ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಸಾಕ್ಷಿಗಳ ಗೋಪ್ಯ ವಿಚಾರಣೆ ನಡೆಸಲು ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೆಮೊವನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಈಚೆಗೆ ಮಾನ್ಯ ಮಾಡಿದ್ದು ಮಂಗಳವಾರದಿಂದ ಗೋಪ್ಯ ವಿಚಾರಣೆ ಆರಂಭವಾಗಿದೆ.
ಕೋಕಾ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ) ಕಾಯಿದೆಯ ಸೆಕ್ಷನ್ 20(3) ಅಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಾದ ನ್ಯಾಯಾಧೀಶರಾದ ರಾಮಚಂದ್ರ ಡಿ. ಹುದ್ದಾರ್ ಅವರು ನಡೆಸಿದರು.
ವಿಶೇಷ ಸರ್ಕಾರಿ ಅಭಿಯೋಜಕರು ಕೋಕಾ ಕಾಯಿದೆ ಸೆಕ್ಷನ್ 20(3)ರ ಅಡಿ ಪ್ರಕರಣವನ್ನು ಗೋಪ್ಯವಾಗಿ ವಿಚಾರಣೆ ನಡೆಸಲು ಅರ್ಜಿ ಸಲ್ಲಿಸಿದ್ದಾರೆ. ಯಾವೆಲ್ಲಾ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂಬ ಹೆಸರುಗಳನ್ನು ಒಳಗೊಂಡ ಮೆಮೊವನ್ನು ಸಲ್ಲಿಸಿದ್ದಾರೆ. ಮೆಮೊದಲ್ಲಿ ಕೋರಿರುವಂತೆ ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡಲು ಆದೇಶಿಸಲಾಗಿದೆ ಎಂದು ನ್ಯಾಯಾಲಯವು ಈ ಹಿಂದಿನ ವಿಚಾರಣೆ ವೇಳೆ ಆದೇಶದಲ್ಲಿ ಹೇಳಿತ್ತು.
ಗೌರಿ ಹತ್ಯೆ ಪ್ರಕರಣ ತನಿಖೆ ನಡೆಸಿರುವ ವಿಶೇಷ ತನಿಖಾ ದಳವು (ಎಸ್‌ಐಟಿ) ಪ್ರಾಥಮಿಕ ಮತ್ತು ಹೆಚ್ಚುವರಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ. 2022ರ ಜುಲೈ 4ರಂದು ಪ್ರಕರಣದ ವಿಚಾರಣೆ ಆರಂಭವಾಗಿದ್ದು, 200 ಸಾಕ್ಷಿಗಳ ಪೈಕಿ ಇದುವರೆಗೆ 30ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ.
ಪ್ರಕರಣದ ಹಿನ್ನೆಲೆ: 2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೂ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪವು ಗಣೇಶ್ ಮಿಸ್ಕಿನ್ ಮೇಲೂ ಇದೆ. ಆರೋಪಿಗಳ ಪರವಾಗಿ 60ಕ್ಕೂ ಹೆಚ್ಚು ವಕೀಲರು ವಕಾಲತ್ತು ವಹಿಸಿದ್ದರು. ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ಕಾರಣಕ್ಕೆ ಹತ್ಯೆ ಪ್ರಕರಣದ ವಿಚಾರಣೆ ತಡವಾಗಿತ್ತು.
ಗೌರಿ ಲಂಕೇಶ್ ಹತ್ಯೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ ಎಸ್‌ಐಟಿ 18 ಆರೋಪಿಗಳನ್ನು ಬಂಧಿಸಿ, ಅವರ ವಿರುದ್ದ 8,500 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ.
ಧಾರವಾಡದಲ್ಲಿ ಎಂ ಎಂ ಕಲಬುರ್ಗಿ, ಕೊಲ್ಲಾಪುರದಲ್ಲಿ ಎಡಪಂಥೀಯ ಚಿಂತಕ ಗೋವಿಂದ್ ಪನ್ಸಾರೆ ಹತ್ಯೆಗೆ ಬಳಸಲಾದ 7.65 ಎಂಎಂ ಕಂಟ್ರಿಮೇಡ್ ಪಿಸ್ತೂಲ್ ಗೌರಿ ಲಂಕೇಶ್ ಅವರ ಹತ್ಯೆಗೂ ಬಳಕೆಯಾಗಿದೆ ಎಂದು ಎಸ್‌ಐಟಿ ಪತ್ತೆ ಹಚ್ಚಿತ್ತು. ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆ ಮಾಡಲು ಬಳಸಿದ ಬಂದೂಕಿಗೂ ಪನ್ಸಾರೆ ಅವರ ಮೇಲಿನ ಗುಂಡಿನ ದಾಳಿಯಲ್ಲಿ ಬಳಸಿದ ಬಂದೂಕಿಗೂ ಹೊಂದಾಣಿಕೆಯಾಗಿರುವುದು ಕಂಡುಬಂದಿತ್ತು.
ಗೌರಿ ಲಂಕೇಶ್ ಅವರ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ, ಅಮೋಲ್ ಕಾಳೆ ಸಹಚರ ಮೋಹನ್ ನಾಯಕ್ ವಿರುದ್ದ ದಾಖಲಾಗಿದ್ದ ಕರ್ನಾಟಕ ಸಂಘಟಿತ ಅಪರಾಧಗಳ ಕಾಯಿದೆ (ಕೋಕಾ) ಪ್ರಕರಣವನ್ನು ಕರ್ನಾಟಕ ಹೈಕೊರ್ಟ್ ಈ ಹಿಂದೆ ರದ್ದು ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು.
ಅಮೋಲ್ ಕಾಳೆ, ಪರಶುರಾಮ್ ವಾಗ್ಮೊರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್ ಪಾಟೀಲ್, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಮತ್ತು ಹೃಶಿಕೇಶ್ ದಿಯೋದಿಕರ್ ಪ್ರಕರಣದ ಆರೋಪಿಗಳಾಗಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯಿದೆಯ ಸೆಕ್ಷನ್‌ಗಳಾದ 25(1), 25(1B), 27(1) ಮತ್ತು ಕೋಕಾ ಕಾಯಿದೆಯ ಸೆಕ್ಷನ್‌ಗಳಾದ 3(1)(I), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿದೆ.