ಸುದ್ದಿಗಳು

[ಗರೀಬ್‌ ನವಾಜ್‌ ಮಸೀದಿ ನೆಲಸಮ ಪ್ರಕರಣ] ಅಲಾಹಾಬಾದ್‌ ಹೈಕೋರ್ಟ್‌ನಿಂದ ಠಾಣಾಧಿಕಾರಿಗೆ ನ್ಯಾಯಾಂಗ ನಿಂದನೆ ನೋಟಿಸ್‌

Bar & Bench

ಹೈಕೋರ್ಟ್‌ನ ಆದೇಶದ ಹೊರತಾಗಿಯೂ ಗರೀಬ್‌ ನವಾಜ್‌ ಮಸೀದಿಯನ್ನು ನೆಲಸಮ ಮಾಡಲು ಆದೇಶಿಸಿದ ಕಾರಣಕ್ಕಾಗಿ ಏಕೆ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ನಿಮ್ಮ ವಿರುದ್ಧ ಹೂಡಬಾರದು ಎನ್ನುವುದಕ್ಕೆ ಉತ್ತರಿಸುವಂತೆ ಅಲಾಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠವು‌ ರಾಮ್‌ಸ್ನೇಹಿ ಘಾಟ್‌ನ ಠಾಣಾಧಿಕಾರಿಗೆ (ಎಸ್‌ಎಚ್‌ಒ) ನೋಟಿಸ್‌ ಜಾರಿ ಮಾಡಿದೆ (ವಾಸಿಫ್‌ ಹಸನ್‌ ವರ್ಸಸ್‌ ದಿವ್ಯಾಂಶು ಪಟೇಲ್‌). ಪ್ರಕರಣದ ವಿಚಾರಣೆಯನ್ನು ನ್ಯಾ. ರವಿನಾಥ್‌ ತಿಲ್ಹರಿ ಅವರಿದ್ದ ಏಕಸದಸ್ಯ ಪೀಠವು ನಡೆಸಿತು.

ಠಾಣಾಧಿಕಾರಿಯು ಜಾರಿ ಮಾಡಿರುವ ಮಸೀದಿಯ ನೆಲಸಮ ಆದೇಶವು ಮೇಲ್ನೋಟಕ್ಕೇ ಏ.24ರ ಹೈಕೋರ್ಟ್‌ನ ತಡೆಯಾಜ್ಞೆ‌ಗೆ ವಿರುದ್ಧವಾಗಿದೆ. ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಕಟ್ಟಡ ನೆಲಸಮವನ್ನು ಕೈಗೊಳ್ಳಬಾರದು ಎಂದು ಆದೇಶದಲ್ಲಿ ಹೇಳಲಾಗಿತ್ತು. ಈ ಕಾರಣದಿಂದಾಗಿ ಎಸ್‌ಎಚ್‌ಒ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಮೊಕದ್ಧಮೆ ದಾಖಲಿಸಬಾರದು ಎಂದು ಕಾರಣ ಕೇಳಿ ಹೈಕೋರ್ಟ್‌ ನೋಟಿಸ್ ಜಾರಿ ಮಾಡಿದೆ.

ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸಬ್‌ಡಿವಿಷನಲ್‌ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ)‌ ಅವರಿಗೆ ನೋಟಿಸ್‌ ಜಾರಿ ಮಾಡಲು ನಿರಾಕರಿಸಿತು. ಏಪ್ರಿಲ್‌‌ 3ರಂದು ಎಸ್‌ಡಿಎಂ ಆದೇಶವನ್ನು ಜಾರಿ ಮಾಡಿದ್ದರು, ಹೈಕೋರ್ಟ್ ಏಪ್ರಿಲ್‌ 24ರಂದು‌ ತಡೆಯಾಜ್ಞೆ ಜಾರಿಗೊಳಿಸಿತ್ತು. ಎಸ್‌ಡಿಎಂ ಆದೇಶ ತಡೆಯಾಜ್ಞೆ ಆದೇಶಕ್ಕೂ ಹಿಂದಿನದಾಗಿರುವುದನ್ನು ನ್ಯಾಯಾಲಯ ಪರಿಗಣಿಸಿತು. ಪ್ರಕರಣದ ಸಂಬಂಧ ಉದ್ದೇಶಪೂರ್ವಕವಾಗಿ ಅಲಾಹಾಬಾದ್ ಹೈಕೋರ್ಟ್‌ನ (ಲಖನೌ ವಿಭಾಗೀಯ ಪೀಠ) ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ನ್ಯಾಯಾಂಗ ನಿಂದನೆ ಅರ್ಜಿಯನ್ನು ದಾಖಲಿಸಲಾಗಿತ್ತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು, ರಾಮ್‌ಸ್ನೇಹಿ ಘಾಟ್‌ನ ಎಸ್‌ಡಿಎಂ ಹಾಗೂ ಎಸ್‌ಎಚ್‌ಒ ಅವರುಗಳು ಹೊರಡಿಸಿರುವ ಆದೇಶಗಳು ಹೈಕೋರ್ಟ್‌ ಆದೇಶದ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದರು. ತಮ್ಮ ವಾದದಲ್ಲಿ ಸಿಬಲ್‌ ಅವರು ಕೋರ್ಟ್‌ನ ನಿರ್ದೇಶನವು ಸಾಮಾನ್ಯ ಸ್ವರೂಪದ್ದಾಗಿದ್ದು ಅದರ ಉಲ್ಲಂಘನೆಯು ನೊಂದ ಪಕ್ಷಕಾರರು ನಿಂದನಾ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡುತ್ತದೆ. ಈ ಪ್ರಕರಣದಲ್ಲಿ ಪಕ್ಷಕಾರರು ಹಾಗೂ ಗರೀಬ್‌ ನವಾಜ್‌ ಮಸೀದಿಯ ಶ್ರದ್ಧಾಳುಗಳಲ್ಲಿ ನೋವುಂಟಾಗಿದೆ ಎಂದರು.

ಸಿಬಲ್‌ ಅವರ ವಾದವನ್ನು ಆಲಿಸಿದ ನ್ಯಾಯಾಲಯವು ಎಸ್‌ಡಿಎಂ ಅವರಿಗೆ ನೋಟಿಸ್‌ ಜಾರಿ ಮಾಡಲು ನಿರಾಕರಿಸಿತು. ಎಸ್‌ಎಚ್‌ಒಗೆ ಮಾತ್ರವೇ ನೋಟಿಸ್‌ ಜಾರಿಗೊಳಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿತು.