ED and B Nagendra 
ಸುದ್ದಿಗಳು

ವಾಲ್ಮೀಕಿ ನಿಗಮ ಪ್ರಕರಣ: ವಕೀಲರ ಖಾಸಗಿ ಭೇಟಿ, ಸೂಕ್ತ ವೈದ್ಯರಿಂದ ಸಮರ್ಪಕ ಚಿಕಿತ್ಸೆಗೆ ಮಾಜಿ ಸಚಿವ ನಾಗೇಂದ್ರ ಕೋರಿಕೆ

ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳಿಂದ ಹೇಳಿಕೆ ಕೊಡಿಸಿ, ಅದನ್ನು ಆಧರಿಸಿ ನಾಗೇಂದ್ರ ಅವರನ್ನು ಬಂಧಿಸಿರುವುದು ಪೂರ್ವಯೋಜಿತ ಕೃತ್ಯ ಎಂದು ಆಕ್ಷೇಪಿಸಿದ ಹಿರಿಯ ವಕೀಲ ಶ್ಯಾಮ್‌ಸುಂದರ್.‌

Siddesh M S

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಂತರ ರೂಪಾಯಿ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ ಡಿ) ಕಸ್ಟಡಿಯಲ್ಲಿರುವ ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಕಲ್ಪಿಸಿರುವ ವೈದ್ಯಕೀಯ ಸೌಲಭ್ಯದ ಮಾಹಿತಿಯನ್ನು ಜುಲೈ 18ಕ್ಕೆ ಸಲ್ಲಿಸಬೇಕು ಎಂದು ತನಿಖಾಧಿಕಾರಿಗೆ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಇ ಡಿ ಅಧಿಕಾರಿಗಳ ಕದ್ದುಕೇಳುವಿಕೆಯಿಲ್ಲದೇ ಖಾಸಗಿಯಾಗಿ ವಕೀಲರ ಜೊತೆ ಮಾತುಕತೆ ನಡೆಸಲು ಅನುಮತಿಸಬೇಕು; ಸೂಕ್ತ ವೈದ್ಯರು ವಿಶೇಷವಾಗಿ ನಿಯತ ವೈದ್ಯರಿಂದ ಅನುಕೂಲಕರ ವಾತಾವರಣದಲ್ಲಿ ವೈದ್ಯಕೀಯ ಸೌಲಭ್ಯ ಪಡೆಯಲು ಅನುಮತಿಸಬೇಕು; ಸ್ವಯಂ ಹೇಳಿಕೆ ಹೊರತುಪಡಿಸಿ ಬೇರಾವುದೇ ಹೇಳಿಕೆ ನೀಡಲು ನಾಗೇಂದ್ರ ಅವರ ಮೇಲೆ ಒತ್ತಡ ಹಾಕಬಾರದು; ನಾಗೇಂದ್ರ ನೀಡುವ ಹೇಳಿಕೆಯನ್ನು ವಿಡಿಯೊಗ್ರಾಫ್‌ ಮಾಡಬೇಕು ಮತ್ತು ಅದನ್ನು ದಾಖಲೆಯಾಗಿ ಸಲ್ಲಿಸಬೇಕು; ನಾಗೇಂದ್ರ ಅವರಿಂದ ಜಪ್ತಿ ಮಾಡಿರುವ ವಿದ್ಯುನ್ಮಾನ ಸಾಧನಗಳ (ಮೊಬೈಲ್‌ ಫೋನ್‌) ಮಿರರ್‌ ಇಮೇಜಸ್‌ ಅಥವಾ ಅಂಶಗಳನ್ನು ನ್ಯಾಯಾಲಯದ ಅನುಮತಿ ಇಲ್ಲದೇ ಅಥವಾ ಪ್ರಕರಣದ ತನಿಖೆ ಹೊರತುಪಡಿಸಿ ಬೇರಾವುದೇ ವಿಚಾರಕ್ಕೆ ಬಳಸಬಾರದು. ಇದು ನಾಗೇಂದ್ರ ಅವರ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡಲಿದೆ ಮತ್ತು ತನಿಖೆಯ ಮಾಹಿತಿಯನ್ನು ಸಾರ್ವಜನಿಕಗೊಳಿಸಬಾರದು ಎಂದು ಇ ಡಿಗೆ ನಿರ್ದೇಶಿಸುವಂತೆ ಕೋರಿ ನಾಗೇಂದ್ರ ಸಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ನಡೆಸಿದರು.

“ಆರೋಪಿ/ಅರ್ಜಿದಾರ ನಾಗೇಂದ್ರ ಅವರಿಗೆ ವೈದ್ಯಕೀಯ ನೆರವನ್ನು ಯಾರಿಂದ ಕೊಡಿಸಲಾಗಿದೆ ಎಂಬುದಕ್ಕೆ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಜುಲೈ 18ರಂದು ದಾಖಲೆ ಸಲ್ಲಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆ ಮುಂದೂಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ನಾಗೇಂದ್ರ ಪರವಾಗಿ ವಾದಿಸಿದ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ಸುಂದರ್‌ ಅವರು “ವಕೀಲರನ್ನು ಭೇಟಿ ಮಾಡಲು ಮತ್ತು ಆರೋಗ್ಯದ ಮೇಲೆ ನಿಗಾ ಇಡಲು ವೈದ್ಯರ ಸೇವೆ ಪಡೆಯಲು ಆರೋಪಿ ಅರ್ಹರಾಗಿದ್ದಾರೆ. ಆದರೆ, ಇ ಡಿ ಅಧಿಕಾರಿಗಳು ನಾಗೇಂದ್ರ ಜೊತೆ ಆಪ್ತ ಮಾತುಕತೆಗೆ ಅವಕಾಶ ನೀಡಿಲ್ಲ. ಬದಲಾಗಿ, ನಾಗೇಂದ್ರ ಜೊತೆ ಮಾತನಾಡುವಾಗ ಸ್ಥಳದಲ್ಲೇ ನಿಲ್ಲುತ್ತಾರೆ. ಇದು ಖಾಸಗಿ ಮಾತುಕತೆ ಮತ್ತು ವಕೀಲರಿಗೆ ಸೂಚನೆ ನೀಡುವುದನ್ನು ತಪ್ಪಿಸುವುದಾಗಿದೆ. ಮನಸ್ಸಿಗೆ ವಿರುದ್ಧವಾದ ಮತ್ತು ಸೂಕ್ತವಲ್ಲದ ಹೇಳಿಕೆ ನೀಡಲು ಇ ಡಿ ಅಧಿಕಾರಿಗಳು ನಾಗೇಂದ್ರ ಮೇಲೆ ಅಪಾರ ಒತ್ತಡ ಹಾಕುತ್ತಿದ್ದಾರೆ. ಅಸಂಬಂಧಿತ ವ್ಯಕ್ತಿಗಳ ವಿರುದ್ಧ ಹೇಳಿಕೆ ನೀಡುವಂತೆ ಹಾಗೂ ತಪ್ಪಾದ ಹೇಳಿಕೆಗೆ ಸಹಿ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ. ಇ ಡಿ ಅಧಿಕಾರಿಗಳು ತಮ್ಮ ಕಸ್ಟಡಿ ಅವಧಿಯನ್ನು ದೌರ್ಜನ್ಯ ಎಸಗಲು ದುರ್ಬಳಕೆ ಮಾಡುತ್ತಿದ್ದಾರೆ” ಎಂದು ಆಕ್ಷೇಪಿಸಿದರು.

“ನಾಗೇಂದ್ರಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸಂಬಂಧಿತವಲ್ಲದ ವೈದ್ಯರನ್ನು ಕರೆಯಿಸಲಾಗಿದೆ. ವಿಶೇಷವಾಗಿ ಹೇಳಬೇಕೆಂದರೆ ಹೃದಯ ಸಂಬಂಧಿ ರೋಗಕ್ಕೆ ಚರ್ಮ ರೋಗ ತಜ್ಞರನ್ನು ತನಿಖಾಧಿಕಾರಿ ಕರೆಯಿಸಿದ್ದಾರೆ. ಇ ಡಿ ಅಧಿಕಾರಿಗಳು ತನಿಖೆಯನ್ನು ಹಾದಿ ತಪ್ಪಿಸಿ ತಮ್ಮದೇ ಆಯಾಮ ನೀಡುತ್ತಿದ್ದಾರೆ. ಇದು ಪ್ರಕರಣದ ವಾಸ್ತವಿಕ ಅಂಶ ಮತ್ತು ಪರಿಸ್ಥಿತಿಗೆ ಹೊಂದುತ್ತಿಲ್ಲ. ಕರ್ನಾಟಕ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳಿಂದ ಸ್ವಯಂ ವಿನ್ಯಾಸಗೊಳಿಸಿದ ಸೂಚಿತ ಹೇಳಿಕೆಗಳನ್ನು ಕೊಡಿಸಿ, ಅದನ್ನು ಆಧರಿಸಿ ನಾಗೇಂದ್ರ ಅವರನ್ನು ಬಂಧಿಸಿರುವುದು ಪೂರ್ವಯೋಜಿತ ಕೃತ್ಯವಾಗಿದೆ. ರಹಸ್ಯ ಉದ್ದೇಶವನ್ನು ಈಡೇರಿಸಲು ಕಸ್ಟಡಿ ತನಿಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ” ಎಂದು ಆಕ್ಷೇಪಿಸಿದರು.

“ಕಾನೂನುಬಾಹಿರವಾಗಿ ನಾಗೇಂದ್ರ ಅವರ ಖಾಸಗಿ ಮೊಬೈಲ್‌ ಫೋನ್‌ ಅನ್ನು ಮಿರರ್‌ ಇಮೇಜ್‌ ಮಾಡಿಕೊಳ್ಳಲಾಗಿದ್ದು, ತನಿಖೆಯ ಸೋಗಿನಲ್ಲಿ ಅವರ ಖಾಸಗಿತನವನ್ನು ಉಲ್ಲಂಘಿಸಲಾಗಿದೆ. ಇ ಡಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಮಾಹಿತಿಯನ್ನು ಪ್ರಚಾರ ಮಾಡುವಾಗ ಮೂಲಕ ತಪ್ಪಾದ ಭಾವನೆ ಸೃಷ್ಟಿಸಿ, ಸಾರ್ವಜನಿಕ ವಿರೋಧ ಸೃಷ್ಟಿಸುವ ಉದ್ದೇಶ ಹೊಂದಿದ್ದಾರೆ. ಇ ಡಿ ಕಚೇರಿಯಿಂದ ತನಿಖೆಯ ಮಾಹಿತಿ ಮಾಧ್ಯಮಗಳಿಗೆ ಉದ್ದೇಶಪೂರಿತವಾಗಿ ಸೋರಿಕೆಯಾಗಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ” ಎಂದು ಆಕ್ಷೇಪಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಆರೋಪಿ ನಾಗೇಂದ್ರ ತಿಳಿಸಿಲ್ಲ. ಮಾತ್ರೆಗಳನ್ನು ತೆಗೆದುಕೊಳ್ಳಲು ಅನುಮತಿಸಲಾಗಿದೆ. ಸರ್ಕಾರಿ ವೈದ್ಯರ ಮೂಲಕ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ. ಶಾಸಕರು ಎಂದು ಖಾಸಗಿ ವೈದ್ಯರನ್ನು ಕರೆಸಲಾಗದು. ಹೃದಯ ಸಂಬಂಧಿ ಕಾಯಿಲೆ ತಪಾಸಣೆಗೆ ಚರ್ಮ ರೋಗದ ವೈದ್ಯರನ್ನು ಕರೆಸಲಾಗಿದೆ ಎಂಬ ಅರ್ಜಿದಾರರ ಆರೋಪ ಸುಳ್ಳು” ಎಂದರು.

“ಆರೋಪಿ ನಾಗೇಂದ್ರ ಹೇಳಿಕೆಯನ್ನು ವಿಡಿಯೊಗ್ರಾಫ್‌ ಮಾಡಲು ಸಿಆರ್‌ಪಿಸಿ, ಪಿಎಂಎಲ್‌ಎ, ಬಿಎನ್‌ಎಸ್‌ಎಸ್‌ನಲ್ಲಿ ಹೇಳಿಲ್ಲ. ಆರೋಪಿ ಶಾಸಕ ಎಂದಮಾತ್ರಕ್ಕೆ ಅವರಿಗೆ ವಿಶೇಷ ಆತಿಥ್ಯ ನೀಡಲಾಗದು. ಅಮೆರಿಕಾದ ಸಿಆರ್‌ಪಿಸಿಯಲ್ಲಿ ಹೇಳಿಕೆಯನ್ನು ವಿಡಿಯೊ ಮಾಡಿದರೆ ಸಾಕ್ಷಿ ವಿಚಾರಣೆಯ ಸಂದರ್ಭದಲ್ಲಿ ಅದು ಅಡ್ಮಿಸಬಲ್‌ ಎಂದಿದೆ. ಇದಕ್ಕೂ ನೀವು (ಆರೋಪಿ) ಒಪ್ಪುವುದಿಲ್ಲ. ಅದನ್ನೂ ಸಾಬೀತುಪಡಿಸಿ ಎನ್ನುತ್ತೀರಿ. ಅಮೆರಿಕಾದ ಕಾನೂನನ್ನು ಈ ನೆಲಕ್ಕೆ ಅನ್ವಯಿಸಲಾಗದು” ಎಂದರು.

ಮುಂದುವರಿದು, “ಮೊಬೈಲ್‌ ಫೋನ್‌ನ ಮಿರರ್‌ ಇಮೇಜ್‌ ಬಳಕೆ ಮಾಡುವುದು ತನಿಖೆಯ ಭಾಗವಾಗಿದ್ದು, ಅದನ್ನು ಬಳಕೆ ಮಾಡಲು ನ್ಯಾಯಾಲಯದ ಅನುಮತಿ ಕೇಳಬೇಕು ಎಂಬ ಕಾನೂನು ಇಲ್ಲ” ಎಂದು ಆಕ್ಷೇಪಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.