Sukash Chandrashekhar and Supreme Court
Sukash Chandrashekhar and Supreme Court  wikibio.in
ಸುದ್ದಿಗಳು

ನೀವು ಹಣ ನೀಡಿದ ತಿಹಾರ್ ಜೈಲು ಅಧಿಕಾರಿಗಳ ಹೆಸರು ತಿಳಿಸಿ: ವಂಚನೆ ಆರೋಪಿ ಸುಕೇಶ್ ಚಂದ್ರಶೇಖರ್‌ಗೆ ಸುಪ್ರೀಂ ಕೋರ್ಟ್

Bar & Bench

ತನಗೆ ಜೈಲಿನೊಳಗೆ ಐಷಾರಾಮಿ ಸವಲತ್ತು ಒದಗಿಸುವುದಕ್ಕಾಗಿ ₹ 12.5 ಕೋಟಿಗೂ ಹೆಚ್ಚು ಮೊತ್ತ ಪಡೆದ ತಿಹಾರ್‌ ಜೈಲು ಅಧಿಕಾರಿಗಳ ಹೆಸರು ಬಹಿರಂಗಪಡಿಸುವಂತೆ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಆರೋಪಿ, ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಗೆಳೆಯ ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌ಗೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ. [ಸುಕಾಶ್‌ ಚಂದ್ರ ಶೇಖರ್‌ ಅಲಿಯಾಸ್‌ ಸುಕೇಶ್‌ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].

ಸುಕೇಶ್‌ ಅವರನ್ನು ತಿಹಾರ್‌ ಜೈಲಿನಿಂದ ಬೇರೆಡೆಗೆ ಸ್ಥಳಾಂತರಿಸುವ ಅಗತ್ಯವಿದೆಯೇ ಎಂದು ನಿರ್ಧರಿಸುವ ಮೊದಲು ಆರೋಪದ ವಿವರಗಳನ್ನು ದಾಖಲಿಸುವುದರಿಂದ ದೂರ ಸರಿಯುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್, ಎಸ್ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ತಿಳಿಸಿತು.

ಅರ್ಜಿದಾರರು ಕೂಟ ರಚಿಸಿಕೊಂಡಿದ್ದರೋ ಅಥವಾ ಲಂಚ ನೀಡಿದ್ದರೋ ಎಂಬುದನ್ನು ನಿರ್ಧರಿಸುವುದಕ್ಕೆ ಹಣ ಪಡೆದ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು ಮುಖ್ಯವಾಗಿದೆ. ಆದ್ದರಿಂದ ಯಾರಿಗೆಲ್ಲಾ ಹಣ ನೀಡಲಾಗಿದೆ ಎಂಬುದರ ಬಗ್ಗೆ ಮುಂದಿನ ವಿಚಾರಣೆಯೊಳಗೆ ತಿಳಿಸುವಂತೆ ಅವರಿಗೆ ಸೂಚಿಸುತ್ತಿದ್ದೇವೆ ಎಂದು ನ್ಯಾಯಾಲಯ ಹೇಳಿತು.

ಅಕ್ರಮ ಹಣ ವರ್ಗಾವಣೆ ಜೊತೆಗೆ ವಂಚನೆ ಮತ್ತು ಸುಲಿಗೆ ಆರೋಪದಡಿ ಬಂಧಿತರಾಗಿದ್ದ ಚಂದ್ರಶೇಖರ್ ತಿಹಾರ್ ಜೈಲಿನಲ್ಲಿ ಅದ್ದೂರಿ ಜೀವನ ನಡೆಸುತ್ತಿದ್ದರು ಎಂಬ ಆರೋಪಗಳಿವೆ. ತನ್ನ ಜೀವಕ್ಕೆ ಬೆದರಿಕೆ ಇರುವುದರಿಂದ ತಿಹಾರ್‌ ಜೈಲು ಹಾಗೂ ದೆಹಲಿಯಿಂದ ಆಚೆ ಇರುವ ಜೈಲಿಗೆ ತನ್ನನ್ನು ಸ್ಥಳಾಂತರಿಸಬೇಕು ಎಂದು ಕೋರಿ ಸುಕೇಶ್‌ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

“ನಾಳೆಯೇ ಹೆಸರು ತಿಳಿಸಿ. ನುಣುಚಿಕೊಳ್ಳಲು ಬಿಡುವುದಿಲ್ಲ. ಯಾವಾಗ ಹೆಸರು ನೀಡುತ್ತೀರಿ?”
ಸುಪ್ರೀಂ ಕೋರ್ಟ್‌

ಇಂದಿನ ವಿಚಾರಣೆ ವೇಳೆ ಅಧಿಕಾರಿಗಳ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸುಕೇಶ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಆರ್‌ ಬಸಂತ್‌ ತಿಳಿಸಿದಾಗ ನ್ಯಾಯಮೂರ್ತಿ ಯು ಯು ಲಲಿತ್‌ “ನಾಳೆಯೇ ಹೆಸರು ತಿಳಿಸಿ. ನುಣುಚಿಕೊಳ್ಳಲು ಬಿಡುವುದಿಲ್ಲ. ಯಾವಾಗ ಹೆಸರು ನೀಡುತ್ತೀರಿ?” ಎಂದು ಕಟುವಾಗಿ ಪ್ರಶ್ನಿಸಿದರು. ಈ ಹಂತದಲ್ಲಿ ಬಸಂತ್‌ “ಹೆಸರುಗಳನ್ನು ತಿಳಿಸಲು ಹಿಂಜರಿಯುವುದಿಲ್ಲ ಏಳರಿಂದ ಹತ್ತು ದಿನಗಳಲ್ಲಿ ಅಫಿಡವಿಟ್‌ ಮೂಲಕ ಬಹಿರಂಗಪಡಿಸುತ್ತೇವೆ” ಎಂದು ಉತ್ತರಿಸಿದರು.

ನೀವು ಪ್ರಕ್ರಿಯೆಗೆ ಕಿಡಿ ಹೊತ್ತಿಸಿದ್ದೀರಿ. ತುಂಬಾ ಒಳ್ಳೆಯದು. ನಾವು ಪ್ರಯತ್ನ ಪಟ್ಟು ಇದು ಮತ್ತೆ ನಡೆಯದಂತೆ ನೋಡಿಕೊಳ್ಳುತ್ತೇವೆ. ಕಿಡಿ ಹೊತ್ತಿಸಿದ್ದಕ್ಕಾಗಿ ನಿಮಗೆ ಧನ್ಯವಾದ ಹೇಳುತ್ತೇವೆ.
ಸುಪ್ರೀಂ ಕೋರ್ಟ್‌

ಅಷ್ಟಕ್ಕೂ ಮಣಿಯದ ಪೀಠ “ ನೀವು ಸಿಬ್ಬಂದಿಯನ್ನು ಬಳಸಿ ಸಂಪೂರ್ಣ ದಂಧೆ ನಡೆಸುತ್ತಿದ್ದರೆ ಯಾರಿಗೆ ಸುಲಿಗೆಯಾಗಿ ಹಣ ಪಾವತಿಸಿದ್ದೀರಿ ಎಂದು ತಿಳಿಯಲು ಬಯಸುತ್ತೇವೆ. ನೀವು ಪ್ರಕ್ರಿಯೆಗೆ ಚಾಲನೆ ನೀಡಿದ್ದೀರಿ. ತುಂಬಾ ಒಳ್ಳೆಯದು. ನಾವು ಪ್ರಯತ್ನ ಪಟ್ಟು ಇದು ಮತ್ತೆ ನಡೆಯದಂತೆ ನೋಡಿಕೊಳ್ಳುತ್ತೇವೆ. ಕಿಡಿ ಹೊತ್ತಿಸಿದ್ದಕ್ಕಾಗಿ ನಿಮಗೆ ಧನ್ಯವಾದ ಹೇಳುತ್ತೇವೆ” ಎಂದು ಮಾರ್ಮಿಕವಾಗಿ ನುಡಿಯಿತು.

ಸುಕೇಶ್‌ ಜೈಲಿನಲ್ಲಿದ್ದಾಗ ಅಪರಾಧ ಕೂಟ ನಡೆಸುತ್ತಿದ್ದ. ಪೋನ್‌ ಬಳಕೆ ಸೇರಿದಂತೆ ಇತರ ಸವಲತ್ತುಗಳಿಗಾಗಿ ಪ್ರತಿ ತಿಂಗಳು ₹ 1.5 ಕೋಟಿ ನೀಡುತ್ತಿದ್ದ. ಕೆಲವು ಜೈಲು ಅಧಿಕಾರಿಗಳು ಆತನ ಹಣ ಪಾವತಿ ಪಟ್ಟಿಯಲ್ಲಿದ್ದಾರೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿತ್ತು.

ಸುಕೇಶ್‌ ಸರ್ಕಾರಿ ಅಧಿಕಾರಿಯ ಸೋಗಿನಲ್ಲಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಹೆಸರಿನಲ್ಲಿ ಸುಲಿಗೆ ಮಾಡಿದ್ದ. ತನ್ನ ಸುಲಿಗೆಯ ಕಾರ್ಯವಿಧಾನವನ್ನು ಜೈಲಿನಿಂದಲೇ ಮುಂದುವರೆಸಿದ್ದು, ಬೇರೆ ಜೈಲುಗಳ ಮೂಲಕವೂ ಅದನ್ನು ಮಾಡಲು ಮುಂದಾಗಿದ್ದಾನೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಎಸ್‌ ವಿ ರಾಜು ನ್ಯಾಯಾಲಯಕ್ಕೆ ತಿಳಿಸಿದರು.

ಸುಕೇಶ್‌ ಭದ್ರತೆ ನೋಡಿಕೊಳ್ಳುವಂತೆ ಇ ಡಿ ಅಧಿಕಾರಿಗಳಿಗೆ ಸೂಚಿಸಿದ ನ್ಯಾಯಾಲಯ ಪ್ರಕರಣವನ್ನು ಜುಲೈ 26ಕ್ಕೆ ಮುಂದೂಡಿತು.