ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಸುಪ್ರೀಂ ಕೋರ್ಟ್‌ನ ತೀರ್ಪುಗಳಲ್ಲಿ ಭಾರತೀಯತೆಯ ಸ್ಪರ್ಶ ತಂದಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಶ್ಲಾಘಿಸಿದರು.
ನವೆಂಬರ್ 23 ರಂದು ನಿವೃತ್ತರಾಗಲಿರುವ ಸಿಜೆಐ ಗವಾಯಿ ಅವರಿಗೆ ಇಂದು ಕೊನೆಯ ಕರ್ತವ್ಯದ ದಿನ. ಮುಂದಿನ ಸಿಜೆಐ ಸೂರ್ಯ ಕಾಂತ್ ಅವರೊಂದಿಗೆ ವಿದಾಯ ಕೋರುವ ವಿಧ್ಯುಕ್ತ ಪೀಠದಲ್ಲಿ ಭಾಗಿಯಾಗಿದ್ದ ಅವರನ್ನು ಎಸ್ ಜಿ ಮೆಹ್ತಾ ಪ್ರಶಂಸಿಸಿದರು.
ಗವಾಯಿ ಅವರು ಸಿಜೆಐ ಆದ ಬಳಿಕ ಮತ್ತು ನ್ಯಾ. ಸೂರ್ಯಕಾಂತ್ ಅವರನ್ನೂ ಒಳಗೊಂಡಂತೆ ತೀರ್ಪುಗಳಲ್ಲಿ ಭಾರತೀಯತೆಯ ಹೊಸ ಗಾಳಿ ಬೀಸಲಾರಂಭಿಸಿದ ಎಂದು ಮೆಹ್ತಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, "ರಾಜ್ಯಪಾಲರ ತೀರ್ಪಿನಲ್ಲಿ, ನಾವು ಒಂದೇ ಒಂದು ವಿದೇಶಿ ತೀರ್ಪನ್ನು ಅವಲಂಬಿಸಲಿಲ್ಲ. ಸ್ವದೇಶಿ ವ್ಯಾಖ್ಯಾನವನ್ನು ಬಳಸಿದ್ದೇವೆ " ಎಂದರು.
ಇದೇ ವೇಳೆ, ಮೆಹ್ತಾ ಅವರು ಸಿಜೆಐ ಅವರು ಕಿರಿಯ ವೃತ್ತಿ ಬಾಂಧವರಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದರು. ಜೊತೆಗೆ ವಕೀಲರೊಂದಿಗೆ ಮುಕ್ತ ರೀತಿಯ ಸಂವಹನ ನಡೆಸುತ್ತಿದ್ದರು ಎಂದು ಮೆಚ್ಚುಗೆ ಸೂಚಿಸಿದರು.
ರಾಜ್ಯಪಾಲರ ತೀರ್ಪಿನಲ್ಲಿ, ನಾವು ಒಂದೇ ಒಂದು ವಿದೇಶಿ ತೀರ್ಪನ್ನು ಉಲ್ಲೇಖಿಸಲಿಲ್ಲ. ಸ್ವದೇಶಿ ವ್ಯಾಖ್ಯಾನವನ್ನು ಬಳಸಿದ್ದೇವೆ.ಸಿಜೆಐ ಬಿ.ಆರ್. ಗವಾಯಿ
ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಮಾತನಾಡಿ ಸಂಸ್ಥೆಗೆ ಸಿಜೆಐ ಗವಾಯಿ ಅವರು ನೀಡಿದ ಕೊಡುಗೆಯ ಬಗ್ಗೆ ಸ್ಮರಿಸಿದರು. ಅಲ್ಲದೆ ಮರಾಠಿಯಲ್ಲಿ ಭೂಷಣ ಎಂದರೆ ಅಲಂಕಾರ ಎಂದರ್ಥ. ಸಿಜೆಐ ಗವಾಯಿ ಅವರು ನ್ಯಾಯಾಂಗಕ್ಕೆ ಭೂಷಣಪ್ರಾಯರು ಎಂದರು.
ಹಿರಿಯ ವಕೀಲ ಕಪಿಲ್ ಸಿಬಲ್ ಮಾತನಾಡಿ ಸುಪ್ರೀಂ ಕೋರ್ಟ್‌ನಲ್ಲಿ ಇದೀಗ ಅತಿಗಣ್ಯ ವರ್ಗ ಎಂಬುದಿಲ್ಲ. ಪುಟ್ಟ ಊರಿನಿಂದ ಬಂದು ಕ್ರೀಡೆಯಲ್ಲಿ ಸಾಧನೆ ಮಾಡಿದ ಮಹೇಂದ್ರ ಸಿಂಗ್ ಧೋನಿ ರೀತಿ ನ್ಯಾಯಾಂಗದಲ್ಲಿಯೂ ಸರಳ ಹಿನ್ನೆಲೆಯ ನ್ಯಾಯಾಧೀಶರು ಬರಲು ಅವಕಾಶ ದೊರೆತಿದೆ ಎಂದರು.
ನಾನು 1970ರ ದಶಕದಲ್ಲಿ ಇಲ್ಲಿ ಪ್ರಾಕ್ಟೀಸ್ ಮಾಡಿದಾಗ, ಅದು ಗಣ್ಯ ನ್ಯಾಯಾಲಯವಾಗಿತ್ತು. ಉತ್ತಮ ನ್ಯಾಯಾಧೀಶರಿದ್ದರು. ಆದರೆ ಅವರು ಇಂದಿನ ಧೋನಿಗಳಲ್ಲ.ಕಪಿಲ್ ಸಿಬಲ್
ವಿದಾಯ ಭಾಷಣದಲ್ಲಿ ಗವಾಯಿ ಅವರು ಅಧಿಕಾರದ ಕಾರಣಕ್ಕೆ ನ್ಯಾಯಮೂರ್ತಿಯಾಗುವುದಲ್ಲ. ಅದು ಸೇವೆ ಮಾಡಲು ಇರುವ ಅವಕಾಶ. ಡಾ. ಅಂಬೇಡ್ಕರ್ ಮತ್ತು ನಮ್ಮ ತಂದೆ ನನಗೆ ಸ್ಫೂರ್ತಿ. ಜೊತೆಗೆ ವಕೀಲರೆಲ್ಲಾ ನನ್ನ ಪಾಲಿನ ಗುರುಗಳು ಎಂದು ಕೃತಜ್ಙತೆ ಸಲ್ಲಿಸಿದರು.
ಸಿಜೆಐ ಅವರೊಂದಿಗಿನ ಸುದೀರ್ಘ ಕಾಲದ ಒಡನಾಟವನ್ನು ನ್ಯಾ. ಸೂರ್ಯಕಾಂತ್ ಮೆಲುಕು ಹಾಕಿದರು. ಸಿಜೆಐ ಅವರು ತಮ್ಮ ವೃತ್ತಿ ಬದುಕಿನಲ್ಲಿ ತೋರಿದ ಸ್ಥೈರ್ಯದ ನಿರ್ಧಾರವೊಂದನ್ನು ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಅವರು ನೆನೆದರು.