CJI NV Ramana, Justice Surya Kant, Justice AS Bopanna
CJI NV Ramana, Justice Surya Kant, Justice AS Bopanna 
ಸುದ್ದಿಗಳು

ವಿಚಾರಣೆಗೆ ಒಳಪಟ್ಟವರಿಗೂ ಜೀವಿಸುವ ಮೂಲಭೂತ ಹಕ್ಕು ಬೇಷರತ್ತಾಗಿ ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್‌

Bar & Bench

ಕೇರಳ ಮೂಲದ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವಂತೆ ಬುಧವಾರ ಆದೇಶಿಸಿದ ಸುಪ್ರೀಂ ಕೋರ್ಟ್‌ ಈ ವೇಳೆ ಕೆಲವೊಂದು ಪ್ರಮುಖ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು. ಜೀವಿಸುವ ಮೂಲಭೂತ ಹಕ್ಕು ವಿಚಾರಣಾಧೀನ ಕೈದಿಗಳಿಗೂ ಸಮನಾಗಿ ಅನ್ವಯಿಸುತ್ತದೆ ಎಂದು ಸಿಜೆಐ ಎನ್‌ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠವು ಆದೇಶದ ವೇಳೆ ಒತ್ತಿ ಹೇಳಿತು (ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ವರ್ಸಸ್‌ ಭಾರತ ಸರ್ಕಾರ).

ಕಪ್ಪನ್‌ ಅವರಿಗೆ ವಿಶೇಷ ಚಿಕಿತ್ಸೆ ಕೊಡಿಸುವುದರಿಂದ ಇತರೆ ಕೈದಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಉತ್ತರ ಪ್ರದೇಶ ಸರ್ಕಾರದ ವಾದವನ್ನು ಪೀಠವು ಅಲ್ಲಗಳೆಯಿತು. "ಜೀವಿಸುವ ಮೂಲಭೂತ ಹಕ್ಕು ಅತ್ಯಂತ ಮಹತ್ವದ್ದಾಗಿದ್ದು ಅದು ಬೇಷರತ್ತಾಗಿ ವಿಚಾರಣಾಧೀನ ಕೈದಿಗಳಿಗೂ ಅನ್ವಯಿಸುತ್ತದೆ. ಈ ಪ್ರಕರಣಕ್ಕೆ ಸಂಬಂದಿಸಿದ ವಿಶೇಷ ಸಂಗತಿಗಳು ಮತ್ತು ಸಂದರ್ಭವನ್ನು ಆಧರಿಸಿ ಇದನ್ನು ಪರಿಗಣಿಸಲಾಗಿದೆ” ಎಂದು ನ್ಯಾಯಾಲಯ ಹೇಳಿತು.

ಬಂಧನಕ್ಕೆ ಒಳಗಾಗಿರುವ ಕೈದಿಯಂತೆಯೇ ಇತರೆ ಕೈದಿಗಳು ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದ ಮಾತ್ರಕ್ಕೆ ಕಪ್ಪನ್‌ ಅವರನ್ನು ದೆಹಲಿಯ ಬೇರಾವುದೇ ಆಸ್ಪತ್ರೆಗೆ ದಾಖಲಿಸದಂತೆ ನಮ್ಮನ್ನು ತಡೆಯಲಾಗದು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಎ ಎಸ್‌ ಬೋಪಣ್ಣ ಅವರನ್ನೊಳಗೊಂಡ ಪೀಠ ಹೇಳಿದೆ.

“ಇತರೆ ಕೈದಿಗಳಿಗೆ ನೀಡಲಾಗುತ್ತಿರುವಂತೆ ಕಪ್ಪನ್‌ ಅವರಿಗೂ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯ ಬಿದ್ದರೆ ಹೆಚ್ಚಿನ ಸೌಕರ್ಯವನ್ನು ಬಂಧಿತರಿಗೆ ಒದಗಿಸಲಾಗುವುದು ಎಂಬ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಭರವಸೆಯ ನಂತರವೂ ಮೇಲಿನ ನಿರ್ದೇಶನ ಹೊರಡಿಸುವುದು ಸರಿಯಾಗಿದೆ ಎಂದು ನಮಗನ್ನಿಸುತ್ತದೆ” ಎಂದು ಪೀಠವು ಹೇಳಿತು.

ತುರ್ತು ವೈದ್ಯಕೀಯ ಕಾರಣದ ಅಗತ್ಯತೆ ನೀಡಿ ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರನ್ನು ಉತ್ತರ ಪ್ರದೇಶದಿಂದ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್‌) ಸ್ಥಳಾಂತರಿಸುವಂತೆ ಕೋರಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನಿನ್ನೆ ಪೀಠ ನಡೆಸಿತ್ತು.

ವಾದಿ-ಪ್ರತಿವಾದಿಗಳನ್ನು ಸುದೀರ್ಘವಾಗಿ ಆಲಿಸಿದ ಪೀಠವು ಕಾನೂನಿನ ಪ್ರಕಾರ ಕಪ್ಪನ್‌ ಅವರನ್ನು ವಶಕ್ಕೆ ಪಡೆದಿರುವುದರಿಂದ ಹೇಬಿಯಸ್‌ ಕಾರ್ಪಸ್‌ ಮನವಿ ಸಲ್ಲಿಸುವುದು ಸರಿಯಲ್ಲ ಎಂದಿದೆ.

“ಬಂಧನದ ಬಳಿಕ ಆರೋಪಿಯನ್ನು ಸಂಬಂಧಪಟ್ಟ ವ್ಯಾಪ್ತಿಗೆ ಒಳಪಟ್ಟಿರುವ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂಬುದು ದಾಖಲೆಗಳಿಂದ ದೃಢಪಟ್ಟಿದೆ. ಆ ಬಳಿಕ ಎಫ್‌ಐಆರ್‌ ದಾಖಲಿಸಲಾಗಿದೆ. ಸದ್ಯ, ಆರೋಪಿತ ಬಂಧಿತನ ವಿರುದ್ಧ ತನಿಖೆಯು ಪೂರ್ಣಗೊಂಡಿದ್ದು, 5000 ಪುಟಕ್ಕೂ ಮೀರಿದ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಸದ್ಯದ ಮನವಿಯನ್ನು ಮುಂದುವರಿಸುವುದು ಈ ನ್ಯಾಯಾಲಯಕ್ಕೆ ವಿವೇಕದ ನಡೆ ಎನಿಸದು” ಎಂದು ನ್ಯಾಯಾಲಯ ಹೇಳಿದೆ.

ಬಂಧಿತ ಆರೋಪಿಯು ಸಂವಿಧಾನದ 226ನೇ ವಿಧಿ ಮತ್ತು ಕ್ರಿಮಿನಲ್‌ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 482ರ ಅಡಿ ಸಂಬಂಧಪಟ್ಟ ನ್ಯಾಯಾಲಯದಿಂದ ಜಾಮೀನು ಪಡೆಯುವುದು ಒಳಗೊಂಡಂತೆ ಇತರೆ ಮಾರ್ಗಗಳನ್ನು ಅನುಸರಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿತು.

“ಬಂಧಿತ ಆರೋಪಿಯ ಸಹವರ್ತಿಗಳು ಈ ವಿಧಾನ ಅನುಸರಿಸಿದ್ದು, ಸಂಬಂಧಪಟ್ಟ ನ್ಯಾಯಾಲಯದಲ್ಲಿ ಜಾಮೀನಿಗೆ ಮನವಿ ಸಲ್ಲಿಸಿದ್ದಾರೆ” ಎಂದು ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಕಪ್ಪನ್‌ ಅವರ ಗಂಭೀರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ದೆಹಲಿಗೆ ವರ್ಗಾಯಿಸುವ ಮನವಿಗೆ ಸಮ್ಮತಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ. “ಬಂಧಿತ ಆರೋಪಿಯ ಆರೋಗ್ಯದ ಸೂಕ್ಷ್ಮ ಸ್ಥಿತಿಯ ಕಾರಣದಿಂದಾಗಿ, ಅವರಿಗೆ ಸಮರ್ಪಕ ಮತ್ತು ಪರಿಣಾಮಕಾರಿ ವೈದ್ಯಕೀಯ ನೆರವು ನೀಡುವುದು ಮತ್ತು ಅವರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಆತಂಕಗಳನ್ನು ನಿವಾರಿಸುವುದು ಅಗತ್ಯವಾಗಿದೆ ಎಂಬುದು ನಮ್ಮ ಅಭಿಪ್ರಾಯ. ನ್ಯಾಯದ ಹಿತದೃಷ್ಟಿಯಿಂದ ಸರಿಯಾದ ವೈದ್ಯಕೀಯ ಚಿಕಿತ್ಸೆಗಾಗಿ ಬಂಧಿತ ಸಿದ್ದಿಕಿ ಕಪ್ಪನ್ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಅಥವಾ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಅಥವಾ ದೆಹಲಿಯ ಯಾವುದೇ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸುವುದು ಅಗತ್ಯವಾಗಿದೆ. ಈ ವಿಚಾರದಲ್ಲಿ ಅಗತ್ಯವಾದುದನ್ನು ತುರ್ತಾಗಿ ಮಾಡಬೇಕಿದೆ” ಎಂದು ಪೀಠ ಹೇಳಿದೆ.