ವಿದ್ಯಾರ್ಥಿ ಹೋರಾಟಗಾರರಾದ ಆಸಿಫ್ ಇಕ್ಬಾಲ್ ತನ್ಹಾ, ದೇವಾಂಗನಾ ಕಲಿತಾ ಹಾಗೂ ನತಾಶಾ ನರ್ವಾಲ್ ಅವರಿಗೆ ಮಂಗಳವಾರ ಜಾಮೀನು ನೀಡುವ ವೇಳೆ ದೆಹಲಿ ಹೈಕೋರ್ಟ್ ಕೆಲ ಮಹತ್ವದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ನಡೆಸಿದ ಪ್ರತಿಭಟನೆಯಿಂದ ದೇಶದ ಅಡಿಪಾಯ ಅಲುಗಾಡಲು ಸಾಧ್ಯವಿಲ್ಲ. ಕ್ಷುಲ್ಲಕ ಕಾರಣಕ್ಕೆ ಯುಎಪಿಎ ಕಾಯಿದೆ ಬಳಸುವಂತಿಲ್ಲ. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಕಾನೂನು ಬಾಹಿರ ಮತ್ತು ಭಯೋತ್ಪಾದಕ ಕೃತ್ಯವಲ್ಲ ಎಂದು ತಿಳಿಸಿದೆ.
"ಅಭಿಪ್ರಾಯ ಭೇದವನ್ನು ಹತ್ತಿಕ್ಕುವ ಭರದಲ್ಲಿ, ಸಾಂವಿಧಾನಿಕವಾಗಿ ಖಾತರಿ ಪಡಿಸಿದ ಪ್ರತಿಭಟನೆಯ ಹಕ್ಕು ಹಾಗೂ ಭಯೋತ್ಪಾದನಾ ಚಟುವಟಿಕೆಯ ನಡುವಿನ ಗೆರೆಯು ಸರ್ಕಾರದ ಕಣ್ಣಿನಲ್ಲಿ ಮಸುಕಾಗಿದೆ ಎಂದು ಹೇಳಲೇಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇದೇ ಮನಸ್ಥಿತಿ ಬಲಗೊಂಡದ್ದೇ ಅದಲ್ಲಿ ಪ್ರಜಾಪ್ರಭುತ್ವಕ್ಕೆ ಅದು ಎರವಾಗಲಿದೆ" ಎಂದು ಪೀಠ ಅಭಿಪ್ರಾಯಪಟ್ಟಿತು.
ಅಭಿಪ್ರಾಯಭೇದ ಹತ್ತಿಕ್ಕುವ ಭರದಲ್ಲಿ ಸರ್ಕಾರ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದಕ ಚಟುವಟಿಕೆ ನಡುವಣ ಗೆರೆಯು ಸರ್ಕಾರದ ಕಣ್ಣಿನಲ್ಲಿ ಮಸುಕಾಗಿದೆ.ದೆಹಲಿ ಹೈಕೋರ್ಟ್
ತನ್ಹಾ ಅವರಿಗೆ ಜಾಮೀನು ಅಂಗೀಕರಿಸಿದ ಸಿದ್ಧಾರ್ಥ್ ಮೃದುಲ್ ಮತ್ತು ಅನೂಪ್ ಜೆ ಭಂಭಾನಿ ಅವರಿದ್ದ ಪೀಠದ ಪ್ರಮುಖ ಅವಲೋಕನಗಳು ಹೀಗಿವೆ:
ಅಭಿಪ್ರಾಯಭೇದ ಹತ್ತಿಕ್ಕುವ ಭರದಲ್ಲಿ ಸರ್ಕಾರ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದಕ ಚಟುವಟಿಕೆ ನಡುವಣ ರೇಖೆಯನ್ನು ಅಸ್ಪಷ್ಟಗೊಳಿಸಿದೆ.
ಈ ಅಸ್ಪಷ್ಟತೆ ಹೆಚ್ಚಾದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ.
ಶಸ್ತ್ರಾಸ್ತ್ರಗಳಿಲ್ಲದೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಸಂವಿಧಾನದ 19(1)(ಬಿ) ವಿಧಿಯಡಿ ದೊರೆತ ಹಕ್ಕಾಗಿದೆ.
ಪ್ರತಿಭಟನೆಯಿಂದ ಬೆಚ್ಚಿಬೀಳುವ ಸಾಧ್ಯತೆಗಿಂತಲೂ ದೃಢ ನೆಲೆಯ ಮೇಲೆ ದೇಶದ ಅಡಿಪಾಯ ನಿಂತಿದೆ.
ದೇಶದ ಬುನಾದಿಗೆ ಧಕ್ಕೆಯಾಗದಿರಲೆಂದು ಸಂಸತ್ತು ಯುಎಪಿಎ ಕಾಯಿದೆ ರೂಪಿಸಿದ್ದು ಕ್ಷುಲ್ಲಕ ಕಾರಣಗಳಿಗಾಗಿ ಕಾಯಿದೆಯಡಿ ಪ್ರಕರಣ ದಾಖಿಸಿಕೊಂಡರೆ ಅದರ ಆಶಯ ಹಾಳದಂತೆ.
ಯುಎಪಿಎ ಸೆಕ್ಷನ್ 15ರ ಅಡಿ ʼಭಯೋತ್ಪಾದನಾ ಕೃತ್ಯʼ ಎಂಬ ಪದಗುಚ್ಛವನ್ನು ತೀರಾ ಲಘುವಾಗಿ ಬಳಸಲಾಗದು ಮತ್ತು ಹಾಗೆ ಬಳಸಿದರೆ ಅದು ಭಯೋತ್ಪಾದಕ ಕೃತ್ಯದಂತಹ ಘೋರ ಅಪರಾಧವನ್ನು ಕ್ಷುಲ್ಲಕಗೊಳಿಸುತ್ತದೆ.
ಸರ್ಕಾರ ಅಥವಾ ಸಂಸತ್ತಿನ ಕ್ರಮಗಳನ್ನು ಖಂಡಿಸುವಾಗ ಪ್ರಚೋದನಕಾರಿ ಭಾಷಣ ಮಾಡುವುದು, ಚಕ್ಕಾ ಜಾಮ್‌ಗಳನ್ನು ಏರ್ಪಡಿಸುವುದು ಸಾಮಾನ್ಯ.
ಅಂತಹ ಶಾಂತಿಯುತ ಪ್ರತಿಭಟನೆಗಳು ಅನುಮತಿ ರೇಖೆ ಮೀರಿದರೂ ಕೂಡ 'ಭಯೋತ್ಪಾದಕ ಕೃತ್ಯ' ಅಥವಾ 'ಪಿತೂರಿ' ಅಥವಾ 'ಪೂರ್ವಯೋಜಿತ ಕೃತ್ಯಕ್ಕೆ ಸಮನಾಗಿರದು.
ಯುಎಪಿಯ ಕಾಯಿದೆಯಡಿಯ ʼಭಯೋತ್ಪಾದನೆʼಯನ್ನು ಐಪಿಸಿ ವ್ಯಾಪ್ತಿಯಡಿ ಹೇಳಲಾಗುವ ಸಾಂಪ್ರದಾಯಿಕ ಘೋರ ಅಪರಾಧಕ್ಕಿಂತ ಭಿನ್ನವಾಗಿ ಅರ್ಥೈಸಿಕೊಳ್ಳುವ ಅಗತ್ಯವಿದೆ.
ಯುಎಪಿಎ ಮುಖ್ಯ ಧ್ಯೇಯೋದ್ದೇಶ ದೇಶದ ಭದ್ರತೆ ಮೇಲೆ ಪ್ರಭಾವ ಬೀರುವ ವಿಷಯಗಳೊಂದಿಗೆ ತುಸು ಹೆಚ್ಚೂ ಇಲ್ಲದಂತೆ ಕಡಿಮೆಯೂ ಇಲ್ಲದಂತೆ ವ್ಯವಹರಿಸುವುದಾಗಿದೆ.
ಸಾಮಾನ್ಯ ಮತ್ತು ಅದೇ ರೀತಿಯ ಅಪರಾಧಗಳು ಅವುಗಳ ಸ್ವರೂಪ ಮತ್ತು ವ್ಯಾಪ್ತಿ ಎಷ್ಟೇ ಗಂಭೀರ, ತೀವ್ರ ಅಥವಾ ಘೋರವಾಗಿದ್ದರೂ ಅದನ್ನು ಯುಎಪಿಎ ವ್ಯಾಪ್ತಿಗೆ ತರುವುದು ಕಾಯಿದೆಯ ಧ್ಯೇಯವಾಗಲೀ, ಉದ್ದೇಶವಾಗಲೀ ಆಗುವುದಿಲ್ಲ.
ಭಯೋತ್ಪಾದಕ ಚಟುವಟಿಕೆಯನ್ನು ಯುಎಪಿಎ ವ್ಯಾಪ್ತಿಗೆ ತಂದಿರುವ ಮತ್ತು 2004 ಹಾಗೂ 2008ರಲ್ಲಿ ಅದನ್ನು ತಿದ್ದುಪಡಿ ಮಾಡಿರುವ ಸಂಸತ್ತಿನ ಧ್ಯೇಯ ಮತ್ತು ಉದ್ದೇಶ ಭಾರತದ ಭದ್ರತೆ ಮೇಲೆ ಆಳವಾದ ಪ್ರಭಾವ ಬೀರುವ ವಿಷಯಗಳ ಬಗ್ಗೆ ಹೆಚ್ಚೂ ಇಲ್ಲದಂತೆ ಕಡಿಮೆಯೂ ಇಲ್ಲದಂತೆ ವರ್ತಿಸುವುದಾಗಿದೆ.ದೆಹಲಿ ಹೈಕೋರ್ಟ್
ಈ ಚರ್ಚೆಗಳ ಹಿನ್ನೆಲೆಯಲ್ಲಿ ಹೈಕೋರ್ಟ್ “ತನ್ನ ಸಿಮ್ ಅನ್ನು ಸಂಚುಕೋರರಿಗೆ/ಸಹ ಆರೋಪಿಗಳಿಗೆ ನೀಡಿದ್ದರಿಂದ ಅವರು ಆ ಬಳಿಕ ಅದನ್ನು ಬಳಸಿ ಅದರಿಂದ ಸಂದೇಶ ಕಳುಹಿಸಿದ್ದರು ಎಂಬುದು ತನ್ಹಾ ವಿರುದ್ಧ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾದ ಏಕೈಕ ನಿರ್ದಿಷ್ಟ, ಪ್ರತ್ಯೇಕ ಹಾಗೂ ಪ್ರಕಟಿತ ಅಪರಾಧವಾಗಿದೆ” ಎಂದು ಅಭಿಪ್ರಾಯಪಟ್ಟಿದೆ.
ತನ್ಹಾ ಅವರಿಂದ ಪೊಲೀಸರು ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ದೆಹಲಿಯ ಈಶಾನ್ಯ ಭಾಗದಲ್ಲಿ ಮಾತ್ರ ಆರೋಪಿತ ಗಲಭೆ ಉಂಟಾಗಿತ್ತು ಎಂಬ ಅಂಶವನ್ನು ಪರಿಗಣಿಸಿದ ನ್ಯಾಯಾಲಯ ʼಇದೊಂದು ಸಾಮಾನ್ಯ ಪ್ರತಿಭಟನೆಯಲ್ಲ ಬದಲಿಗೆ ದೆಹಲಿಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಉದ್ದೇಶದಿಂದ ಹುರಿಗೊಳಿಸಿದ ಪ್ರತಿರೋಧವಾಗಿತ್ತುʼ ಎಂಬ ಪೊಲೀಸರ ವಾದವನ್ನು ತಿರಸ್ಕರಿಸಿತು.
"ಪೊಲೀಸರ ವಾದ ನಿರ್ದಿಷ್ಟ ವಾಸ್ತವಿಕ ಆರೋಪದ ಮೇಲೆ ರೂಪುಗೊಂಡಿಲ್ಲ. ಆರೋಪಪಟ್ಟಿಯಲ್ಲಿ ಆತಂಕಕಾರಿ ಮತ್ತು ಉತ್ಪ್ರೇಕ್ಷೆಯ ಶಬ್ದ ಬಳಸುವುದರಿಂದ ನಮ್ಮ ಮನವೊಲಿಸಲಾಗದು ಎಂದು ನಾವು ಭಾವಿಸುತ್ತೇವೆ. ವಾದಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವು ಪ್ರಾಸಿಕ್ಯೂಟ್ ಸಂಸ್ಥೆಯ ನಿರ್ಣಯಗಳನ್ನು ಆಧರಿಸಿವೆಯೇ ಹೊರತು ವಾಸ್ತವಿಕ ಆರೋಪಗಳನ್ನಲ್ಲ ಎಂದು ನ್ಯಾಯಾಲಯ ಹೇಳಿತು. ಕಲಿತಾ ಅವರಿಗೆ ಜಾಮೀನು ನೀಡುವಾಗಲೂ ಇಂಥದ್ದೇ ಅಭಿಪ್ರಾಯಗಳನ್ನು ಪೀಠ ವ್ಯಕ್ತಪಡಿಸಿತು.
ನತಾಶಾ ನರ್ವಾಲ್ ಅವರ ಜಾಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯ ಪೊಲೀಸರು ಆರೋಪಿಸಿರುವಂತೆ ಆಕೆ ವಿವಿಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ "ಆಕೆ ಹಿಂಸಾಚಾರ ಪ್ರಚೋದಿಸಿದರು ಅಥವಾ ಯುಎಪಿಎಯಡಿ ವ್ಯಾಖ್ಯಾನಿಸಿರುವಂತೆ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದರು ಎನ್ನಲಾಗದು" ಎಂದು ತಿಳಿಸಿದೆ.
ತನ್ಹಾ ಪರವಾಗಿ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಅಗರ್‌ವಾಲ್, ವಕೀಲರಾದ ಸೌಜನ್ಯಾ ಶಂಕರನ್, ಸಿದ್ಧಾರ್ಥ್ ಸತಿಜಾ, ಅಭಿನವ್ ಸೆಖಾರಿ, ನಿತಿಕಾ ಖೈತಾನ್ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಅಮಿತ್ ಮಹಾಜನ್, ಅಮಿತ್ ಪ್ರಸಾದ್, ರಜತ್ ನಾಯರ್ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.
ಆದೇಶದ ಪ್ರತಿಗಳನ್ನು ಇಲ್ಲಿ ಓದಿ: