ಕಾರುಗಳು
ಕಾರುಗಳು 
ಸುದ್ದಿಗಳು

ವಶಪಡಿಸಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳಲ್ಲಿ ದೀರ್ಘಕಾಲ ಇಡುವುದು ವ್ಯರ್ಥ: ಕಾಶ್ಮೀರ ಹೈಕೋರ್ಟ್

Bar & Bench

ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿ ಮಾಡಿರುವ ವಾಹನಗಳನ್ನು ಪೊಲೀಸ್ ಠಾಣೆಗಳಲ್ಲಿ ದೀರ್ಘಕಾಲದವರೆಗೆ ಇಡುವುದು ವ್ಯರ್ಥ ಎಂದು ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ (ಖದೀರ್ ಹುಸೇನ್ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ನಡುವಣ ಪ್ರಕರಣ).

ಅಂತಹ ಪ್ರಕರಣಗಳಿಗೆ ಸಂಬಂಧಿಸಿದ ಆಸ್ತಿಗಳ ಕುರಿತು ನಿರ್ಧರಿಸುವ ಅಧಿಕಾರ ಹೊಂದಿರುವ ನ್ಯಾಯಾಲಯಗಳು ಅಗತ್ಯ ಬಾಂಡ್ ಮತ್ತು ಭದ್ರತೆ ಪಡೆದು ಅದರ ಬಿಡುಗಡೆಗೆ ತಕ್ಷಣ ಸೂಕ್ತ ಆದೇಶ ಹೊರಡಿಸಬೇಕು ಎಂದು ನ್ಯಾಯಮೂರ್ತಿ ವಾಸಿಮ್ ಸಾದಿಕ್ ನರ್ಗಲ್ ತಿಳಿಸಿದರು.

"ಪರಿಸ್ಥಿತಿ ಏನೇ ಇರಲಿ, ವಶಪಡಿಸಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳಲ್ಲಿ ದೀರ್ಘಕಾಲದವರೆಗೆ ಇಡುವುದು ವ್ಯರ್ಥ ಕಸರತ್ತು" ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ವಾಸಿಮ್ ಸಾದಿಕ್ ನರ್ಗಲ್

ಸಿಆರ್‌ಪಿಸಿ ಸೆಕ್ಷನ್ 452ರ ಅಡಿಯಲ್ಲಿ ನ್ಯಾಯಾಲಯ ಯಾವುದೇ ಆಸ್ತಿಯ ಮಾಲೀಕತ್ವ ಅಥವಾ ಅದನ್ನು ನಿರ್ವಹಿಸುವ ಯಾವುದೇ ಹಕ್ಕನ್ನು ನಿರ್ಧರಿಸಲು ಸಾಧ್ಯವಿಲ್ಲವಾದರೂ, ಸ್ವಾಧೀನದ ಆಧಾರದ ಮೇಲೆ ಆಸ್ತಿಯನ್ನು ವಿಲೇವಾರಿ ಮಾಡಬಹುದು ಎಂದು ನ್ಯಾ. ನರ್ಗಲ್ ಹೇಳಿದರು.

"ಸೆಕ್ಷನ್ 452ರ ಅಡಿಯಲ್ಲಿ ನ್ಯಾಯಾಲಯ ನಿರ್ವಹಿಸುವ ಕಾರ್ಯ ನ್ಯಾಯಾಂಗ ಸ್ವರೂಪದ್ದಾಗಿದೆ. ಆ ಆದೇಶ ನೀಡುವಾಗ, ಆಸ್ತಿಯ ಸ್ವಾಧೀನ ಬಯಸುವ ವ್ಯಕ್ತಿಯು ಹಕ್ಕು ಸಾಧಿಸಲು ಇರುವ ಅರ್ಹತೆಯನ್ನು ನ್ಯಾಯಾಲಯ ನಿಸ್ಸಂದೇಹವಾಗಿ ಗೌರವಿಸಬೇಕು" ಎಂದು ಪೀಠ ತಿಳಿಸಿದೆ.

ತಾನು ಸಾಗಿಸುತ್ತಿದ್ದ ಸರಕನ್ನು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ನಿಯಮಾವಳಿಯಡಿ ವಾಹನ ಹಾಗೂ ಅದರಲ್ಲಿದ್ದ ಸರಕನ್ನು ಜಪ್ತಿ ಮಾಡಿದ್ದ ಆದೇಶ ರದ್ದುಗೊಳಿಸಬೇಕು ಮತ್ತು ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಸೊಸೈಟಿಗೆ ಪ್ರಕರಣ ವರ್ಗಾಯಿಸಬೇಕೆಂದು ಕೋರಿ ವಾಹನ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸಂಗತಿಗಳನ್ನು ತಿಳಿಸಿತು.

ವಾಹನದ ಮಾಲೀಕ ಖದೀರ್ ಹುಸೇನ್ ತನ್ನ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಅವರಿದ್ದ ವಾಹನ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅದನ್ನು ಎಸ್‌ಪಿಸಿಎಗೆ ವರ್ಗಾಯಿಸಲು ಪೂಂಚ್ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನಿರ್ದೇಶನ ನೀಡಿದ್ದರು.

ಸಿಜೆಎಂ ಹೊರಡಿಸಿದ ಆದೇಶವನ್ನು ನಂತರ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಪೂಂಚ್ ಎತ್ತಿಹಿಡಿದಿದ್ದರು. ಈ ಆ ಆದೇಶ ರದ್ದುಗೊಳಿಸಿ ತನ್ನ ಸರಕು ಸಾಗಣೆ ವಾಹನವನ್ನು ಬಿಡುಗಡೆಗೊಳಿಸಲು ಆದೇಶಿಸಬೇಕೆಂದು ಕೋರಿ ಹುಸೇನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಕಾನೂನನ್ನು ಪರಿಶೀಲಿಸಿದ ಹೈಕೋರ್ಟ್‌, ಸಿಆರ್‌ಪಿಸಿ ಸೆಕ್ಷನ್ 452ರ ಪ್ರಕಾರ ವಿಚಾರಣೆಯ ಕೊನೆಯಲ್ಲಿ ಪ್ರಕರಣದ ಆಸ್ತಿಯನ್ನು ವಿಲೇವಾರಿ ಮಾಡಲು ತಿಳಿಸುತ್ತದೆ. ಆದರೆ ಸಿಜೆಎಂ ಈ ಸೆಕ್ಷನ್‌ ಬಗ್ಗೆ ಮಾತನಾಡಿಲ್ಲ ಎಂದಿದೆ.

ಹೀಗಾಗಿ, ನ್ಯಾಯಾಲಯ ಸಿಜೆಎಂ ಮತ್ತು ಮೇಲ್ಮನವಿ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿತು. ಪ್ರಕರಣವನ್ನು ಮತ್ತೆ ಸಿಜೆಎಂ ವಿಚಾರಣೆ ನಡೆಸಬೇಕು ಎಂದು ಅದು ಇದೇ ವೇಳೆ ಆದೇಶಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Qadeer Hussain vs UT of JK.pdf
Preview