Bombay High Court, Nagpur Bench 
ಸುದ್ದಿಗಳು

ಎನ್‌ಡಿಪಿಎಸ್‌ ಕಾಯಿದೆಯಡಿ ಗಾಂಜಾ ಎಂದರೆ ಗಾಂಜಾ ಹೂವಿನ ಕುಡಿಯಷ್ಟೇ: ಬಾಂಬೆ ಹೈಕೋರ್ಟ್

ವಾಣಿಜ್ಯ ಪ್ರಮಾಣದ ಗಾಂಜಾ ಸಾಗಿಸುತ್ತಿದ್ದ ಆರೋಪಿಗೆ ಜಾಮೀನು ನೀಡಿದ ನ್ಯಾಯಮೂರ್ತಿ ಊರ್ಮಿಳಾ ಜೋಶಿ ಫಾಲ್ಕೆ ಅವರು ತಮ್ಮ ಆದೇಶದಲ್ಲಿ ಈ ವಿಚಾರ ತಿಳಿಸಿದ್ದಾರೆ.

Bar & Bench

ಗಾಂಜಾ ಎಂದರೆ ಕೇವಲ ಗಾಂಜಾ ಸಸ್ಯದ (ಭಂಗಿ ಗಿಡ) ಹಣ್ಣು ಅಥವಾ ಹೂವಿನ ಕುಡಿಯೇ ವಿನಾ ಬೀಜ, ಎಲೆಗಳಲ್ಲ ಎಂದು ಈಚೆಗೆ ತಿಳಿಸಿರುವ ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ಎನ್‌ಡಿಪಿಎಸ್‌ ಕಾಯಿದೆಯಡಿ ಬಂಧಿತ ವ್ಯಕ್ತಿಗೆ ಜಾಮೀನು ನೀಡಿದೆ.

ಕಾಯಿದೆಯಡಿ 'ಗಾಂಜಾ' ಎಂದರೆ ಗಾಂಜಾದ ಬೀಜ ಅಥವಾ ಎಲೆಗಳಲ್ಲ ಎಂಬ ನಿರ್ಬಂಧಿತ ವ್ಯಾಖ್ಯಾನ ಇದೆ ಎಂದು ನ್ಯಾಯಮೂರ್ತಿ ಊರ್ಮಿಳಾ ಜೋಶಿ ಫಾಲ್ಕೆ ಅವರಿದ್ದ ಏಕ ಸದಸ್ಯ ಪೀಠ ತಿಳಿಸಿದೆ.

ಗಾಂಜಾ ಎಂದರೆ ಬೀಜ ಮತ್ತು ಎಲೆಗಳು ಅಲ್ಲದ ಹೂವು ಅಥವಾ ಹಣ್ಣಿನ ಕುಡಿಗಳಾಗಿವೆ ಎಂದು ಕಾಯಿದೆಯ ಗಾಂಜಾ ವ್ಯಾಖ್ಯಾನ ಹೇಳುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಗಾಂಜಾ ಸಸ್ಯಗಳ ಹೂವು ಅಥವಾ ಹಣ್ಣಿನ ಕುಡಿಯನ್ನು ಮಾತ್ರ ಗಾಂಜಾ ಎಂದು ವರ್ಗೀಕರಿಸಲಾಗಿದೆ
ಬಾಂಬೆ ಹೈಕೋರ್ಟ್

ಹೀಗಾಗಿ ವಾಣಿಜ್ಯ ಪ್ರಮಾಣದ ಗಾಂಜಾ ಸಾಗಿಸಿದ ಆರೋಪ ಹೊತ್ತಿದ್ದ ಮೊಹಮ್ಮದ್ ಜಾಕಿರ್ ನವಾಬ್ ಅಲಿ ಎಂಬಾತನಿಗೆ ನ್ಯಾಯಾಲಯ ಜಾಮೀನು ನೀಡಿತು.

ಪ್ರಕರಣದಲ್ಲಿ ಆರೋಪಿಯಿಂದ ವಶಪಡಿಸಿಕೊಂಡ ಗಾಂಜಾವನ್ನು ಪ್ರತ್ಯೇಕಿಸಿ (ಎಲೆ, ಬೀಜ ಗಿಡದ ಭಾಗಗಳಿಂದ) ತೂಕ ಮಾಡಲು ಪೊಲೀಸರು ವಿಫಲವಾಗಿದ್ದು ಅವರು ಮಾಡಿದ ತೂಕ ವಾಣಿಜ್ಯ ಪ್ರಮಾಣದ  (20 ಕಿಲೋಗ್ರಾಂಗಳಿಗಿಂತ ಹೆಚ್ಚು) ಗಾಂಜಾವನ್ನು ಒಳಗೊಂಡಿತ್ತೇ ಎಂಬ ಅನುಮಾನ  ಮೂಡಿಸುತ್ತದೆಯಾದ್ದರಿಂದ ಎನ್‌ಡಿಪಿಎಸ್‌ ಕಾಯಿದೆಯಡಿಯಲ್ಲಿ ಗಾಂಜಾ ಯಾವುದು ಎಂಬುದರ ಕುರಿತ ಅವಲೋಕನ ಪ್ರಾಮುಖ್ಯತೆ  ಪಡೆದುಕೊಂಡಿದೆ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

ಎಫ್‌ಐಆರ್ ಮತ್ತು ತನಿಖಾ ದಾಖಲೆಗಳನ್ನು ನೋಡಿದಾಗ, ವಾಹನದಿಂದ 50 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆದರೂ, ದಾಸ್ತಾನು ಪ್ರಮಾಣಪತ್ರ , ಎಫ್‌ಐಆರ್ ಹಾಗೂ ಪಂಚನಾಮೆಯ ದಾಖಲೆಗಳು ಎಲೆ, ಬೀಜ, ಕಾಂಡದ ಪ್ರಸ್ತಾಪವನ್ನೂ ಮಾಡುತ್ತದೆ ಎಂದಿರುವ ನ್ಯಾಯಾಲಯ ದೊರೆತ ವಸ್ತುವನ್ನು ಪ್ರತ್ಯೇಕಿಸಿ ತೂಕ ಮಾಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಪೊಲೀಸರು ವಶಪಡಿಸಿಕೊಂಡ ನಿಷಿದ್ಧ ವಸ್ತು ವಾಣಿಜ್ಯ ಪ್ರಮಾಣದ್ದೇ ಎಂದು ಖಚಿತಪಡಿಸಿಕೊಳ್ಳುವುದು ಕಷ್ಟ ಎಂಬುದಾಗಿ ತೀರ್ಪು ನೀಡಿತು.