ಸುದ್ದಿಗಳು

ಬಂಧನ ಅಕ್ರಮ ಎಂದು ಘೋಷಿಸುವಂತೆ ಕೋರಿ ಹೈಕೋರ್ಟ್‌ ಕದತಟ್ಟಿದ ಗೇಮ್ಸ್‌ಕ್ರಾಫ್ಟ್‌ ನಿರ್ದೇಶಕರು: ಇ ಡಿಗೆ ನೋಟಿಸ್‌

ಉದ್ಯಮದ ವೆಚ್ಚ ಎಂದು ನಕಲಿ ಮತ್ತು ಷೆಲ್‌ ಕಂಪನಿಗಳಿಗೆ ಹಣ ಕಳುಹಿಸಿ, ಅದನ್ನು ಆನಂತರ ಅಕ್ರಮ ಚಟುವಟಿಕೆ ಮತ್ತು ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಗಳ ವಿರುದ್ಧ ಇ ಡಿ ಆರೋಪಿಸಿದೆ.

Bar & Bench

ಆನ್‌ಲೈನ್ ನೈಜ ಹಣ ಗೇಮಿಂಗ್‌ ಗೇಮಿಂಗ್ ವೇದಿಕೆಗಳನ್ನು ತಿರುಚಿದ ಆರೋಪದಿಂದ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಗೇಮ್ಸ್‌ಕ್ರಾಫ್ಟ್ ಕಂಪನಿಯ ನಿರ್ದೇಶಕರಾದ ದೀಪಕ್‌ ಸಿಂಗ್‌ ಅಹ್ಲಾವತ್‌, ಪೃಥ್ವಿರಾಜ್‌ ಸಿಂಗ್ ಮತ್ತು ವಿಕಾಸ್‌ ತನೇಜಾ ಸಲ್ಲಿಸಿರುವ ಅರ್ಜಿ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ತಮ್ಮ ಬಂಧನ ಅಕ್ರಮ ಎಂದು ಘೋಷಿಸುವಂತೆ ಕೋರಿ ದೀಪಕ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice MGS Kamal

ದೀಪಕ್‌ ಸಿಂಗ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಮುರಳೀಧರ್‌ ಅವರು “ತೆಲಂಗಾಣದಲ್ಲಿ ದಾಖಲಾಗಿರುವ ಎಫ್‌ಐಆರ್‌ ಆಧರಿಸಿ ಬೆಂಗಳೂರಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೇ 7 ಗುರುಗ್ರಾಮ್‌ಗೆ ತೆರಳಿ, ಮೇ 8ರಂದು ದೀಪಕ್‌ ಮತ್ತು ಪೃಥ್ವಿರಾಜ್‌ ಅವರನ್ನು ಬಂಧಿಸಿದ್ದಾರೆ. ಮೇ 8ರಂದು ಟ್ರಾನ್ಸಿಟ್‌ ರಿಮ್ಯಾಂಡ್‌ ಪಡೆದು ಅವರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಬೆಂಗಳೂರಿನಲ್ಲಿ ಬಂಧಿಸಿಡಲಾಗಿದೆ. ಇದು ಸಂಪೂರ್ಣವಾಗಿ ಅಕ್ರಮ ಬಂಧನವಾಗಿದೆ” ಎಂದರು.

“2026ರ ಜನವರಿಯಲ್ಲಿ ಗೇಮ್ಸ್‌ಕ್ರಾಫ್ಟ್‌ ವಿರುದ್ಧ ಇ ಡಿ ಜಾರಿ ಮಾಡಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ನ ಸಮನ್ವಯ ಪೀಠವು ತಡೆ ನೀಡಿದೆ. ಸಂಸತ್ತು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯಿದೆ 2025 ಜಾರಿಗೊಳಿಸಿದಾಗಿನಿಂದ ಗೇಮ್ಸ್‌ಕ್ರಾಫ್ಟ್‌ ತನ್ನ ಕಾರ್ಯಚಟುವಟಿಕೆ ನಿಲ್ಲಿಸಿದೆ” ಎಂದರು.

ಪೃಥ್ವಿರಾಜ್‌ ಸಿಂಗ್‌ ಮತ್ತು ವಿಕಾಸ್‌ ತನೇಜಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು ತಮ್ಮ ಅರ್ಜಿಗಳಲ್ಲೂ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಬೇಕು ಎಂದು ಕೋರಿದರು.

ಇದನ್ನು ಆಲಿಸಿದ ಪೀಠವು ಮೂರೂ ಅರ್ಜಿಗಳ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿತು.

ಗೇಮ್ಸ್‌ಕ್ರಾಫ್ಟ್‌ನ ಇತರೆ ಸಂಸ್ಥಾಪಕರು ಮತ್ತು ನಿರ್ದೇಶಕರ ಜೊತೆಗೂಡಿ ದೀಪಕ್‌ ಸಿಂಗ್‌ ಅವರು ಮಾಜಿ ಪ್ರಧಾನ ವಿತ್ತ ಅಧಿಕಾರಿ ರಮೇಶ್‌ ಪ್ರಭು ಜೊತೆ ಸೇರಿ ₹250 ಕೋಟಿ ಹಣವನ್ನು ಫ್ಯೂಚರ್ಸ್‌ ಮತ್ತು ಆಪ್ಷನ್ಸ್‌ ಹಾಗೂ ಮುಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಇ ಡಿ ಆರೋಪಿಸಿದೆ.

ವಿಕಾಸ್‌ ತನೇಜಾ ಅವರು ಗೇಮ್ಸ್‌ಕ್ರಾಫ್ಟ್‌ ಮತ್ತು ರಮ್ಮಿಕಲ್ಚರ್‌ ಟೆಕ್ನಾಲಜೀಸ್‌ಗಳ ನಿರ್ದೇಶಕರಾಗಿದ್ದಾರೆ. 2020-21 ಮತ್ತು 2021-22ರ ಅವಧಿಯಲ್ಲಿ ಸಾಫ್ಟ್‌ವೇರ್‌ ನಿರ್ವಹಣೆ ಮತ್ತು ಕನ್ಸಲ್ಟೆನ್ಸಿಗೆ ₹100 ಕೋಟಿ ವೆಚ್ಚ ಮಾಡಲಾಗಿದೆ ಎಂದು ತೋರಿಸಲಾಗಿದೆ ಎಂದು ಇ ಡಿ ಆರೋಪಿಸಿದೆ.

ನೈಜ ಹಣ ಗೇಮಿಂಗ್‌ ವೇದಿಕೆಗಳ ಮೂಲಕ ಗೇಮ್ಸ್‌ಕ್ರಾಫ್ಟ್‌ ಸಂಸ್ಥೆಯು ನೈಜ ಆಟಗಾರರಿಗೆ ವಂಚಿಸಿದೆ. ಸೇವಾ ಷರತ್ತುಗಳನ್ನು ಉಲ್ಲಂಘಿಸಿ ಆರೋಪಿಗಳು ಅಕ್ರಮವಾಗಿ ನೈಜ ಆಟಗಾರರ ಖಾತೆಗಳು ಮತ್ತು ವಾಲೆಟ್‌ಗಳನ್ನು ನಿರ್ಬಂಧಿಸಿ ಅವರಿಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಉದ್ಯಮದ ವೆಚ್ಚ ಎಂದು ನಕಲಿ ಮತ್ತು ಷೆಲ್‌ ಕಂಪನಿಗಳಿಗೆ ಹಣ ಕಳುಹಿಸಿ, ಅದನ್ನು ಆನಂತರ ಅಕ್ರಮ ಚಟುವಟಿಕೆ ಮತ್ತು ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇ ಡಿ ಆರೋಪಿಸಿದೆ.

2026ರಲ್ಲಿ ತೆಲಂಗಾಣದಲ್ಲಿ ಮೂರು ಎಫ್‌ಐಆರ್‌ ದಾಖಲಾಗಿದ್ದು, ಕಂಪನಿಯು ಆನ್‌ಲೈನ್‌ ಗೇಮಿಂಗ್‌ ವೇದಿಕೆಗಳನ್ನು ನಿರ್ವಹಿಸುತ್ತಿದೆ. ಆಟವನ್ನು ತಿರುಚಿ, ಬಳಕೆದಾರರಿಗೆ ವಂಚಿಸಲಾಗಿದೆ. ಆನಂತರ ನಕಲಿ ವೆಚ್ಚ ತೋರಿಸಿ, ಅದನ್ನು ನಗದಿನ ರೂಪದಲ್ಲಿ ವಾಪಸ್‌ ಪಡೆಯಲಾಗಿದೆ ಎಂದು ಇ ಡಿ ಆರೋಪಿಸಿದೆ.

ಎಲ್ಲಾ ಆರೋಪಿಗಳು ಸದ್ಯ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದು, ನಾಳೆ ಕಸ್ಟಡಿ ಅವಧಿ ಮುಗಿಯಲಿದೆ.