ಅತ್ಯಾಚಾರ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇರಳ ಸರ್ಕಾರದ ಮಾಜಿ ಹಿರಿಯ ವಕೀಲ ಪಿ ಜಿ ಮನು ಮತ್ತೊಂದು ಅತ್ಯಾಚಾರ ಆರೋಪಕ್ಕೆ ತುತ್ತಾಗಿ ಇಂದು (ಭಾನುವಾರ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಅಂದರೆ 2023ರಲ್ಲಿ, ಕಾನೂನು ಸಲಹೆ ಪಡೆಯಲು ತನ್ನ ಬಳಿ ಬಂದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಮನು ಅವರ ಮೇಲಿತ್ತು.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಮನು ವಿರುದ್ಧ ಅತ್ಯಾಚಾರ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ (ಐಟಿ ಕಾಯಿದೆ) ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ತನ್ನ ಕಚೇರಿಗೆ ಕರೆಸಿಕೊಂಡಿದ್ದ ಮನು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು, ಜೊತೆಗೆ ತನ್ನ ಖಾಸಗಿ ಚಿತ್ರಗಳನ್ನು ಕೂಡ ಬಹಿರಂಗಪಡಿಸಿದ್ದರು ಎಂದು ಮಹಿಳೆ ದೂರಿದ್ದರು ಎಫ್‌ಐಆರ್ ದಾಖಲಾದ ಬಳಿಕ ಮನು ಹಿರಿಯ ಸರ್ಕಾರಿ ವಕೀಲ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಜನವರಿ 2023 ರಲ್ಲಿ ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆಯುವ ಅವರ ಯತ್ನ ಯಶಗಳಿಸಿರಲಿಲ್ಲ, ಬಳಿಕ ಮನು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಅಂತಿಮವಾಗಿ ಮಾರ್ಚ್ 2023 ರಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಜಾಮೀನು ನೀಡುವಾಗ ಮುಂದೆ ಯಾವುದೇ ಕ್ರಿಮಿನಲ್ ಕೃತ್ಯಗಳನ್ನು ಎಸಗದಂತೆ ಕೇರಳ ಹೈಕೋರ್ಟ್ ಷರತ್ತು ವಿಧಿಸಿತ್ತು.
ಕಳೆದ ವಾರ, ತನ್ನ ಹೆಂಡತಿಯ ಮೇಲೆ ಮನು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಮನುವನ್ನು ನಿಂದಿಸುತ್ತಿರುವ ವೀಡಿಯೊ ಬಹಿರಂಗವಾಗಿತ್ತು. ಕಾನೂನು ಸಲಹೆ ಕೋರಿದ್ದ ಪತ್ನಿ ಮೇಲೆ ಮನು ಬಲಾತ್ಕಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಕೇರಳದ ಕಾನೂನು ವಲಯದಲ್ಲಿ ಕಾಳ್ಗಿಚ್ಚಿನಂತೆ ಈ ಸುದ್ದಿ ಹರಡಿತ್ತು. ಹೈಕೋರ್ಟ್ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪದಡಿ ಮತ್ತೆ ಮನು ಅವರ ವಿರುದ್ಧ ದೂರು ದಾಖಲಾಗುವ ಸಾಧ್ಯತೆಗಳಿದ್ದವು. ಮನು ಅವರು ಕೊಲ್ಲಂನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.