ಸೈಬರ್ ವಂಚನೆಯಿಂದಾಗಿ ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ ಶಶಿಧರನ್ ನಂಬಿಯಾರ್ ಅವರು ₹ 90 ಲಕ್ಷ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ನ್ಯಾಯಮೂರ್ತಿ ನಂಬಿಯಾರ್ ಅವರು ಆದಿತ್ಯ ಬಿರ್ಲಾ ಇಕ್ವಿಟಿ ಲರ್ನಿಂಗ್ ಗ್ರೂಪ್ ಎಂಬ ವಾಟ್ಸಾಪ್ ಗುಂಪಿನ ಮೂಲಕ ನಕಲಿ ಷೇರು ವ್ಯಾಪಾರ ಅಪ್ಲಿಕೇಶನ್‌ನಲ್ಲಿ ಹೂಡಿಕೆ ಮಾಡಲು ಹಣ ವರ್ಗಾಯಿಸಿದ್ದರು.
ವಾಟ್ಸಾಪ್ ಗ್ರೂಪ್‌ಗೆ ಸೇರಿದ ಅವರಿಗೆ, ಆನ್‌ಲೈನ್ ಷೇರು ಮಾರುಕಟ್ಟೆ ಮೂಲಕ 850% ಆದಾಯ ನೀಡುವುದಾಗಿ ಭರವಸೆ ನೀಡಲಾಗಿತ್ತು.
ಅದು ವಂಚನೆ ಎಂದು ತಿಳಿಯದೆ 2024ರ ಡಿಸೆಂಬರ್ 4ರಿಂದ ಡಿಸೆಂಬರ್ 30ರ ನಡುವೆ ಅಂದರೆ ಸುಮಾರು ಒಂದು ತಿಂಗಳೊಳಗೆ ₹ 90 ಲಕ್ಷ ವರ್ಗಾಯಿಸಿದ್ದರು.
ವಂಚನೆ ಕುರಿತು ನಂಬಿಯಾರ್ ಅವರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಅಯನಾ ಜೋಸೆಫ್ ಮತ್ತು ವರ್ಷಾ ಸಿಂಗ್ ಹೆಸರಿನ ಇಬ್ಬರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 316(2) (ಕ್ರಿಮಿನಲ್ ನಂಬಿಕೆ ದ್ರೋಹ) ಮತ್ತು 318(4) (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ಸೋಗು ಹಾಕಿ ವಂಚನೆ) ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.