Sexual Assault 
ಸುದ್ದಿಗಳು

ಇಸ್ರೇಲ್‌ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ: ಮೂವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ ಗಂಗಾವತಿ ನ್ಯಾಯಾಲಯ

ಮಲ್ಲೇಶ ಅಲಿಯಾಸ್‌ ಹಂದಿಮಲ್ಲ, ಸಾಯಿ ಅಲಿಯಾಸ್‌ ಚೇತನ ಸಾಯಿ ಮತ್ತು ಶರಣಪ್ಪ ಅಲಿಯಾಸ್‌ ಶರಣ ಬಸವರಾಜನನ್ನು ದೋಷಿಗಳು ಎಂದು ನ್ಯಾಯಾಲಯ ತೀರ್ಮಾನಿಸಿತ್ತು. ಘಟನೆ ವೇಳೆ ಒಡಿಶಾದ ಪ್ರವಾಸಿಗರೊಬ್ಬರು ಮೃತಪಟ್ಟಿದ್ದರು.

Bar & Bench

ಭಾರತದ ಪ್ರವಾಸಕ್ಕೆ ಬಂದಿದ್ದ ಇಸ್ರೇಲ್‌ ಮಹಿಳೆ ಮತ್ತು ತಮಿಳುನಾಡು ಮೂಲದ ಹೋಮ್‌ ಸ್ಟೇ ಮಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಕೊಪ್ಪಳ್ಳ ಜಿಲ್ಲೆಯ ಗಂಗಾವತಿ ನ್ಯಾಯಾಲಯವು ಸೋಮವಾರ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಘಟನೆ ವೇಳೆ ಒಡಿಶಾ ಮೂಲದ ಮತ್ತೋರ್ವ ಪ್ರವಾಸಿ ಮೃತರಾಗಿದ್ದರು. ಕೃತ್ಯ ನಡೆದ ಒಂದು ವರ್ಷದೊಳಗೆ ಪ್ರಕರಣವನ್ನು ಇತ್ಯರ್ಥಪಡಿಸುವ ಮೂಲಕ ವಿಚಾರಣಾಧೀನ ನ್ಯಾಯಾಲಯವು ಮೇಲ್ಪಂಕ್ತಿ ಹಾಕಿದೆ.

ಮಲ್ಲೇಶ ಅಲಿಯಾಸ್‌ ಹಂದಿಮಲ್ಲ, ಸಾಯಿ ಅಲಿಯಾಸ್‌ ಚೇತನ ಸಾಯಿ ಮತ್ತು ಶರಣಪ್ಪ ಅಲಿಯಾಸ್‌ ಶರಣ ಬಸವರಾಜನಿಗೆ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಅವರು ಮರಣ ದಂಡನೆ ವಿಧಿಸಿದ್ದಾರೆ.

Sadananda Nagappa Naik, I Addl District & Sessions Judge

ಕಳೆದ ವರ್ಷದ ಮಾರ್ಚ್‌ 6ರಂದು ರಾತ್ರಿ 10.30ರ ವೇಳೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಮೇಲೆ ಸಣಾಪುರ ಕೆರೆಯ ಹತ್ತಿರ ಹೋಮ್‌ ಸ್ಟೇ ಮಾಲಕಿಯು ತನ್ನ ಸ್ಥಳದಲ್ಲಿ ಉಳಿದಿದ್ದ ಇಸ್ರೇಲ್‌ ಮಹಿಳೆ, ಒಡಿಶಾದ ಪ್ರವಾಸಿಗ ಬಿಬಾಷ್‌ ಕುಮಾರ್‌, ಅಮೆರಿಕಾದ ಪ್ರಜೆ ಹಾಗೂ ಮಹಾರಾಷ್ಟ್ರದ ವ್ಯಕ್ತಿಗಳೊಂದಿಗೆ ನಕ್ಷತ್ರ ವೀಕ್ಷಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ್ದ ಆರೋಪಿಗಳಾದ ಮಲ್ಲೇಶ, ಸಾಯಿ ಮತ್ತು ಶರಣ ಅವರು ಸುಲಿಗೆ ಮಾಡುವ ಉದ್ದೇಶದಿಂದ ಸ್ಥಳದಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ವೇಳೆ ಬಿಬಾಷ್‌ ಕುಮಾರ್‌ ಮೃತಪಟ್ಟಿದ್ದ. ಅಲ್ಲದೇ, ತಮಿಳುನಾಡು ಮೂಲದ ಹೋಮ್‌ ಸ್ಟೇ ಮಾಲಕಿ ಹಾಗೂ ಇಸ್ರೇಲ್‌ ಮಹಿಳೆಯ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಜೊತೆಗೆ ಅವರಿಂದ ಮೂರು ಮೊಬೈಲ್‌, ಒಂದು ಕ್ಯಾಮೆರಾ ಮತ್ತು ₹9,500 ಸುಲಿಗೆ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎನ್‌ಎಸ್‌ ಸೆಕ್ಷನ್‌ 103 (1)ರ ಅಡಿ ಅಪರಾಧದಲ್ಲಿ ದೋಷಿಗಳು ಎಂದು ತೀರ್ಮಾನಿಸಿರುವ ನ್ಯಾಯಾಲಯವು ಮರಣ ದಂಡನೆ ವಿಧಿಸಿದೆ. ಜೊತೆಗೆ ತಲಾ ₹50 ಸಾವಿರ ದಂಡ, ತಪ್ಪಿದಲ್ಲಿ 5 ವರ್ಷ ಕಠಿಣ ಸಜೆ ಅನುಭವಿಸಬೇಕು ಎಂದು ತೀರ್ಪು ನೀಡಿದೆ. ಬಿಎನ್‌ಎಸ್‌ ಸೆಕ್ಷನ್‌ 109 (1) ಜೊತೆಗೆ 3(5), 309(6) ಜೊತೆಗೆ 3(5), 70 (1) ಹಾಗೂ 3(5), 64(1) ಮತ್ತು 3(5), 64 (2) (ಐ) ಹಾಗೂ 3(5) ಅಡಿ ಅಪರಾಧಗಳಿಗೆ ಜೀವಾವಧಿ ಮತ್ತು ಪ್ರತ್ಯೇಕವಾಗಿ ತಲಾ ₹30 ಸಾವಿರ ದಂಡ ವಿಧಿಸಲಾಗಿದೆ. 309 (4) ಜೊತೆಗೆ 3(5)ರ ಅಡಿ ಅಪರಾಧಕ್ಕೆ 7 ವರ್ಷ ಜೈಲು, ತಲಾ ₹10 ಸಾವಿರ ದಂಡ, ಸೆಕ್ಷನ್‌ 311 ಜೊತೆಗೆ 3(5) ಅಪರಾಧಕ್ಕೆ 7 ವರ್ಷ ಜೈಲು ತಲಾ ₹10 ಸಾವಿರ ದಂಡ ವಿಧಿಸಿ ಫೆಬ್ರವರಿ 16ರಂದು ನ್ಯಾಯಾಲಯ ತೀರ್ಪು ನೀಡಿದೆ.