ಮಹಿಳೆಯರು ಮತ್ತು ನ್ಯಾಯಾಂಗವನ್ನು ಅವಹೇಳನ ಮಾಡುವಂತಹ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಕೋರಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿ ಎಸ್ ಕರ್ಣನ್ ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಚೆನ್ನೈನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯವು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಕದತಟ್ಟಿದ್ದಾರೆ.
ತಮ್ಮ ಬಂಧನಕ್ಕೂ ಪೂರ್ವದಲ್ಲಿ ಕ್ರಿಮಿನಲ್ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 41ಎ ಅಡಿ ಪೊಲೀಸರು ನೀಡಿದ್ದ ಸಮನ್ಸ್ ಆಧರಿಸಿ ಅವರ ಮುಂದೆ ಹಾಜರಾಗಿ ಅಂಥ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದೇನೆ. ಹೀಗಾಗಿ ಅವಹೇಳನಕಾರಿ ಅಥವಾ ನಿಂದನಾತ್ಮಕ ಅಂಶಗಳನ್ನು ಒಳಗೊಂಡ ವಿಡಿಯೋವನ್ನು ತಾನು ಬಿಡುಗಡೆ ಮಾಡಿಲ್ಲ ಎಂದು ಕರ್ಣನ್ ಹೇಳಿದ್ದಾರೆ.
ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಯಾದ ಬಳಿಕ, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದಾಗಿನಿಂದ ಗಂಭೀರವಾದ ಖಿನ್ನತೆ ಮತ್ತು ಕ್ಷೋಭೆಗೆ ಒಳಗಾಗಿರುವುದಾಗಿ ಕರ್ಣನ್ ವಿವರಿಸಿದ್ದಾರೆ. ಇದರಿಂದ ಒತ್ತಡಕ್ಕೆ ಒಳಗಾಗಿ ಅನುಚಿತವಾಗಿ ವರ್ತಿಸಿರುವುದಾಗಿ ಹೇಳಿದ್ದಾರೆ.
ತಾನು ಮಾನಸಿಕವಾಗಿ ಅಗಾಧವಾದ ವೇದನೆ ಅನುಭವಿಸುತ್ತಿದ್ದು, ಸರಿಯಾದ ಮನಸ್ಥಿತಿಯಲ್ಲಿ ಇರಲಿಲ್ಲ. ತೀವ್ರ ತರಹದ ಖಿನ್ನತೆಯಿಂದಾಗಿ ಏನನ್ನೂ ಗ್ರಹಿಸದೇ ಮತ್ತು ತನ್ನ ಕ್ರಿಯೆ ಉಂಟು ಮಾಡಬಹುದಾದ ಪರಿಣಾಮವನ್ನು ಅರಿಯದೇ ನಡೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಬಂಧನದ ಬಳಿಕ ವಯೋಸಹಜ ಆರೋಗ್ಯ ಸಮಸ್ಯೆಗಳು ಮತ್ತು ಕೋವಿಡ್ ಚಿಕಿತ್ಸೆಯನ್ನು ಸ್ಟ್ಯಾನ್ಲಿ ಆಸ್ಪತ್ರೆಯಲ್ಲಿ ಪಡೆದುಕೊಂಡಿದ್ದೇನೆ. ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಪುಳಲ್ ಕೇಂದ್ರ ಕಾರಾಗೃಹ-1ರಲ್ಲಿದ್ದೇನೆ ಎಂದು ಹೇಳಿದ್ದಾರೆ.
ಕರ್ಣನ್ ಅವರು ಪೊಲೀಸ್ ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸುವುದಾಗಿ ಮತ್ತು ನ್ಯಾಯಾಲಯ ವಿಧಿಸುವ ಎಲ್ಲಾ ಷರತ್ತುಗಳಿಗೂ ಒಪ್ಪಿದ್ದು ಜಾಮೀನು ನೀಡುವಂತೆ ಹೈಕೋರ್ಟ್ ಅನ್ನು ಕೋರಿದ್ದರು. ಈ ಅರ್ಜಿಯು ಸೋಮವಾರ ವಿಚಾರಣೆಗೆ ಬರಲಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಧಾರರಹಿತ ಆರೋಪ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಆರೋಪದಡಿ ಅವರನ್ನು ಅಪರಾಧಿ ಎಂದು ಘೋಷಿಸಲಾಗಿತ್ತು. ಕರ್ಣನ್ ಅವರಿಗೆ ಆರು ತಿಂಗಳ ಜೈಲುವಾಸ ವಿಧಿಸಲಾಗಿತ್ತು. 2017ರ ಡಿಸೆಂಬರ್‌ನಲ್ಲಿ ಅವರು ಬಿಡುಗಡೆ ಹೊಂದಿದ್ದರು. ಇದಕ್ಕೂ ಮುನ್ನ ಅವರು ಮದ್ರಾಸ್ ಮತ್ತು ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದರು.
ಮಹಿಳಾ ನ್ಯಾಯಮೂರ್ತಿಗಳು ಹಾಗೂ ನ್ಯಾಯಮೂರ್ತಿಗಳ ಪತ್ನಿಯರ ವಿರುದ್ಧ ಮತ್ತು ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ ಆರೋಪದಲ್ಲಿ ಕಳೆದ ವರ್ಷ ಕರ್ಣನ್ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿದ್ದವು.