Rahul Gandhi Facebook
ಸುದ್ದಿಗಳು

ಮಾನಹಾನಿ ಪ್ರಕರಣ: ಹೆಚ್ಚವರಿ ಸಾಕ್ಷಿಗಳ ವಿಚಾರಣೆ ಪ್ರಶ್ನಿಸಿದ್ದ ರಾಹುಲ್ ಅರ್ಜಿ ಪುರಸ್ಕರಿಸಿದ ಗುವಾಹಟಿ ಹೈಕೋರ್ಟ್

ಹೆಚ್ಚುವರಿ ಸಾಕ್ಷಿಗಳ ವಿಚಾರಣೆ ಕುರಿತಾದ ಮನವಿಯನ್ನು ಈ ಹಿಂದೆ ತಿರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ಧಾರ ಸೂಕ್ತವಾಗಿತ್ತು ಎಂದ ಪೀಠ.

Bar & Bench

ಆರ್‌ಎಸ್‌ಎಸ್‌ ಕುರಿತಂತೆ 2016ರಲ್ಲಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಮೂವರು ಹೆಚ್ಚುವರಿ ಸಾಕ್ಷಿಗಳ ವಿಚಾರಣೆಗೆ ಸಮ್ಮತಿಸಿದ್ದ ಸೆಷನ್ಸ್‌ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಮನವಿಯನ್ನು ಗುವಾಹಟಿ ಹೈಕೋರ್ಟ್ ಪುರಸ್ಕರಿಸಿದೆ [ರಾಹುಲ್ ಗಾಂಧಿ ಮತ್ತು ಅಸ್ಸಾಂ  ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಹೊಸ ಸಾಕ್ಷಿಗಳು ನೀಡುವ ಹೇಳಿಕೆ  ಪ್ರಕರಣಕ್ಕೆ ಹೇಗೆ ಸಂಬಂಧಿಸಿದೆ ಎಂಬುದನ್ನು ದಾವೆದಾರ ಸ್ಪಷ್ಟಪಡಿಸಿಲ್ಲ ಎಂದು ನ್ಯಾಯಮೂರ್ತಿ ಅರುಣ್ ದೇವ್ ಚೌಧರಿ ತಿಳಿಸಿದರು.

ನೀಡಿರುವ ಕಾರಣಗಳು ತುಂಬಾ ವಿಶಾಲವಾಗಿದ್ದು, ಸಾಮಾನ್ಯೀಕರಿಸಿದಂತಹವಾಗಿವೆ. ಹೆಚ್ಚುವರಿ ಸಾಕ್ಷಿಗಳ ವಿಚಾರಣೆ ಕುರಿತಾದ ಮನವಿಯನ್ನು ಈ ಹಿಂದೆ ತಿರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ಧಾರ ಸೂಕ್ತವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಮ್ಯಾಜಿಸ್ಟ್ರೇಟ್ ತೀರ್ಪಿನ ವಿರುದ್ಧದ ಮೇಲ್ಮನವಿ ಅನುಮತಿಸುವಾಗ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಯಾಂತ್ರಿಕವಾಗಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಬದಲಿಸಿರುವುದು ಸರಿಯಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.

ಅಲ್ಲದೆ ಅಶ್ವಿನಿ ಕುಮಾರ್‌ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನನ್ವಯ ರಾಹುಲ್ ಗಾಂಧಿ ಸಂಸದರಾಗಿರುವುದರಿಂದ, ಪ್ರಕರಣವನ್ನು ಶೀಘ್ರಗತಿಯಲ್ಲಿ ವಿಚಾರಣೆ ನಡೆಸುವಂತೆ ಕೆಳ ನ್ಯಾಯಾಲಯಕ್ಕೆ ಪೀಠ ಸೂಚಿಸಿದೆ.

ಹಿನ್ನೆಲೆ

2016ರಲ್ಲಿ, ಅಂಜನ್ ಕುಮಾರ್ ಬೋರಾ ಎಂಬುವವರು ಗುವಾಹಟಿಯ ಸಿಜೆಂ ನ್ಯಾಯಾಲಯದೆದುರು ರಾಹುಲ್‌ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದರು. ಆರ್‌ಎಸ್‌ಎಸ್‌ ಮಂದಿ ಪವಿತ್ರ ಸ್ಥಳವೆಂದು ನಂಬುವ ಬಾರ್ಪೇಟಾ ಸತ್ರಕ್ಕೆ ತಮ್ಮನ್ನು ಹೋಗದಂತೆ ತಡೆಯುತ್ತಿದ್ದಾರೆ ಎಂದು ರಾಹುಲ್‌ ಸುಳ್ಳೇ ಬಿಂಬಿಸಿದ್ದಾರೆ. ಅಸ್ಸಾಂ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಕೋಮುಬಣ್ಣ ಬಳಿಯಲಯ ರಾಹುಲ್‌ ಇಂತಹ ಮಾನಹಾನಿಕರ ಹೇಳಿಕೆ ನೀಡಿದ್ದರು ಎಂದು ಬೋರಾ ದೂರಿದ್ದರು.

ದೂರುದಾರರು ಸೇರಿದಂತೆ ಏಳು ಸಾಕ್ಷಿಗಳ ವಿಚಾರಣೆ ನಡೆಸಿದ ಬಳಿಕ ಇನ್ನೂ ಮೂವರು ಸಾಕ್ಷಿಗಳನ್ನು ಹಾಜರುಪಡಿಸಲು ಅರ್ಜಿದಾರರು ಮಾಡಿದ್ದ ಮನವಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಸೆಷನ್ಸ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಅದು ಮೂವರು ಸಾಕ್ಷಿಗಳ ಹೇಳಿಕೆ ದಾಖಲಿಸಲು ಸಮ್ಮತಿಸಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.