Acting Chief Justice Alok Aradhe and Justice J M Khazi of Karnataka HC 
ಸುದ್ದಿಗಳು

[ಆ್ಯಂಬುಲೆನ್ಸ್‌ ಸುಗಮ ಸಂಚಾರ] ಸಂಪುಟ ನಿರ್ಣಯ ಅನುಷ್ಠಾನ; ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸೇವೆ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ನಿರ್ಣಿಯಿಸಿದೆ. ಅದಕ್ಕಾಗಿ 1,260 ಕೋಟಿ ರೂಪಾಯಿ ಮೊತ್ತದ ಟೆಂಡರ್ ಕರೆಯಲು ಮಾರ್ಚ್‌ 4ರಂದು ಆದೇಶ ಹೊರಡಿಸಿದೆ ಎಂದು ತಿಳಿಸಿದ ಸರ್ಕಾರ.

Bar & Bench

‘ಗೋಲ್ಡನ್ ಅವರ್’ ಅವಧಿಯಲ್ಲಿ ರೋಗಿಗಳು ಅಥವಾ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವಾಗ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ’ಯ ಜಾರಿಗೆ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯದ ಅನುಷ್ಠಾನಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆಯ ವೇಳೆ ನ್ಯಾಯಾಲಯವು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆಯನ್ನು ಜಾರಿ ಮಾಡಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಪೀಠವು ಅಸಮಾಧಾನ ಸಹ ವ್ಯಕ್ತಪಡಿಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ವಿಜಯಕುಮಾರ ಎ.ಪಾಟೀಲ್ ಅವರು “ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ ಜಾರಿಗಾಗಿ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸೇವೆಯನ್ನು ಮೇಲ್ದರ್ಜೆಗೇರಿಸಲು 2022ರ ಫೆಬ್ರವರಿ 18ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಅದಕ್ಕಾಗಿ 1,260 ಕೋಟಿ ರೂಪಾಯಿ ಮೊತ್ತದ ಟೆಂಡರ್ ಕರೆಯಲು ಮಾರ್ಚ್‌ 4ರಂದು ಆದೇಶ ಹೊರಡಿಸಿದೆ. ಆ್ಯಂಬುಲೆನ್ಸ್ ತುರ್ತು ಸೇವೆಗೆ ಕೋರಿ ಮಾಡುವ ಕರೆಗಳನ್ನು ಸ್ವೀಕರಿಸಲು 75 ಸೀಟು ಸಾಮರ್ಥ್ಯವಿರುವ ಕಾಲ್ ಸೆಂಟರ್ ತೆರೆಯಲು ಹಾಗೂ ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲು ಸರ್ಕಾರ ತೀರ್ಮಾನಿಸಿದೆ” ಎಂದು ವಿವರಿಸಿದರು.

“ಸದ್ಯ ಟೆಂಡರ್ ಅಧಿಸೂಚನೆಯ ಕರಡು ಸಿದ್ಧಪಡಿಸಿ, ನ್ಯಾಯಮೂರ್ತಿ ರತ್ನಕಲಾ ಅವರ ನೇತೃತ್ವದ ಟೆಂಡರ್ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಲಾಗಿದೆ. ಸಮಿತಿ ಅನುಮೋದನೆ ನೀಡಿದ ನಂತರ ಟೆಂಡರ್ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು” ಎಂದು ಪೀಠವನ್ನು ಕೋರಿದರು.

ಇದಕ್ಕೆ ಒಪ್ಪದ ಪೀಠವು “ಕಳೆದ ಫೆಬ್ರವರಿಯಲ್ಲಿ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಸರ್ಕಾರವು ಮಾರ್ಚ್‌ 4ರಂದು ಆದೇಶ ಹೊರಡಿಸಿದೆ. ಇದೀಗ ನಾವು ಜುಲೈನಲ್ಲಿದ್ದೇವೆ. ಅಂದರೆ ಸರ್ಕಾರ ಆದೇಶ ಹೊರಡಿಸಿಯೇ ನಾಲ್ಕು ತಿಂಗಳು ಕಳೆದಿದೆ. ಆ್ಯಂಬುಲೆನ್ಸ್ ಸೇವೆ ಕಲ್ಪಿಸುವುದು ತುರ್ತು ಸಂದರ್ಭದಲ್ಲಿ ಮಾತ್ರ. ಹಾಗಾಗಿ, ಯೋಜನೆ ಜಾರಿ ಮಾಡಲು ಮತ್ತಷ್ಟು ವಿಳಂಬ ಮಾಡಿದರೆ ತುರ್ತು ಸೇವೆ ಕಲ್ಪಿಸುವ ಉದ್ದೇಶವೇ ವಿಫಲವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಿದೆ” ಎಂದು ಸೂಚಿಸಿತು.

“ಅಲ್ಲದೆ, 2022ರ ಫೆಬ್ರವರಿ 18ರಂದು ಸಚಿವ ಸಂಪುಟ ಕೈಗೊಂಡ ನಿರ್ಣಯ ಮತ್ತು ಮಾರ್ಚ್‌ 4ರಂದು ಸರ್ಕಾರ ಹೊರಡಿಸಿರುವ ಆದೇಶದ ಜಾರಿಗೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಜುಲೈ 27ರೊಳಗೆ ಸರ್ಕಾರ ವರದಿ ಸಲ್ಲಿಸಬೇಕು. ಆ ವರದಿಯಲ್ಲಿ ಯಾವಾಗ ಟೆಂಡರ್ ಕರೆಯಲಾಗುತ್ತದೆ ಮತ್ತು ಯಾವಾಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎಂಬ ಬಗ್ಗೆ ವೇಳಾಪಟ್ಟಿಯನ್ನು ಉಲ್ಲೇಖಿಸಬೇಕು” ಎಂದು ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ. ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಲಾಗಿದೆ.