CJI DY Chandrachud 
ಸುದ್ದಿಗಳು

ಕಾನೂನು ವೃತ್ತಿಯಲ್ಲಿ ಭವಿಷ್ಯ ಮಹಿಳೆಯರಿಗೆ ಸೇರಿದ್ದು: ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌

ಕಾನೂನು ವೃತ್ತಿಗೆ ಸಂಬಂಧಿಸಿದಂತೆ ಕಾಲಮಾನ ಬದಲಾಗಿದ್ದು, ನ್ಯಾಯಾಂಗ ಅಧಿಕಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಿಂಗ ವೈವಿಧ್ಯ ಕಾಣಬಹುದಾಗಿದೆ ಎಂದು ಸಿಜೆಐ ಹೇಳಿದ್ದಾರೆ.

Bar & Bench

ಕಾನೂನು ವೃತ್ತಿಯಲ್ಲಿ ಭವಿಷ್ಯವು ಮಹಿಳೆಯರಿಗೆ ಸೇರಿದೆ ಎಂದು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದರು.

ಆಂಧ್ರಪ್ರದೇಶದ ನ್ಯಾಯಾಂಗ ಅಕಾಡೆಮಿ ಮತ್ತು ಹೈಕೋರ್ಟ್‌ನ ಹಲವು ಡಿಜಿಟಲೀಕರಣದ ಯೋಜನೆಗಳನ್ನು ಉದ್ಘಾಟಿಸಿ ಅವರು ಇತ್ತೀಚೆಗೆ ಮಾತನಾಡಿದರು.

“ಕಾಲ ಬದಲಾಗಿದೆ. ಹಲವು ರಾಜ್ಯಗಳಲ್ಲಿ ನ್ಯಾಯಾಂಗ ಕ್ಷೇತ್ರಕ್ಕೆ ಮಹಿಳೆ ಮತ್ತು ಪುರುಷರು ಅಪಾರ ಸಂಖ್ಯೆಯಲ್ಲಿ ಲಗ್ಗೆ ಇಡುತ್ತಿದ್ದಾರೆ. ಪುರುಷರ ಹೋಲಿಕೆಯಲ್ಲಿ ಮಾಡಿದರೆ ನ್ಯಾಯಾಂಗ ಕ್ಷೇತ್ರಕ್ಕೆ ಬರುತ್ತಿರುವ ಮಹಿಳೆಯರ ಸಂಖ್ಯೆಯು ಹೆಚ್ಚಾಗಿದೆ. ನಮ್ಮ ಸಮಾಜದ ಅರ್ಧಕ್ಕಿಂತ ಹೆಚ್ಚಿರುವ ಅತಿ ಉತ್ಕೃಷ್ಟ ಭಾಗದ ಪ್ರವೇಶದಿಂದ ನ್ಯಾಯಾಂಗ ಸೇವೆಯು ಮತ್ತಷ್ಟು ಉತ್ಕೃಷ್ಟವಾಗುತ್ತದೆ ಎಂಬುದಕ್ಕೆ ಬದಲಾಗಿರುವ ಕಾಲವೇ ಉದಾಹರಣೆಯಾಗಿದೆ ಎಂದು ನಾನು ನಂಬಿದ್ದೇನೆ. ಹೀಗಾಗಿ, ವೃತ್ತಿಯಲ್ಲಿನ ಭವಿಷ್ಯವು ಮಹಿಳೆಯರಿಗೆ ಸೇರಿದ್ದಾಗಿದೆ ಎಂದು ನಾನು ನಂಬಿದ್ದೇನೆ” ಎಂದು ಹೇಳಿದ್ದಾರೆ.

ಹಲವು ಜಿಲ್ಲಾ ನ್ಯಾಯಾಲಯಗಳಲ್ಲಿ ಇಂದಿಗೂ ಬಳಕೆ ಮಾಡಬಹುದಾದ ಶೌಚಾಲಯ ಅಥವಾ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್‌ ಡಿಸ್ಪೆನ್ಸರ್‌ ದೊರೆಯುತ್ತಿಲ್ಲ ಎಂಬುದು ವೃತ್ತಿಯ ಸೋಲಾಗಿದೆ ಎಂದು ಸಿಜೆಐ ಬೇಸರ ವ್ಯಕ್ತಪಡಿಸಿದರು.

ಕಾನೂನು ವೃತ್ತಿಯು ಒಳಗೊಳ್ಳುವಿಕೆಯಲ್ಲಿ ಒಂದಾಗಿದೆ ಮತ್ತು ನ್ಯಾಯಾಂಗ ಶಿಕ್ಷಣವು ಕಾನೂನಿನ ತಾಂತ್ರಿಕ ಜ್ಞಾನದಷ್ಟೇ ಸಾಂವಿಧಾನಿಕ ಮೌಲ್ಯಗಳನ್ನು ನೀಡುತ್ತದೆ. ವೃತ್ತಿಯಲ್ಲಿನ ಕಪ್ಪು ಮತ್ತು ಬಿಳಿ ಬಣ್ಣದ ಉಡುಪು, ಸತ್ಯ ಮತ್ತು ಅಸತ್ಯ ಮತ್ತು ನ್ಯಾಯ-ಅನ್ಯಾಯಕ್ಕೆ ವ್ಯತ್ಯಾಸವನ್ನು ತೋರುತ್ತದೆ ಎಂದರು. ಸಾಮಾನ್ಯವಾಗಿ ನ್ಯಾಯನಿರ್ಣಯ ಎನ್ನುವುದು ಯಾವುದು ಸರಿ ಮತ್ತು ಹೆಚ್ಚು ಸರಿ ಎಂಬುದರ ನಡುವೆ ಅಥವಾ ಎರಡು ತಪ್ಪುಗಳ ನಡುವೆ ಇಲ್ಲವೇ ಸರಿ ಮತ್ತು ತಪ್ಪುಗಳ ನಡುವಿನ ಸಮತೋಲನವನ್ನು ಒಳಗೊಂಡಿರುತ್ತದೆ ಎಂದು ಅವರು ವಿವರಿಸಿದರು.