ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಾ.ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ ನ್ಯಾಯಮೂರ್ತಿ ಬಿ ಆರ್‌ ಗವಾಯಿ 
ಸುದ್ದಿಗಳು

ವಾಕ್‌ ಸ್ವಾತಂತ್ರ್ಯದ ಹಕ್ಕಿನ ವ್ಯಾಪ್ತಿಯೊಳಗೆ ಮಾಹಿತಿ ಹಕ್ಕು ತರುವುದು ಚುನಾವಣಾ ದೃಷ್ಟಿಯಿಂದ ಮುಖ್ಯ: ನ್ಯಾ. ಗವಾಯಿ

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಅವರು ಚುನಾವಣಾ ಬಾಂಡ್ ಪ್ರಕರಣದಲ್ಲಿ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಚರ್ಚಿಸುತ್ತಾ ಈ ವಿಚಾರ ತಿಳಿಸಿದರು.

Bar & Bench

ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ವ್ಯಾಪ್ತಿಗೆ ಮಾಹಿತಿ ಹಕ್ಕನ್ನು ಸೇರ್ಪಡೆ ಮಾಡುವುದು ಜನ ಚುನಾವಣೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ಆರ್‌ ಗವಾಯಿ ತಿಳಿಸಿದರು.

ದೇಶದ ಸಂವಿಧಾನಕ್ಕೆ ಎಪ್ಪತ್ತೈದು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕೊಲಂಬಿಯಾ ಕಾನೂನು ಶಾಲೆ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ʼ75 ವರ್ಷಗಳ ಪರಿವರ್ತಕ ಸಾಂವಿಧಾನಿಕತೆ ʼಎಂಬ ವಿಷಯದ ಕುರಿತು ಅವರು ಮಾತನಾಡಿದರು. ಚುನಾವಣಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈಚೆಗೆ ನೀಡಿದ ತೀರ್ಪಿನ ಬಗ್ಗೆ ಚರ್ಚಿಸುತ್ತಾ ಅವರು ಈ ವಿಚಾರ ತಿಳಿಸಿದರು.

"ಅನಾಮಧೇಯ ಚುನಾವಣಾ ಬಾಂಡ್‌ಗಳ ಸಿಂಧುತ್ವ ಕುರಿತಾದ ಇತ್ತೀಚಿನ ತೀರ್ಪಿನಲ್ಲಿ, ರಾಜಕೀಯ ಪಕ್ಷಗಳಿಗೆ ಹಣಕಾಸು ದೇಣಿಗೆ ನೀಡಿದ ಮಾಹಿತಿಯನ್ನು ಗೌಪ್ಯತೆಯ ಆಧಾರದಲ್ಲಿ ಮತದಾರರಿಗೆ ಬಹಿರಂಗಪಡಿಸದೇ ಇರಲಾಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮಾಹಿತಿ ಹಕ್ಕನ್ನು ಸೇರ್ಪಡೆ ಮಾಡಲು ಅನುಚ್ಛೇದ 19(1)(ಎ) ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಿಸ್ತರಿಸಿದರೆ ಅದು ನಾಗರಿಕರು ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ನಿರ್ಣಾಯಕವಾಗುತ್ತದೆ, ಇದು ಪ್ರಜಾಪ್ರಭುತ್ವದ ಆಂತರಿಕ ಲಕ್ಷಣವಾಗಿದೆ" ಎಂದು ಅವರು ಹೇಳಿದರು.

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆಯುವ ಹಕ್ಕು ಮತದಾರರಿಗೆ ಇದೆ ಎಂದು ಸುಪ್ರೀಂ ಕೋರ್ಟ್ 2002ರಲ್ಲಿ ನೀಡಿದ ತೀರ್ಪನ್ನು ಅವರು ಇದೇ ವೇಳೆ ಸ್ಮರಿಸಿದರು.

ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ನ್ಯಾ. ಗವಾಯಿ ಅವರು ಈ ಸಂದರ್ಭದಲ್ಲಿ ಗೌರವ ಸಲ್ಲಿಸಿದರು.

"ಡಾ.ಅಂಬೇಡ್ಕರ್ ಮತ್ತು ಭಾರತದ ಸಂವಿಧಾನದಿಂದಾಗಿ ನಾನು ಈ ಸ್ಥಿತಿಗೆ ತಲುಪಿದ್ದೇನೆ" ಎಂದು ನ್ಯಾಯಮೂರ್ತಿ ಗವಾಯಿ ತಿಳಿಸಿದರು.

ನ್ಯಾಯಮೂರ್ತಿ ಬಿ.ಆರ್.ಗವಾಯಿ

ಭಾರತದ ಸಂವಿಧಾನದ ಪರಿವರ್ತನಾತ್ಮಕ ಸ್ವರೂಪವನ್ನು ಕಾರ್ಯರೂಪಕ್ಕೆ ತರಲು ಶಾಸಕಾಂಗ ಮತ್ತು ಭಾರತದ ಸುಪ್ರೀಂ ಕೋರ್ಟ್ ಮಾಡಿದ ಪ್ರಯತ್ನಗಳ ಬಗ್ಗೆ ನ್ಯಾಯಮೂರ್ತಿ ಗವಾಯಿ ಮಾತನಾಡಿದರು.

ಭಾರತದ ಆಡಳಿತ ವ್ಯವಸ್ಥೆಯನ್ನು ವಸಾಹತುಶಾಹಿಯಿಂದ ಪ್ರಜಾಪ್ರಭುತ್ವಕ್ಕೆ ಮತ್ತು ರಾಣಿ ಆದೇಶದಿಂದ ಜನಾದೇಶಕ್ಕೆ ಬದಲಿಸಿರುವುದಕ್ಕೆ ಭಾರತದ ಸಂವಿಧಾನ ಸಾಕ್ಷಿಯಾಗಿದೆ. ಸಂವಿಧಾನದ ತತ್ವಗಳ ಆಧಾರದ ಮೇಲೆ ಶಾಸಕಾಂಗ ಮತ್ತು ಕಾರ್ಯಾಂಗದ ಕ್ರಮಗಳ ಸಿಂಧುತ್ವವನ್ನು ನಿರ್ಧರಿಸುವಲ್ಲಿ ನ್ಯಾಯಾಲಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು.

ಎಲ್ಲಾ ನಾಗರಿಕರಿಗೆ ನ್ಯಾಯ, ಸಮಾನತೆ ಮತ್ತು ಘನತೆಯನ್ನು ಒದಗಿಸಲು ಪ್ರಯತ್ನಿಸುವ ಪರಿವರ್ತಕ ದಾಖಲೆ ಎಂದು ಭಾರತೀಯ ಸಂವಿಧಾನವನ್ನು ಮೊದಲಿನಿಂದಲೂ ಶ್ಲಾಘಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು.