ಮೈಸೂರಿನ ಉದಯಗಿರಿ ಶಾಂತಿನಗರದಲ್ಲಿ ಮದರಸ ಶಾಲೆಯ ನಾಲ್ವರು ಮಕ್ಕಳು ನಾಲೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಶಿಕ್ಷಕರಿಬ್ಬರ ವಿರುದ್ಧದ ಆರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲದ ವಿಚಾರಣೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.
ಮಕ್ಕಳನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಶಿಕ್ಷಕರು ಬಹಳ ಎಚ್ಚರಿಕೆಯಿಂದ ಇರಬೇಕು. ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಮಕ್ಕಳು ಶಿಕ್ಷಕರ ಬಳಿ ಬಂದ ಕ್ಷಣದಿಂದ ಮನೆಗೆ ಹಿಂದಿರುಗುವವರೆಗೆ ಮಕ್ಕಳ ವಿಚಾರದಲ್ಲಿ ಶಿಕ್ಷಕರೇ ಜವಾಬ್ದಾರರು. ಆ ಜವಾಬ್ದಾರಿಯಿಂದ ಶಿಕ್ಷಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಹೇಳಿದೆ.
ಪ್ರಕರಣದ ಸಂಬಂಧ ತಮ್ಮ ವಿರುದ್ಧದ ಆರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಮದರಸ-ಇ-ಹಾಜರ ನಿಸ್ವಾನ್ ಶಾಲೆಯ ಶಿಕ್ಷಕರಾದ ನಝಿಯಾ ಬಾನು ಮತ್ತು ನಜಿಮಾ ಬಾನು ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಜಾಗೊಳಿಸಿತು.
ಇದಕ್ಕೂ ಮುನ್ನ, ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರಿಬ್ಬರು ಶಿಕ್ಷಕರಾಗಿದ್ದಾರೆ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಶಿಕ್ಷಕರು ಮಕ್ಕಳನ್ನು ನೋಡಿಕೊಳ್ಳಬೇಕು. ಪ್ರಕರಣದಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಕೋಪದಿಂದ ನುಡಿಯಿತು.
ಅರ್ಜಿದಾರರು ಪರ ವಕೀಲರು, ದುರದೃಷ್ಟವಶಾತ್ ಈ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿದರು. ಇದರಿಂದ ಮತ್ತಷ್ಟು ಕೋಪಗೊಂಡ ಪೀಠವು ಏನು ದುರದೃಷ್ಟವಶಾತೇ? ನಾಲೆ ಬಳಿ ಮಕ್ಕಳನ್ನು ಕರೆದುಕೊಂಡು ಹೋಗಿರುವುದಕ್ಕೆ ಈ ಘಟನೆ ನಡೆದಿದೆ. ಏಕೆ ಮಕ್ಕಳನ್ನು ನಾಲೆ ಬಳಿ ಕರೆದುಕೊಂಡು ಹೋಗಲಾಗಿತ್ತು? ಘಟನೆಗೆ ಅರ್ಜಿದಾರರು ಶಿಕ್ಷಕರು ಹೊಣೆಯಲ್ಲವೇ? ಎಂದು ಪ್ರಶ್ನಿಸಿತು.
ಮಕ್ಕಳನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಶಿಕ್ಷಕರು ಬಹಳ ಎಚ್ಚರಿಕೆಯಿಂದ ಇರಬೇಕು. ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಮಕ್ಕಳು ಶಿಕ್ಷಕರ ಬಳಿ ಬಂದ ಕ್ಷಣದಿಂದ ಅವರು ಮನೆಗೆ ಹೋಗುವವರೆಗೆ ಶಿಕ್ಷಕರೇ ಜವಾಬ್ದಾರರು ಆಗಿರುತ್ತಾರೆ. ಆ ಹೊಣೆಯಿಂದ ಶಿಕ್ಷಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾಲುಜಾರುವಂತಹ ನಾಲೆಯ ಸಮೀಪದ ಇಳಿಜಾರು ಜಾಗಕ್ಕೆ ಯಾರು ಮಕ್ಕಳನ್ನು ಕರೆದುಕೊಂಡು ಹೋದರು? ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಆದರೆ, ಶಿಕ್ಷಕರು ಮಾತ್ರ ಏನು ಆಗಿಲ್ಲ. ನಮ್ಮದೇನು ತಪ್ಪಿಲ್ಲ ಎಂದು ಹೇಳುತ್ತಾರೆ ಎಂದು ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ, ಶಿಕ್ಷಕರು ಮಕ್ಕಳನ್ನು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯಿಂದಲೇ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಮತ್ತು ಶಾಲೆಯಿಂದ ಹೊರಗಡೆಗೆ ಶಿಕ್ಷಕರೊಂದಿಗೆ ಕಳುಹಿಸುತ್ತಾರೆ. ಪ್ರಕರಣದಲ್ಲಿ ನಿರ್ಲಕ್ಷ್ಯ ಮತ್ತು ದುಡುಕುತನ ಏನಿಲ್ಲ. ಉದ್ದೇಶಪೂರ್ವಕವಾಗಿ ನಾಲೆ ಸಮೀಪ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪಾತ್ರೆ ತೊಳೆಯುವಂತೆ ಮಕ್ಕಳಿಗೆ ಶಿಕ್ಷಕರು ಏಕೆ ಹೇಳಿದರು? ನಾಲ್ಕು ಮಕ್ಕಳು ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಮರುಕ ವ್ಯಕ್ತಪಡಿಸಿದ ಪೀಠವು ಯಾವುದೇ ಕಾರಣಕ್ಕೂ ಶಿಕ್ಷಕರ ವಿರುದ್ಧ ಪ್ರಕರಣ ರದ್ದುಪಡಿಸುವಿಲ್ಲ. ಬೇಕಿದ್ದರೆ ಆರೋಪಗಳನ್ನು ಕೈ ಬಿಡಲು ಕೋರಿ ವಿಚಾರಣಾ ನ್ಯಾಯಾಲಯದ ಮುಂದೆಯೇ ಅರ್ಜಿ ಸಲ್ಲಿಸಲಿ ಎಂದೇಳಿ ಅರ್ಜಿ ವಜಾಗೊಳಿಸಿತು.
ಪ್ರಕರಣದ ಹಿನ್ನೆಲೆ: 2025ರ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಾಲೆಯಲ್ಲಿ ಕಾರ್ಯಕ್ರಮ ನಡೆದಿತ್ತು. ಶ್ರೀರಂಗಪಟ್ಟಣದ ತಾಲೂಕು ಮಂಡ್ಯಕೊಪ್ಪಲು ಬಳಿಯ ರಾಮಸ್ವಾಮಿ ನಾಲೆ ಬಳಿಗೆ ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರು ಮ್ಯಾಟ್, ಪಾತ್ರೆ ಸ್ವಚ್ಛಗಳಿಸಲು ಆಟೋದಲ್ಲಿ 13 ಮಕ್ಕಳನ್ನುನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ವಿದ್ಯಾರ್ಥಿಗಳಾದ ಉಮ್ಮೇಹನಿ, ಆಯಿಷಾ, ಆಫ್ರಿನ್ ಮತ್ತು ತಮ್ರಿನ್ ಕಾಲುಜಾರಿ ನೀರಿನಲ್ಲಿ ಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ್ದರು. ಮೃತ ಉಮ್ಮೇಹನಿ ತಂದೆ ಇಸ್ಮಾಯಿಲ್ ಘಟನೆ ಕುರಿತು ದೂರು ನೀಡಿದ್ದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ತನಿಖೆ ನಡೆಸಿ ಅರ್ಜಿದಾರರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 105 ಅಡಿಯಲ್ಲಿ ಕೊಲೆಯಲ್ಲದ ಅಪರಾಧಿಕ ನರಹತ್ಯೆ (ಉದ್ದೇಶಪೂರ್ವಕವಲ್ಲದ ಕೊಲೆ) ಅಪರಾಧದಡಿ ದೋಷಾರೊಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು ಶ್ರೀರಂಗಪಟ್ಟಣದ ಪ್ರಧಾನ ಸಿವಿಲ್ (ಕಿರಿಯ ಶ್ರೇಣಿ) ಮತ್ತು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.