Surendra Gadling 
ಸುದ್ದಿಗಳು

ತಾಯಿಯ ವಾರ್ಷಿಕ ಸ್ಮರಣೆಯಲ್ಲಿ ಭಾಗಿಯಾಗಲು ಸುರೇಂದ್ರ ಗಾಡ್ಲಿಂಗ್‌ಗೆ ಜಾಮೀನು ಮಂಜೂರು ಮಾಡಿದ ಗಡ್‌ಚಿರೋಲಿ ನ್ಯಾಯಾಲಯ

ಬಾಂಬೆ ಹೈಕೋರ್ಟ್‌ ಜುಲೈ 30ರಂದು ಸುರೇಂದ್ರ ಗಾಡ್ಲಿಂಗ್‌ಗೆ ಆಗಸ್ಟ್‌ 13 ರಿಂದ 21 ರವರೆಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಗಡ್‌ಚಿರೋಲಿ ನ್ಯಾಯಾಲಯವು ತಳೋಜಾ ಜೈಲಿಗೆ ಬಿಡುಗಡೆ ವಾರಂಟ್‌ ಜಾರಿಗೊಳಿಸಿತ್ತು.

Bar & Bench

ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಗಾಡ್ಲಿಂಗ್‌ ಅವರಿಗೆ ಬಾಂಬೆ ಹೈಕೋರ್ಟ್‌ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದ ಬೆನ್ನಿಗೇ 2016ರ ಸೂರಜ್‌ಗಢದಲ್ಲಿ ಬೆಂಕಿಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಡ್‌ಚಿರೋಲಿ ಸೆಷನ್ಸ್‌ ನ್ಯಾಯಾಲಯವು ಗುರುವಾರ ಬಿಡುಗಡೆ ವಾರಂಟ್‌ ಜಾರಿ ಮಾಡಿದೆ. ಇದರಿಂದಾಗಿ ಗಾಡ್ಲಿಂಗ್‌ ಶುಕ್ರವಾರ ಬೆಳಗ್ಗೆ ತಳೋಜಾ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿರುವ ಭೀಮಾ ಕೋರೆಗಾಂವ್‌ ಪ್ರಕರಣದಲ್ಲೂ ಗಾಡ್ಲಿಂಗ್‌ ಅವರು ಆರೋಪಿಯಾಗಿದ್ದಾರೆ. ಗಾಡ್ಲಿಂಗ್‌ ಅವರು ನಿಧನರಾದ ತಮ್ಮ ತಾಯಿಯ ವಾರ್ಷಿಕ ಸ್ಮರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಸ್ಟ್‌ 13ರಿಂದ 21ರವರೆಗೆ ಬಾಂಬೆ ಹೈಕೋರ್ಟ್‌ನ ಪ್ರಧಾನ ಪೀಠವು ಅವರಿಗೆ ಜಾಮೀನು ಮಂಜೂರು ಮಾಡಿದೆ.

ಮಾನವೀಯ ನೆಲೆಯಲ್ಲಿ ಜಾಮೀನು ಮಂಜೂರು ಮಾಡುತ್ತಿರುವುದಾಗಿ ನ್ಯಾಯಾಲಯ ಹೇಳಿದ್ದು, “ಚಾಲ್ತಿಯಲ್ಲಿರುವ ಸಾಮಾಜಿಕ ಕಟ್ಟುಪಾಡುಗಳಲ್ಲಿ ಹತ್ತಿರದ ಕುಟುಂಬದ ಸದಸ್ಯರ ಮೊದಲ ವರ್ಷದ ಪುಣ್ಯತಿಥಿಯು ಧಾರ್ಮಿಕ, ವೈಯಕ್ತಿಕ ಮತ್ತು ಭಾವನಾತ್ಮಕವಾಗಿ ಮಹತ್ವವಾಗಿದೆ” ಎಂದಿದೆ.

ತಮ್ಮ ತಾಯಿ ವಿಧಿವಶರಾದಾಗ ಗಾಡ್ಲಿಂಗ್‌ ಅವರು ಯಾವುದೇ ಅಂತಿಮ ವಿಧಿ-ವಿಧಾನದಲ್ಲಿ ಭಾಗಿಯಾಗಿರಲಿಲ್ಲ ಎಂಬುದನ್ನು ಪೀಠ ಗಮನಿಸಿತು. “ಈ ಹಿನ್ನೆಲೆಯಲ್ಲಿ ಗಾಡ್ಲಿಂಗ್‌ ಅವರ ಕೋರಿಕೆಯು ಅಸಮರ್ಥನೀಯ ಎಂದೆನಿಸುವುದಿಲ್ಲ” ಎಂದು ಪೀಠ ಆದೇಶದಲ್ಲಿ ಹೇಳಿದ್ದು, ರೂ. 50,000 ವೈಯಕ್ತಿಕ ಬಾಂಡ್‌ ಮತ್ತು ಒಬ್ಬರು ಅಥವಾ ಇಬ್ಬರ ಜಾಮೀನು ಭದ್ರತೆಯನ್ನು ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿತ್ತು. ಅಲ್ಲದೇ, ಆಗಸ್ಟ್‌ 16 ಮತ್ತು 19ರಂದು ನಾಗ್ಪುರ ಪೊಲೀಸ್‌ ಠಾಣೆಗೆ ವರದಿ ಮಾಡಿಕೊಳ್ಳುವಂತೆ ನಿರ್ದೇಶಿಸಿದ್ದು, ಆಗಸ್ಟ್‌ 21ರಂದು ಸಂಜೆ 6ರ ಒಳಗೆ ತಳೋಜಾ ಜೈಲು ಅಧಿಕಾರಿಗಳಿಗೆ ಶರಣಾಗುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪ್ರಧಾನ ಸೆಷನ್ಸ್‌ ನ್ಯಾಯಾಧೀಶರು ಗಾಡ್ಲಿಂಗ್‌ ಅವರ ಜಾಮೀನು ಬಾಂಡ್‌ ಮತ್ತು ಅವರ ಬಿಡುಗಡೆಗೆ ಅಗತ್ಯವಾದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ತಳೋಜಾ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಬಿಡುಗಡೆ ವಾರೆಂಟ್‌ ಜಾರಿ ಮಾಡಿದ್ದರು. ಹೀಗಾಗಿ, ಶುಕ್ರವಾರ ಬೆಳಗ್ಗೆ ಗಾಡ್ಲಿಂಗ್‌ ಬಿಡುಗಡೆಯಾಗಿದ್ದಾರೆ.

2016ರ ಡಿಸೆಂಬರ್‌ನಲ್ಲಿ ಗಡ್‌ಚಿರೋಲಿಯ ಸೂರಜ್‌ಗಢ ಗಣಿ ಪ್ರದೇಶದಿಂದ ಕಬ್ಬಿಣದ ಅದಿರು ಸಾಗಿಸುತ್ತಿದ್ದ 80 ವಾಹನಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ್ದರು. ಈ ಬಳಿಕ ಗಡ್‌ಚಿರೋಲಿ ಪೊಲೀಸರು ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಮತ್ತು ಶಸ್ತ್ರಾಸ್ತ್ರ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ದೂರು ದಾಖಲಿಸಿದ್ದರು. ಇದಲ್ಲದೇ ಮಾವೋವಾದಿಗಳು ಸಂಘಟಿಸಿದ್ದರು ಎನ್ನಲಾದ ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿಯೂ ಗಾಡ್ಲಿಂಗ್‌ ಆರೋಪಿಯಾಗಿದ್ದು, ಅವರ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ.