Justice Rohit Arya, BJP 
ಸುದ್ದಿಗಳು

ಮಧ್ಯಪ್ರದೇಶ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೋಹಿತ್ ಆರ್ಯ ಬಿಜೆಪಿಗೆ ಸೇರ್ಪಡೆ

Bar & Bench

ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ನ್ಯಾ. ರೋಹಿತ್‌ ಆರ್ಯ ಅವರು ತಮ್ಮ ನಿವೃತ್ತಿಯ ಮೂರು ತಿಂಗಳ ಬಳಿಕ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ವರದಿಯ ಪ್ರಕಾರ, ಭೋಪಾಲ್‌ನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾ. ಆರ್ಯ ಅವರು ಬಿಜೆಪಿ ಮಧ್ಯಪ್ರದೇಶ ಘಟಕದ ಅಧ್ಯಕ್ಷ ಡಾ ರಾಘವೇಂದ್ರ ಶರ್ಮಾ ಅವರಿಂದ ಸದಸ್ಯತ್ವ  ಸ್ವೀಕರಿಸಿದರು.

ಗಮನಾರ್ಹವಾಗಿ, 2021ರಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಮತ್ತು ನಳಿನ್ ಯಾದವ್ ಅವರಿಗೆ ನ್ಯಾ. ಆರ್ಯ ಅವರು ಜಾಮೀನು ನಿರಾಕರಿಸಿದ್ದರು.

ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಫರೂಕಿ ಅವರಿಗೆ ಜಾಮೀನು ನೀಡಿತ್ತು.

ಲೈಂಗಿಕ ದೌರ್ಜನ್ಯ ಎಸಗಿದವ ರಾಖಿ ಕಟ್ಟಿಸಿಕೊಳ್ಳಬೇಕು ಎಂಬ ವಿವಾದಾತ್ಮಕ ತೀರ್ಪನ್ನು 2020 ರಲ್ಲಿ ನೀಡಿ ನ್ಯಾ. ರೋಹಿತ್‌ ಆರ್ಯ ದೇಶದ ಗಮನ ಸೆಳೆದಿದ್ದರು.

ಆರೋಪಿ ತನ್ನ ಹೆಂಡತಿ ಜೊತೆಗೆ ಸಂತ್ರಸ್ತೆಯ ಮನೆಗೆ ತೆರಳಿ ಸಿಹಿ ಹಂಚಬೇಕು. ಸಂತ್ರಸ್ತೆಯ ಕೈಯಲ್ಲಿ ರಾಖಿ ಕಟ್ಟಿಸಿಕೊಳ್ಳಬೇಕು. ಜೊತೆಗೆ ಯಾವತ್ತಿಗೂ ಆಕೆಗೆ ತನ್ನ ಕೈಲಾದಷ್ಟು ರಕ್ಷಣೆ ನೀಡುವುದಾಗಿ ಪ್ರಮಾಣ ಮಾಡಬೇಕು. ಅಲ್ಲದೆ ಅಣ್ಣಂದಿರು, ತಂಗಿಯರಿಗೆ ಸಾಂಪ್ರದಾಯಿಕವಾಗಿ ಕೊಡುವಂತೆ ಹಣ ನೀಡಬೇಕು. ಜೊತೆಗೆ ಆಕೆಯ ಆಶೀರ್ವಾದವನ್ನೂ ಪಡೆಯಬೇಕು ಎಂದು ಅವರು ಆದೇಶಿಸಿದ್ದರು.

ಈ ಆದೇಶವನ್ನು ಬಳಿಕ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು. ಜಾಮೀನಿಗೆ ವಿಧಿಸಿದ್ದ ಷರತ್ತುಗಳನ್ನು ಬಲವಾಗಿ ಖಂಡಿಸಿದ್ದ ಸುಪ್ರೀಂ ಕೋರ್ಟ್‌ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳ ವಿಚಾರಣೆ ನಡೆಸುವಾಗ ಕೆಳ ನ್ಯಾಯಾಲಯಗಳು ಪಾಲಿಸಬೇಕಾದ ನಿರ್ದೇಶನಗಳನ್ನು ನೀಡಿತ್ತು.