COVID-19, posters
COVID-19, posters 
ಸುದ್ದಿಗಳು

ಕೊರೊನಾ ತೀವ್ರತೆಗೆ ಕುಂಭಮೇಳ, ರಾಜಕೀಯ ಸಮಾವೇಶಗಳು ಕಾರಣ ಎಂದ ಕೇಂದ್ರದ ಮಾಜಿ ಕಾನೂನು ಸಚಿವ; ಸಿಜೆಐಗೆ ದೂರು

Bar & Bench

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರದ ಮಾಜಿ ಕಾನೂನು ಸಚಿವ ಮತ್ತು ಹಿರಿಯ ವಕೀಲ ಡಾ. ಅಶ್ವನಿ ಕುಮಾರ್‌ ಕೋವಿಡ್‌ ಎರಡನೇ ಅಲೆ ಕುರಿತಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಐವತ್ತಕ್ಕಿಂತ ಹೆಚ್ಚು ಸಂಖ್ಯೆಯ ಜನ ಸೇರುವ ರಾಜಕೀಯ ಸಮಾವೇಶ, ಪ್ರತಿಭಟನಾ ಸಭೆ, ಧಾರ್ಮಿಕ ಕೂಟಗಳು ಹಾಗೂ ಹಬ್ಬಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

ಹರಿದ್ವಾರದ ಕುಂಭಮೇಳ ಕೊರೊನಾದ ʼಮಹಾನ್‌ ವಿತರಕʼ ಎಂದು ಉಲ್ಲೇಖಿಸಿರುವ ಅವರು ಅಲ್ಲಿ ಭಾಗವಹಿಸಿದ್ದ 2,000 ಕ್ಕೂ ಹೆಚ್ಚು ಜನರಿಗೆ ಕೋವಿಡ್‌ ದೃಢಪಟ್ಟಿದೆ ಎಂದಿದ್ದಾರೆ. ಅಲ್ಲದೆ ವಿಧಾನಸಭೆ ಚುನಾವಣೆಗಾಗಿ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ರಾಜಕೀಯ ಸಮಾವೇಶಗಳ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹಾಗಿದ್ದರೂ ದೇಶಾದ್ಯಂತ ನಡೆಯುತ್ತಿರುವ ಇಂತಹ ಸಮಾವೇಶಗಳನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏಕರೂಪ ಗುರಿ ಹೊಂದಿದ, ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಕಾಲಕಾಲಕ್ಕೆ ಜಾರಿಗೊಳಿಸಿದ ಸೀಮಿತ ನಿರ್ಬಂಧಗಳನ್ನು ಕೆಲ ರಾಜ್ಯ ಸರ್ಕಾರಗಳು ಸಡಿಲಗೊಳಿಸಿವೆ. ಪ್ರಕರಣಗಳ ಹೆಚ್ಚಳದಿಂದಾಗಿ ಲಸಿಕೆ ರಫ್ತು ಮಾಡುವುದನನ್ನು ತಕ್ಷಣ ಸ್ಥಗಿತಗೊಳಿಸುವಂತೆ ಮಾಡಿದೆ. ಎಲ್ಲಾ ವಯಸ್ಸಿನ ಎಲ್ಲಾ ನಾಗರಿಕರಿಗೆ ಲಸಿಕೆಗಳು ಸುಲಭವಾಗಿ ದಕ್ಕುವಂತೆ ಮಾಡುವುದು ಸ್ವಯಂವೇದ್ಯವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರಸ್ತುತ ಸ್ಥಿತಿ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಮತ್ತು ಈ ಕೆಳಗಿನ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಅಶ್ವನಿ ಕುಮಾರ್ ಕೋರಿದ್ದಾರೆ:

ಎ. ಐವತ್ತಕ್ಕಿಂತ ಹೆಚ್ಚು ಸಂಖ್ಯೆಯ ಜನ ಸೇರುವ ರಾಜಕೀಯ ಸಮಾವೇಶ, ಪ್ರತಿಭಟನಾ ಸಭೆ, ಧಾರ್ಮಿಕ ಕೂಟಗಳು ಹಾಗೂ ಹಬ್ಬಗಳನ್ನು ನಿಷೇಧಿಸಿ.

ಬಿ. ಕೋವಿಡ್ ಲಸಿಕೆಗಳ ರಫ್ತು ನಿಷೇಧಿಸಿ.

ಸಿ. ಕೊರೊನಾ ಚಿಕಿತ್ಸೆಗೆ ಪರಿಣಾಮಕಾರಿಯೇ ಎಂಬುದನ್ನು ಅರಿತು ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿ.

ಡಿ. ಎಲ್ಲಾ ವಯಸ್ಸಿನವರಿಗೆ ಲಸಿಕೆಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು.

ಇ. ವಿಶೇಷವಾಗಿ ವೃದ್ಧರಿಗೆ ಮತ್ತು ದುರ್ಬಲರಿಗೆ ಸ್ಥಳದಲ್ಲೇ ಚುಚ್ಚುಮದ್ದು ನೀಡಲು ಮುಂದಾಗಿ.

ಮೂಲಭೂತ ಹಕ್ಕುಗಳ ಆದ್ಯ ರಕ್ಷಕನಾಗಿ ಸುಪ್ರೀಂ ಕೋರ್ಟ್ ಇಂತಹ ಸಂದಿಗ್ಧ ಸಮಯದಲ್ಲಿ ತನ್ನ ಅಸಾಧಾರಣ ಅಧಿಕಾರ ಚಲಾಯಿಸಬೇಕು ಮತ್ತು ಸಂವಿಧಾನದ ಅಂತಃಸಾಕ್ಷಿಯ ಪಾಲಕನಾಗಿ ತನ್ನ ಪಾತ್ರ ನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.