ಅಪ್ರಾಪ್ತ ವಯಸ್ಕ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡಬಹುದಾದ ಅಸಾಧಾರಣ ಸಂದರ್ಭಗಳ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಅನಾರೋಗ್ಯದಿಂದ ಬಳಲುತ್ತಿರುವ ತಂದೆಗೆ 17 ವರ್ಷದ ಬಾಲಕಿ ತನ್ನ ಪಿತ್ತಜನಕಾಂಗ ದಾನ ಮಾಡಲು ಅನುಮತಿಸಿದ ಹೈಕೋರ್ಟ್ ಈ ಆದೇಶ ನೀಡಿತು.
ಮಾನವ ಅಂಗಾಂಗ ಮತ್ತು ಅಂಗಾಂಶ ಕಸಿ ನಿಯಮಾವಳಿ- 2014ರ ನಿಯಮ 5 (3) (ಜಿ) ಅಸಾಧಾರಣ ವೈದ್ಯಕೀಯ ಸಂದರ್ಭಗಳಲ್ಲಿ, ಅಪ್ರಾಪ್ತ ವಯಸ್ಕರು ಜೀವಂತ ಅಂಗಾಂಶ ಮತ್ತು ಅಂಗಗಳನ್ನು ದಾನ ಮಾಡಲು ಅನುಮತಿಸಬಹುದು ಎಂದು ಸೂಚಿಸುತ್ತದೆ ಎಂಬುದನ್ನು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಗಮನಿಸಿದರು.
ಏಮ್ಸ್ ವೈದ್ಯಕೀಯ ಮಂಡಳಿ ನೀಡಿದ ವರದಿಯ ದೃಷ್ಟಿಯಿಂದ ಅರ್ಜಿದಾರೆ ತನ್ನ ಪಿತ್ತಜನಕಾಂಗದ (ಯಕೃತ್ತು) ಒಂದು ಭಾಗವನ್ನು ತಂದೆಗೆ ದಾನ ಮಾಡಲು ದೈಹಿಕವಾಗಿ ಸದೃಢರಾಗಿದ್ದು ಅದರಿಂದ ಅವರ ಜೀವಕ್ಕೆ ತೊಂದರೆ ಉಂಟಾಗುವುದಿಲ್ಲ ಮತ್ತು ಆಕೆಯ ತಂದೆಯ ಯಕೃತ್ತಿನ ಕಾಯಿಲೆಯು ಅಂತಿಮ ಹಂತದಲ್ಲಿರುವುದರಿಂದ ತುರ್ತಾಗಿ ಯಕೃತ್ತಿನ ಕಸಿ ಅಗತ್ಯವಿದೆ ಎಂಬ ಅಂಶವನ್ನು ಪರಿಗಣಿಸಿ ತಂದೆಗೆ ಪಿತ್ತಜನಕಾಂಗ ದಾನ ಮಾಡಲು ಅನುಮತಿಸುವುದಕ್ಕೆ ತಾನು ಒಲವು ಹೊಂದಿರುವುದಾಗಿ ನ್ಯಾಯಾಲಯ ಹೇಳಿದೆ.
ಅಪ್ರಾಪ್ತ ವಯಸ್ಕರು ಅಂಗಾಂಗ ಅಥವಾ ಅಂಗಾಂಶಗಳನ್ನು ದಾನ ಮಾಡಲು ಇರಬೇಕಾದ "ಅಸಾಧಾರಣ ವೈದ್ಯಕೀಯ ಕಾರಣಗಳು" ಯಾವುವು ಎಂಬುದನ್ನು ಮಾನವ ಅಂಗಾಂಗ ಮತ್ತು ಅಂಗಾಂಶ ಕಸಿ ನಿಯಮಾವಳಿ- 2014 ವಿವರಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಹಾಗೆ ದಾನಕ್ಕೆ ಅನುಮತಿ ನೀಡುವಾಗ ಅಥವಾ ತಿರಸ್ಕರಿಸುವಾಗ ಇದು ಮನಸೋಇಚ್ಛೆಯ ನಿರ್ಧಾರಕ್ಕೆ ಕಾರಣವಾಗಬಹುದು. ಆದ್ದರಿಂದ, ಅಂತಹ ಅಸಾಧಾರಣ ವೈದ್ಯಕೀಯ ಕಾರಣಗಳನ್ನು ಸೂಚಿಸುವ, ದೇಶದೆಲ್ಲೆಡೆ ಅಳವಡಿಸಿಕೊಳ್ಳಬಹುದಾದಂತಹ ಮಾರ್ಗಸೂಚಿಗಳನ್ನು ಎರಡು ತಿಂಗಳೊಳಗೆ ರೂಪಿಸುವಂತೆ ನ್ಯಾಯಮೂರ್ತಿ ಪ್ರಸಾದ್ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಆದೇಶಿಸಿದರು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]