ಸುದ್ದಿಗಳು

ಶಾಸಕ ಮುನಿರತ್ನ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ: ಎಸ್‌ಐಟಿಯಿಂದ ಬಿ ರಿಪೋರ್ಟ್‌ ಸಲ್ಲಿಕೆ; ಅರ್ಜಿಗಳು ವಜಾ

ಮುನಿರತ್ನ ಮತ್ತು ನಂದಿನಿ ಲೇಔಟ್‌ನ ವಸಂತ ಕುಮಾರ್‌, ಚನ್ನಕೇಶವ, ಆಶ್ರಯ ನಗರದ ಕಮಲ್‌ ಹಾಗೂ ಅನಾಮಧೇಯ ವ್ಯಕ್ತಿಯೊಬ್ಬನನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.

Bar & Bench

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಸೇರಿ ನಾಲ್ವರ ವಿರುದ್ಧ ವಿಶೇಷ ತನಿಖಾ ದಳವು (ಎಸ್‌ಐಟಿ) ವಿಚಾರಣಾಧೀನ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿರುವುದನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್‌ ಬುಧವಾರ ಅರ್ಜಿಗಳನ್ನು ವಜಾಗೊಳಿಸಿತು.

ಬೆಂಗಳೂರಿನ ಯಶವಂತಪುರದ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಮುನಿರತ್ನ, ವಸಂತ ಕುಮಾರ್‌, ಚನ್ನಕೇಶವ್‌ ಮತ್ತು ಕಮಲ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠ ನಡೆಸಿತು.

“ಎಸ್‌ಐಟಿಯು ವಿಚಾರಣಾ ನ್ಯಾಯಾಲಯಕ್ಕೆ (42ನೇ ಹೆಚ್ಚುವರಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌) ಬಿ ರಿಪೋರ್ಟ್‌ ಸಲ್ಲಿಸಿದ್ದು, ಅದನ್ನು ಒಪ್ಪಿಕೊಳ್ಳಲಾಗಿದೆ. ಹೀಗಾಗಿ, ಅರ್ಜಿಯು ಅಸ್ತಿತ್ವ ಕಳೆದುಕೊಂಡಿದ್ದು, ಅವುಗಳನ್ನು ವಜಾ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು.

ಸಿಒಡಿ-ಎಸ್‌ಟಿಯ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರದೀಪ್‌ ಅವರು “ಎಸ್‌ಐಟಿಯು ವಿಚಾರಣಾ ನ್ಯಾಯಾಲಯಕ್ಕೆ ಪ್ರಕರಣದ ಸಂಬಂಧ ಬಿ ರಿಪೋರ್ಟ್‌ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ಒಪ್ಪಿಕೊಂಡಿದೆ” ಎಂದರು.

ಆದರೆ, ಅರ್ಜಿದಾರರ ಪರ ವಕೀಲರು “ಬಿ ರಿಪೋರ್ಟ್‌ ಅನ್ನು ವಿಚಾರಣಾ ನ್ಯಾಯಾಲಯ ಒಪ್ಪಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ. ವಿಶೇಷ ಸರ್ಕಾರಿ ಅಭಿಯೋಜಕರ ಹೇಳಿಕೆಯ ಅನ್ವಯ ಅರ್ಜಿ ವಜಾಗೊಳಿಸಬಹುದು” ಎಂದರು.

ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಅರ್ಜಿಗಳನ್ನು ವಜಾಗೊಳಿಸಿತು.

ಹಿನ್ನೆಲೆ: ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತೆಯು ಮೇ 20ರಂದು ದೂರು ದಾಖಲಿಸಿದ್ದರು. ದೂರಿನಲ್ಲಿ ಬಿಜೆಪಿ ಕಾರ್ಯಕರ್ತೆಯಾಗಿದ್ದ 40 ವರ್ಷದ ತನ್ನ ಮೇಲೆ ಮುನಿರತ್ನ ಅವರು ತಮ್ಮ ಸಹಚರರಿಂದ 2023ರ ಜೂನ್‌ 11ರಂದು ಅವರ ಕಣ್ಣೆದುರು ಅತ್ಯಾಚಾರ ಮಾಡಿಸಿದ್ದಾರೆ. ಅಲ್ಲದೆ, ಜೀವನ ಪರ್ಯಂತ ನರಳುವಂತಹ ಅಪಾಯಕಾರಿ ಚುಚ್ಚುಮದ್ದೊಂದನ್ನು ಕೊಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಸಂತ್ರಸ್ತೆಯು ಒಟ್ಟು ಐವರ ವಿರುದ್ಧ ಆರ್‌ಎಂಸಿ ಠಾಣೆಗೆ ದೂರು ನೀಡಿದ್ದರು. ಈ ಕ್ರಿಮಿನಲ್ ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿಸಿ ಮುನಿರತ್ನ ಮತ್ತು ನಂದಿನಿ ಲೇ ಔಟ್‌ನ ವಸಂತ ಕುಮಾರ್‌, ಚನ್ನಕೇಶವ, ಆಶ್ರಯ ನಗರದ ಕಮಲ್‌ ಹಾಗೂ ಅನಾಮಧೇಯ ವ್ಯಕ್ತಿಯೊಬ್ಬನನ್ನು ಹೆಸರಿಸಲಾಗಿತ್ತು. ದೂರಿನ ಅನ್ವಯ ಐಪಿಸಿ ಸೆಕ್ಷನ್‌ಗಳಾದ 376 ಡಿ, 270, 323, 354, 504, 506,509 ಹಾಗೂ 34ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆನಂತರ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆ ರಾಜ್ಯ ಸರ್ಕಾರವು ರಚಿಸಿರುವ ಎಸ್‌ಐಟಿಗೆ ಈ ಪ್ರಕರಣವನ್ನು ವರ್ಗಾಯಿಸಲಾಗಿತ್ತು.

ಮುನಿರತ್ನ ಅವರ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್‌ ಠಾಣೆಯಲ್ಲಿ ಜಾತಿ ನಿಂದನೆ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಕಗ್ಗಲೀಪುರ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲಿನ ಅತ್ಯಾಚಾರ ಸಂಬಂಧಿತ ಪ್ರಕರಣಗಳಲ್ಲಿ ಎಸ್‌ಐಟಿಯು ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಮತ್ತು ಹೆಚ್ಚುವರಿ ಆರೋಪ ಪಟ್ಟಿಗಳನ್ನು ಸಲ್ಲಿಕೆ ಮಾಡಿದೆ.