Justice M Nagaprasanna and Karnataka HC 
ಸುದ್ದಿಗಳು

ಒಂದೇ ವಿವಾದಕ್ಕೆ ಸಂಬಂಧಿಸಿದಂತೆ ಎಂಟು ಬಾರಿ ಅರ್ಜಿ ಸಲ್ಲಿಕೆ: ಐವರು ದಾವೆದಾರರಿಗೆ ₹10 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಒಂದೇ ವಿವಾದಕ್ಕೆ ಸಂಬಂಧಿಸಿದಂತೆ ಹಿಂದಿನ ಅರ್ಜಿಗಳನ್ನು ಸಲ್ಲಿಕೆ ಮಾಡಿರುವುದನ್ನು ಮುಚ್ಚಿಟ್ಟು ಒಂಭತ್ತನೇ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಹಿಂದೆ ಎಂಟು ಬಾರಿ ಪ್ರಕರಣ ದಾಖಲಿಸಿರುವುದನ್ನು ಮುಚ್ಚಿಟ್ಟಿದ್ದ ಐವರು ದಾವೆದಾರರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ₹10 ಲಕ್ಷ ದಂಡ ವಿಧಿಸಿದೆ. ದಂಡದ ಮೊತ್ತವನ್ನು ತಿಂಗಳ ಒಳಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದೂ ನಿರ್ದೇಶಿಸಿದೆ.

ನ್ಯಾಯದಾನವು ಕ್ಷುಲ್ಲಕ ದಾವೆದಾರರಿಗೆ ಆಟದ ಮೈದಾನವಾಗುವುದನ್ನು ತಪ್ಪಿಸಲು ದುಬಾರಿ ದಂಡ ವಿಧಿಸುವುದು ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಆದೇಶಿಸಿದೆ.

“ವಂಚನೆ, ತಪ್ಪು ನಿರೂಪಣೆಯ ಮೂಲಕ ನ್ಯಾಯಾಂಗ ಪ್ರಕ್ರಿಯೆಗಳ ಪಾವಿತ್ರ್ಯ ಕಳಂಕಗೊಳಿಸಲು ಯತ್ನಿಸುವ ಯಾವುದೇ ದಾವೆದಾರರು ನ್ಯಾಯದ ಘನತೆಗೆ ತೀವ್ರ ಅವಮಾನ ಮಾಡುತ್ತಾರೆ. ಇಂತಹ ನಡವಳಿಕೆಯು ನ್ಯಾಯಾಂಗ ಪ್ರಾಮಾಣಿಕತೆಯ ಮೇಲಿನ ನೇರ ದಾಳಿಯಾಗಿದೆ. ಇಂಥ ಸಂದರ್ಭದಲ್ಲಿ ನ್ಯಾಯಾಲಯಗಳು ಕೇವಲ ಅಸಮ್ಮತಿಗೆ, ಬದಲಾಗಿ ದೃಢವಾದ ಖಂಡನೆಯೊಂದಿಗೆ ಪ್ರತಿಕ್ರಿಯಿಸಬೇಕು. ನ್ಯಾಯಕ್ಕೆ ಯಾವುದೇ ಕಳಂಕಬರಬಾರದು ಎನ್ನುವುದಾದರೆ ಅಂಥ ಕೃತ್ಯಕ್ಕೆ ಇಳಿಯುವವರ ವಿರುದ್ದ ಕಠಿಣ ಕ್ರಮದ ಮೂಲಕ ಬೇರೆಯವರಿಗೆ ಎಚ್ಚರಿಕೆ ರವಾನಿಸಬೇಕಿದೆ. ಈ ನೆಲೆಯಲ್ಲಿ ಅರ್ಜಿಯು ವಜಾಕ್ಕೆ ಮಾತ್ರ ಸೀಮಿತವಲ್ಲ, ದುಬಾರಿ ದಂಡವನ್ನೂ ಪಾವತಿಸಬೇಕಿದೆ. ಇದರಿಂದ ಕ್ಷುಲ್ಲಕ ದಾವೆಗಳಿಗೆ ನ್ಯಾಯಾಲಯವು ಆಟದ ಮೈದಾನವಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ವೆಂಕಟ ಭೋವಿ ಅಲಿಯಾಸ್‌ ದಾಸಪ್ಪ ಮತ್ತು ದಿವಂಗತ ಹನುಮಂತ ಭೋವಿ ಅವರ ಹೆಸರಿನಲ್ಲಿ 1979ರಲ್ಲಿ 2.2 ಎಕೆ ಭೂಮಿ ನೋಂದಣಿಯಾಗಿತ್ತು. ವಸತಿ ಪ್ರದೇಶದ ಅಭಿವೃದ್ಧಿಗಾಗಿ ಸಹಕಾರಿ ಸೊಸೈಟಿಯು 16 ಎಕರೆ ಭೂಮಿಯನ್ನು ಸರ್ಕಾರಕ್ಕೆ ಕೋರಿದ್ದು, ಇದರ ಭಾಗವಾಗಿ ಸರ್ಕಾರವು 1986ರಲ್ಲಿ ಭೂ ಸ್ವಾಧೀನ ಕಾಯಿದೆ ಅಡಿ ಕರಡು ಅಧಿಸೂಚನೆ ಹೊರಡಿಸಿತ್ತು. 1987ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಈ ಸಂಬಂಧ ವೆಂಕಟ ಭೋವಿ ಮತ್ತು ಹನುಮಂತ ಭೋವಿ ಅವರಿಗೆ ಪರಿಹಾರ ಪಾವತಿಸಲಾಗಿತ್ತು.

ಆದರೆ, ಅವರ ಸಂಬಂಧಿಗಳು 1993ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದು, ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 1994ರಲ್ಲಿ ಸಹಕಾರ ಸೊಸೈಟಿಯು ಸ್ವಾಧೀನಪಡಿಸಿಕೊಂಡಿರುವ ಭೂಮಿ ಹಸ್ತಾಂತರಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದನ್ನು ಪುರಸ್ಕರಿಸಿದ್ದ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಭೂಮಿ ಹಸ್ತಾಂತರಿಸುವಂತೆ ನಿರ್ದೇಶಿಸಿತ್ತು.

ಆನಂತರ 1997, 2003, 2004, 2007, 2012 ಮತ್ತು 2016ರಲ್ಲಿ ಸಿವಿಲ್‌ ನ್ಯಾಯಾಲಯದಲ್ಲಿ ಆನಂತರ ಹೈಕೋರ್ಟ್‌ನಲ್ಲಿ ಮೇಲ್ಮನವಿಯನ್ನೂ ಸಲ್ಲಿಸಲಾಗಿತ್ತು. ಈ ಎಲ್ಲಾ ದಾವೆಗಳು ತಿರಸ್ಕೃತಗೊಂಡಿದ್ದವು. ತದನಂತರ 2025ರ ಜನವರಿಯಲ್ಲಿ ಮೂಲ ವಾರಸುದಾರರ ಸಂಬಂಧಿಗಳು “ತಮ್ಮ ಪೂರ್ವಜರ ಜಮೀನನ್ನು 1993ರಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಶಿಫಾರಸ್ಸು ಮಾಡಲಾಗಿತ್ತು ಎಂದು ಹಾಲಿ ಅರ್ಜಿ ಸಲ್ಲಿಕೆ ಮಾಡಿದ್ದರು.

“1993ರಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಶಿಫಾರಸ್ಸು ಮಾಡಲಾಗಿತ್ತು ಎಂದು ತಡವಾಗಿ ವಿಚಾರ ಬಹಿರಂಗಪಡಿಸುವ ಮೂಲಕ ಅರ್ಜಿದಾರರು ದಶಕಗಳ ನ್ಯಾಯಾಂಗ ಚರ್ಚೆಯನ್ನು ಹಿಂದೆ ಸರಿಯುವಂತೆ ಮಾಡಲು ಕೋರುತ್ತಿದ್ದಾರೆ. ಹಿಂದಿನ ದಾವೆಗಳಲ್ಲಿ ಅರ್ಜಿದಾರರು ಈ ವಿಚಾರವನ್ನು ರಹಸ್ಯವಾಗಿಟ್ಟಿದ್ದಾರೆ. ಇದನ್ನು ನೋಡಿದರೆ ಇದು ನ್ಯಾಯ ಪಡೆಯುವ ವಿಧಾನವಲ್ಲ, ನ್ಯಾಯಾಂಗದ ಮುಂದೆ ಕಣ್ಣುಮುಚ್ಚಾಲೆಯಾಗಿದೆ. ಕುಟುಂಬದ ಸದಸ್ಯರೊಬ್ಬರು ರಿಟ್‌ ವ್ಯಾಪ್ತಿಯನ್ನು ಕೋರಿದರೆ ಮತ್ತೊಬ್ಬರು ಅದನ್ನು ಮುಚ್ಚಿಡುತ್ತಾರೆ. ಈ ರೀತಿ ಕ್ಷುಲ್ಲಕವಾಗಿ ರಿಟ್‌ ವ್ಯಾಪ್ತಿಗೆ ಹಸ್ತಕ್ಷೇಪ ಮಾಡುವುದನ್ನು ಸಹಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಮತ್ತು ವಕೀಲ ಭರತ್‌ ಕುಮಾರ್‌ ವಿ ವಾದಿಸಿದರು. ವಕೀಲೆ ಸ್ಪೂರ್ತಿ ಎನ್‌. ಹೆಗ್ಡೆ ಅವರು ಸರ್ಕಾರವನ್ನು ಪ್ರತಿನಿಧಿಸಿದ್ದರು. ಹಿರಿಯ ವಕೀಲ ಡಿ ರವಿಶಂಕರ್‌ ಮತ್ತು ವಕೀಲ ಕೆ ಆನಂದ್‌ ಅವರು ಗವಿಪುರಂ ಎಕ್ಸ್‌ಟೆನ್ಷನ್‌ ಹೌಸ್‌ ಬಿಲ್ಡಿಂಗ್‌ ಕೋ-ಆಪರೇಟಿವ್‌ ಸೊಸೈಟಿ ಪ್ರತಿನಿಧಿಸಿದ್ದರು.

Gangamma and ors v State of Karnataka and ors.pdf
Preview