Justice AM Khanwilkar
Justice AM Khanwilkar 
ಸುದ್ದಿಗಳು

ನೂತನ ಲೋಕಪಾಲ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಎ ಎಂ ಖಾನ್ವಿಲ್ಕರ್ ನೇಮಕ

Bar & Bench

ಲೋಕಪಾಲದ ನೂತನ ಅಧ್ಯಕ್ಷರನ್ನಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್‌ ಅವರನ್ನು ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ.

ನ್ಯಾಯಮೂರ್ತಿ ಖಾನ್ವಿಲ್ಕರ್‌ ಹಾಗೂ ಆರು ಮಂದಿಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೇಮಕ ಮಾಡಿರುವುದನ್ನು ರಾಷ್ಟ್ರಪತಿ ಕಚೇರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನಿವೃತ್ತ ನ್ಯಾಯಮೂರ್ತಿಗಳಾದ ಲಿಂಗಪ್ಪ ನಾರಾಯಣ ಸ್ವಾಮಿ ಮತ್ತು ಸಂಜಯ್‌ ಯಾದವ್‌ ಅವರು ನ್ಯಾಯಾಂಗ ಸದಸ್ಯರಾಗಿದ್ದು, ಸುಶೀಲ್‌ ಚಂದ್ರ, ಪಂಕಜ್‌ ಕುಮಾರ್‌, ಅಜಯ್‌ ಟಿರ್ಕೆ ಅವರನ್ನು ಇತರೆ ಮೂವರು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರನ್ನು ಒಳಗೊಂಡ ಅತ್ಯುನ್ನತ ಸಮಿತಿಯು ಲೋಕಪಾಲ ಮುಖ್ಯಸ್ಥರನ್ನಾಗಿ ನ್ಯಾ. ಖಾನ್ವಿಲ್ಕರ್‌ ಅವರ ನೇಮಕ ಮಾಡುವ ನಿರ್ಧಾರ ಕೈಗೊಂಡಿತ್ತು.

ಲೋಕಪಾಲ ಮತ್ತು ಲೋಕಾಯುಕ್ತ ಕಾಯಿದೆ 2013ರ ಅಡಿ ಲೋಕಪಾಲ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ಲೋಕಪಾಲ ಕಾಯಿದೆ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತನಿಖೆ ನಡೆಸಲು ಲೋಕಪಾಲಕ್ಕೆ ಜವಾಬ್ದಾರಿ ನೀಡಲಾಗಿದೆ.

ಜಾರ್ಖಂಡ್‌ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪ್ರದೀಪ್‌ ಕುಮಾರ್‌ ಮೊಹಾಂತಿ ಅವರು ಸದ್ಯ ಲೋಕಪಾಲದ ಹಂಗಾಮಿ ಅಧ್ಯಕ್ಷರಾಗಿದ್ದಾರೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದಾಗ ನ್ಯಾ. ಖಾನ್ವಿಲ್ಕರ್‌ ಅವರು ನೀಡಿದ್ದ ಅನೇಕ ತೀರ್ಪುಗಳು ನ್ಯಾಯಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದವು. ಪ್ರಮುಖವಾದ ಎರಡು ತೀರ್ಪುಗಳನ್ನು ಗಮನಿಸುವುದಾದರೆ, ಪ್ರಸ್ತುತ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದ್ದ ಕೋಮುಗಲಭೆಗಳ ಸಂದರ್ಭದಲ್ಲಿ ಘಟಿಸಿದ್ದ ಗುಲ್ಬರ್ಗ್‌ ಸೊಸೈಟಿ ಪ್ರಕರಣದಲ್ಲಿ ಕಾಂಗ್ರೆಸ್‌ ಸಂಸದ ಅಹ್ಸಾನ್‌ ಜಾಫ್ರಿ ಅವರ ಹತ್ಯೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಗುಜರಾತ್‌ ಹೈಕೋರ್ಟ್‌ ಒಪ್ಪಿಕೊಂಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾ. ಖಾನ್ವಿಲ್ಕರ್‌ ಅವರ ನೇತೃತ್ವದ ಪೀಠ ವಜಾ ಮಾಡಿತ್ತು.

ಜಾಫ್ರಿ ಅವರ ಪತ್ನಿ ಜಾಕಿಯಾ ಅವರು ಎಸ್‌ಐಟಿಯ ವರದಿಗಳಿಗೆ ಸಂಬಂಧಿಸಿದಂತೆ ಎತ್ತಿರುವ ಎಲ್ಲಾ ದೂರುಗಳನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೂಕ್ತವಾದ ರೀತಿಯಲ್ಲಿ ಪರಿಗಣಿಸಿದೆ ಎಂದು ನ್ಯಾ. ಖಾನ್ವಿಲ್ಕರ್‌ ಅವರ ನೇತೃತ್ವದ ಪೀಠ ಹೇಳಿತ್ತು. ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ 63 ಆರೋಪಿಗಳಿಗೆ ಎಸ್‌ಐಟಿಯು ಕ್ಲೀನ್‌ಚಿಟ್‌ ನೀಡಿತ್ತು.

ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ತನಿಖೆಗೆ ಜಾರಿ ನಿರ್ದೇಶನಾಲಯವು ಅಳವಡಿಸಿಕೊಂಡಿರುವ ಪ್ರಕ್ರಿಯೆಯು ಸಾಂವಿಧಾನಿಕ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಹಲವು ಅರ್ಜಿದಾರರು ವಾದಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಖಾನ್ವಿಲ್ಕರ್‌ ಅವರ ನೇತೃತ್ವದ ಪೀಠವು ಪಿಎಂಎಲ್‌ಎ ಕಾಯಿದೆಯ ನಿಬಂಧನೆಗಳ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು. ಈ ತೀರ್ಪಿನ ಮರುಪರಿಶೀಲನಾ ಅರ್ಜಿಯು ಸುಪ್ರೀಂ ಕೋರ್ಟ್‌ ಮುಂದಿದೆ.