Karnataka High Court
Karnataka High Court 
ಸುದ್ದಿಗಳು

ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ ಜಾರಿಗೆ ಟೆಂಡರ್: ಹೈಕೋರ್ಟ್‌ಗೆ ಸರ್ಕಾರದಿಂದ ವೇಳಾಪಟ್ಟಿ ಸಲ್ಲಿಕೆ

Bar & Bench

‘ಗೋಲ್ಡನ್ ಅವರ್’ ಅವಧಿಯಲ್ಲಿ ರೋಗಿಗಳು ಅಥವಾ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವಾಗ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ’ಯ ಜಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವ ಸಂಬಂಧ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ವೇಳಾಪಟ್ಟಿ ಸಲ್ಲಿಸಿದೆ.

ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಸರ್ಕಾರದ ಪರ ವಕೀಲರು ಜುಲೈ 19ರಂದು ನ್ಯಾಯಾಲಯ ನೀಡಿದ್ದ ನಿರ್ದೇಶನದ ಅನುಸಾರ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಸಲ್ಲಿಸಿದ ವೇಳಾಪಟ್ಟಿಯನ್ನು ಪೀಠಕ್ಕೆ ಸಲ್ಲಿಸಿದರು.

ಇದನ್ನು ಪರಿಗಣಿಸಿದ ಪೀಠವು ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಇದರಿಂದ ಯೋಜನೆ ಜಾರಿಗೆ ವಿಳಂಬ ಮಾಡಬಾರದು. ಸರ್ಕಾರವು ವೇಳಾಪಟ್ಟಿಗೆ ಬದ್ಧವಾಗಿರಬೇಕು. ಟೆಂಡರ್ ಪ್ರಕ್ರಿಯೆಯ ಪ್ರಗತಿ ವರದಿಯನ್ನು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 25ಕ್ಕೆ ಮುಂದೂಡಿತು.

ವೇಳಾಪಟ್ಟಿಯಲ್ಲಿ ಏನಿದೆ?

2022ರ ಆಗಸ್ಟ್‌ 29ರೊಳಗೆ ಪೂರ್ವ ಟೆಂಡರ್ ಪರಿಶೀಲನಾ ಸಮಿತಿಯಿಂದ ಅನುಮೋದನೆ ಸಿಗುವ ಸಾಧ್ಯತೆಯಿದೆ. ಆಗಸ್ಟ್‌ 30ರಂದು ಟೆಂಡರ್ ಆಹ್ವಾನಿಸಲಾಗುವುದು. ಸೆಪ್ಟೆಂಬರ್‌ 8ರಂದು ಬಿಡ್ಡಿಂಗ್ ಪೂರ್ವ ಸಭೆ ನಡೆಸಲಾಗುವುದು. ಸೆಪ್ಟೆಂಬರ್‌ 9 ಬಿಡ್ಡಿಂಗ್ ಪೂರ್ವದ ಬಗ್ಗೆ ವಿಚಾರಿಸಲು ಕೊನೆಯ ದಿನವಾಗಿದೆ. ಸೆಪ್ಟೆಂಬರ್‌ 30 ಟೆಂಡರ್ ಸಲ್ಲಿಕೆಗೆ ಕೊನೆ ದಿನ. ಅಕ್ಟೋಬರ್‌ 3ರಂದು ತಾಂತ್ರಿಕ ಪ್ರಸ್ತಾವನೆ ಆರಂಭ. ಅಕ್ಟೋಬರ್‌ 17ರಂದು ದರ ಪ್ರಸ್ತಾವನೆ ಆರಂಭ. ನಂತರದ 15 ದಿನದಲ್ಲಿ ಯಶಸ್ವಿ ಸೇವಾದಾರರಿಗೆ ಕೋರಿಕೆ ಪತ್ರ (ಲೆಟರ್ ಆಫ್ ಇಂಡೆಂಟ್‌) ನೀಡಲಾಗುವುದು. ಇದಾದ 15 ದಿನಗಳಲ್ಲಿ ಟೆಂಡರ್ ನೀಡಲಾಗುವುದು ಎಂದು ವೇಳಾಪಟ್ಟಿಯಲ್ಲಿ ಸರ್ಕಾರ ತಿಳಿಸಿದೆ.