಸಿದ್ದಾರೆ.

Bar & Bench

ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಚುನಾವಣಾ ಬಾಂಡ್‌ ಖರೀದಿಸಲು ಇಬ್ಬರು ವ್ಯಕ್ತಿಗಳು ತಮ್ಮಿಂದ 2.5 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿಎಸ್ಆರ್ ವರ್ಮಾ ಅವರು ಕ್ರಿಮಿನಲ್ ದೂರು ದಾಖಲಿಸಿದ್ದಾರೆ.

ಫೆಬ್ರವರಿ 27ರಂದು ಹೈದರಾಬಾದ್‌ನ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್) 2010ರಲ್ಲಿ ನಿವೃತ್ತರಾದ ಮಾಜಿ ನ್ಯಾಯಾಧೀಶರು ತಮ್ಮ ಕುಟುಂಬವು 2.5 ಕೋಟಿ ರೂಪಾಯಿ ಮೊತ್ತವನ್ನು ಚುನಾವಣಾ ಬಾಂಡ್‌ ಖರೀದಿಸಲು ಇಬ್ಬರಿಗೆ ಪಾವತಿಸಿದ್ದರೂ, ಅಂತಹ ಯಾವುದೇ ಬಾಂಡ್‌ಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ.

ಕ್ರಿಮಿನಲ್ ದೂರಿನ ಪ್ರಕಾರ, ಬಾಂಡ್‌ಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಪರವಾಗಿ ತೆಗೆದುಕೊಳ್ಳುವ ಬಗ್ಗೆ ಆರೋಪಿಗಳು ಹೇಳಿದ್ದರು ಎನ್ನಲಾಗಿದೆ.

ನರೇಂದ್ರನ್ ಮತ್ತು ಶರತ್ ರೆಡ್ಡಿ ಎಂಬ ಇಬ್ಬರನ್ನು ದೂರಿನಲ್ಲಿ ಆರೋಪಿಗಳನ್ನಾಗಿಸಲಾಗಿದೆ. "ನಮ್ಮ ಸಂಬಂಧಿಕರಿಗೆ ಚಿರಪರಿಚಿತರಾದ ನರೇಂದ್ರನ್ ಅವರು ಪರಿಚಯದ ಲಾಭ ಪಡೆದುಕೊಂಡು ನನ್ನ ಬಳಿಗೆ ಬಂದು ಕೇಂದ್ರದಲ್ಲಿನ ಪಕ್ಷಕ್ಕೆ ಸ್ವಲ್ಪ ಹಣ ಕೋರಿದರು, ಅದನ್ನು ಬಾಂಡ್‌ಗಳ ಮೂಲಕ ನೀಡಲಾಗುವುದು ಎಂದರು. ಆ ಬಳಿಕ ಹಣ ಸಂಗ್ರಹಿಸಲು ಶರತ್ ರೆಡ್ಡಿ ಅವರನ್ನು ನಿಯೋಜಿಸಲಾಯಿತು (ಶರತ್ ರೆಡ್ಡಿ ಆತ್ಮೀಯಾ ಹೋಮ್ಸ್ ಎಂಬ ನಿರ್ಮಾಣ ಕಂಪನಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ)" ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲಹಾಬಾದ್ ಮತ್ತು ಆಂಧ್ರಪ್ರದೇಶ ಹೈಕೋರ್ಟ್‌ಗಳ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ತಮ್ಮ ಹಿಂದಿನ ಅನುಭವವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಧೀಶರು ಮತ್ತು ಅವರ ಮೊಮ್ಮಕ್ಕಳಿಗೆ ಅಮೆರಿಕಾದಲ್ಲಿ "ಯೋಗ್ಯ ಸ್ಥಾನಮಾನ" ಕಲ್ಪಿಸುವುದಾಗಿ ಶರತ್ ರೆಡ್ಡಿ ಭರವಸೆ ನೀಡಿದ್ದರು ಎಂದು ಮಾಜಿ ನ್ಯಾಯಾಧೀಶರು ಆರೋಪಿಸಿದ್ದಾರೆ.

ಶರತ್‌ ಮಾತುಗಳನ್ನ ನಂಬಿ ತಮ್ಮ ಹೆಣ್ಣುಮಕ್ಕಳು ಮತ್ತು ಪತ್ನಿ 2021ರಲ್ಲಿ ಕಾಲಕಾಲಕ್ಕೆ ಒಟ್ಟು 2.5 ಕೋಟಿ ರೂಪಾಯಿಗಳನ್ನು ಈ ಇಬ್ಬರಿಗೆ ಕಳುಹಿಸಿದ್ದಾರೆ, ಇದು ವಾಟ್ಸಾಪ್‌ನಲ್ಲಿ ಸಂದೇಶಗಳಿಂದ ಸ್ಪಷ್ಟವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇಷ್ಟು ದೊಡ್ಡ ಮೊತ್ತದ ಹಣವನ್ನು ಕಳುಹಿಸಿದರೂ, ಯಾವುದೇ ಬಾಂಡ್‌ಗಳನ್ನು ವಿತರಿಸಲಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಮೆರಿಕಾದ ವಿಚಾರದಲ್ಲಿ ನಿವೃತ್ತ ನ್ಯಾಯಮೂರ್ತಿ ಅಥವಾ ಅವರ ಮೊಮ್ಮಕ್ಕಳಿಗೆ ಯಾವುದೇ "ಉಪಕಾರ" ಮಾಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ, ಆದಾಗ್ಯೂ ಮಾಜಿ ನ್ಯಾಯಾಧೀಶರು ಈ ಅಂಶವು "ಹೆಚ್ಚು ಪ್ರಸ್ತುತವಲ್ಲ ಅಥವಾ ಮಹತ್ವದ್ದಾಗಿಲ್ಲ" ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ಕ್ರಮವು ಚುನಾವಣಾ ವೆಚ್ಚಗಳಿಗಾಗಿ ಹಣ ಸಂಗ್ರಹಿಸುವುದನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಒತ್ತಿ ಹೇಳಲಾಗಿದೆ. ಇಬ್ಬರು ಆರೋಪಿಗಳು ಹಣ ವಂಚಿಸಿರಬಹುದು ಮತ್ತು ತಮ್ಮ ಸ್ವಂತಕ್ಕೆ ಬಳಸುವ ಮೂಲಕ ದುರುಪಯೋಗಪಡಿಸಿಕೊಂಡಿರಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿದೆ.

"ಪ್ರಸ್ತುತ ಪ್ರಕರಣದಲ್ಲಿ, ನನಗೆ ಬಾಂಡ್‌ಗಳನ್ನು ನೀಡುವಂತೆ ನಾನು ಒತ್ತಾಯಿಸುತ್ತಿದ್ದರೂ, ಅದನ್ನು ಮಾಡಲಾಗಿಲ್ಲ. ಯಾವುದೇ ಬಾಂಡ್‌ ನೀಡದೆ ಸುಮಾರು 2.5 ಕೋಟಿ ರೂಪಾಯಿ ಸಂಗ್ರಹಿಸಿರುವುದು ಈ ಮೊತ್ತವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸೂಚಿಸುತ್ತದೆ" ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಪ್ರಕಾರ, ಇಬ್ಬರು ಆರೋಪಿಗಳು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕ್ರಿಮಿನಲ್ ನಂಬಿಕೆ ಉಲ್ಲಂಘನೆ, ದುರುಪಯೋಗ ಮತ್ತು ವಂಚನೆಯ ಅಪರಾಧಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ.