supreme court 
ಸುದ್ದಿಗಳು

ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಿಗೆ ಕೋವಿಡ್; ಸೋಂಕಿನ‌ ದಾಳಿಗೆ ತುತ್ತಾದ ಸರ್ವೋಚ್ಚ ನ್ಯಾಯಾಲಯದ ಸಿಬ್ಬಂದಿ

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಆಸ್ಪತ್ರೆಗೆ ದಾಖಲಾಗಿರುವ ನ್ಯಾಯಮೂರ್ತಿಯೊಬ್ಬರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಹೇಳಲಾಗಿದೆ.

Bar & Bench

ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಒಬ್ಬರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರದವರೆಗೂ ನಿಯಮಿತವಾಗಿ ಕಲಾಪ ನಡೆಸುತ್ತಿದ್ದ ನ್ಯಾಯಮೂರ್ತಿಗಳು ಈ ನಾಲ್ವರಲ್ಲಿ ಇದ್ದಾರೆ ಎಂದು ಸುಪ್ರೀಂ ಕೋರ್ಟ್‌ ಮೂಲಗಳು ತಿಳಿಸಿವೆ.

ಕೋವಿಡ್‌ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿರುವ ನ್ಯಾಯಮೂರ್ತಿಯೊಬ್ಬರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದೂ ಹೇಳಲಾಗಿದೆ.

ಹೆಚ್ಚುವರಿಯಾಗಿ, ಏಪ್ರಿಲ್‌ 24ರಂದು ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಪದಗ್ರಹಣ ಮಾಡಲಿರುವ ಹಿನ್ನೆಲೆಯಲ್ಲಿ ಶಿಷ್ಟಾಚಾರದಂತೆ ರಾಷ್ಟ್ರಪತಿ ಭವನವು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ನ್ಯಾಯಮೂರ್ತಿಗಳ ಕೋವಿಡ್‌ ನೆಗೆಟಿವ್‌ ವರದಿಗಾಗಿ ಹದಿನೈದು ನ್ಯಾಯಮೂರ್ತಿಗಳ ಹೆಸರುಗಳನ್ನು ಆರ್‌ಟಿ-ಪಿಸಿಆರ್‌ ಪರೀಕ್ಷೆಗಾಗಿ ಸುಪ್ರೀಂ ಕೋರ್ಟ್‌ಗೆ ಕಳುಹಿಸಿದೆ.

ನ್ಯಾಯಮೂರ್ತಿಗಳು ಮಾತ್ರವಲ್ಲದೇ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್‌ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಿಬ್ಬಂದಿ ಕ್ವಾರಂಟೈನ್‌ಗೆ ಒಳಗಾಗಿರುವುದರಿಂದ ನ್ಯಾಯಮೂರ್ತಿಗಳಿಗೆ ಸಿಬ್ಬಂದಿ ಕೊರತೆ ಎದುರಾಗಿದೆ ಎಂದು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ.

ತಮ್ಮ ಸಿಬ್ಬಂದಿಯೂ ಕೊರೊನಾ ಸೋಂಕಿತರಾಗಿದ್ದು, ಇದು ಕಷ್ಟದ ಸಮಯ ಎಂದು ನ್ಯಾಯಮೂರ್ತಿ ಎಂ ಆರ್‌ ಶಾ ಅವರು ಮುಕ್ತ ನ್ಯಾಯಾಲಯದಲ್ಲಿ ಹೇಳಿದ್ದರು. ಏಪ್ರಿಲ್‌ 22ರಿಂದ ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾತ್ರ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಹೇಳಿದೆ.