Karnataka High Court and YouTube
Karnataka High Court and YouTube 
ಸುದ್ದಿಗಳು

ಕರ್ನಾಟಕ ನ್ಯಾಯಾಲಯ ಕಲಾಪಗಳ ಲೈವ್‌ಸ್ಟ್ರೀಮಿಂಗ್‌ ಮತ್ತು ರೆಕಾರ್ಡಿಂಗ್‌ ನಿಯಮಾವಳಿ ಪ್ರಕಟ; ನಾಳೆಯಿಂದಲೇ ಜಾರಿ

Bar & Bench

ಕಳೆದ ವಾರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ನಿರ್ದೇಶನದಂತೆ ರಾಜ್ಯ ಸರ್ಕಾರವು “ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ಸ್ಟ್ರೀಮ್‌) ಮತ್ತು ರೆಕಾರ್ಡಿಂಗ್‌ ನಿಯಮಗಳು 2021” ಅನ್ನು ಗುರುವಾರ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಇದರೊಂದಿಗೆ ಶನಿವಾರದಿಂದ (ಜನವರಿ 1, 2022) ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ಸ್ಟ್ರೀಮಿಂಗ್) ಮತ್ತು ರೆಕಾರ್ಡಿಂಗ್‌ ನಿಯಮಗಳು ಜಾರಿಗೆ ಬರಲಿವೆ. ಹೈಕೋರ್ಟ್‌, ಹೈಕೋರ್ಟ್‌ ಉಸ್ತುವಾರಿಗೆ ಒಳಪಟ್ಟಿರುವ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳಿಗೆ ಈ ನಿಯಮಗಳು ಅನ್ವಯಿಸಲಿವೆ.

ಈ ಮೂಲಕ ತಂತ್ರಜ್ಞಾನ ಯುಗದ ಜೊತೆಗೆ ಹೆಜ್ಜೆ ಇಡುವ ನಿಟ್ಟಿನಲ್ಲಿ ನ್ಯಾಯಾಲಯದ ಕಲಾಪ ಪ್ರಕ್ರಿಯೆಯನ್ನು ಮತ್ತಷ್ಟು ಪಾರರ್ದಶಕಗೊಳಿಸಲು ಲೈವ್‌ ಸ್ಟ್ರೀಮ್‌ ಆರಂಭಿಸಿದ ದೇಶದ ಎರಡನೇ ನ್ಯಾಯಾಲಯ ಎಂಬ ಹಿರಿಮೆಗೆ ಕರ್ನಾಟಕ ಹೈಕೋರ್ಟ್‌ ಪಾತ್ರವಾಗಿದೆ. ಈಗಾಗಲೇ ಗುಜರಾತ್‌ ಹೈಕೋರ್ಟ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ವ್ಯವಸ್ಥೆ ಅನುಷ್ಠಾನಗೊಂಡಿದೆ.

ಈ ಮಧ್ಯೆ, ಮನವಿ, ಮೇಲ್ಮನವಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಕೀಲರು ಜನವರಿ 1ರಿಂದ ಇ-ಫೈಲಿಂಗ್‌ ಮಾಡುವುದನ್ನು ಕಡ್ಡಾಯಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಇ-ಸ್ನೇಹಿ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ತರವಾದ ಹೆಜ್ಜೆಗಳನ್ನು ಇರಿಸಿದೆ ಎಂಬುದುನ್ನು ಇಲ್ಲಿ ನೆನೆಯಬಹುದಾಗಿದೆ.

ಲೈವ್‌ಸ್ಟ್ರೀಮಿಂಗ್‌  ಮತ್ತು ರೆಕಾರ್ಡಿಂಗ್‌ ನಿಯಮಗಳು ಪ್ರಮುಖ ಅಂಶಗಳು ಇಂತಿವೆ:

  • ಪೀಠ, ವಕೀಲರು, ಆರೋಪಿ, ಪ್ರತಿವಾದಿ ಅಥವಾ ಸಾಕ್ಷಿಯನ್ನು ಚಿತ್ರೀಕರಿಸಲು ಸೇರಿದಂತೆ ನ್ಯಾಯಾಲಯದ ಕೊಠಡಿಯಲ್ಲಿ ಐದು ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.

  • ಯಾವುದೇ ಸಂದರ್ಭದಲ್ಲಿ ಲೈವ್‌ ಸ್ಟ್ರೀಮಿಂಗ್‌ಗೆ ತಡೆ ಅಥವಾ ನಿರ್ಬಂಧ ವಿಧಿಸಲು ಪೀಠದಲ್ಲಿರುವ ನ್ಯಾಯಮೂರ್ತಿಗಳಿಗೆ ರಿಮೋಟ್‌ ನಿಯಂತ್ರಿತ ಸಾಧನವನ್ನು ನೀಡಲಾಗಿರುತ್ತದೆ.

  • ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ನ್ಯಾಯಮೂರ್ತಿಗಳ ಅನುಮತಿಯಂತೆ ವಕೀಲರು, ಸಾಕ್ಷಿ, ಆರೋಪಿ ಅಥವಾ ಇನ್ನಾವುದೇ ವ್ಯಕ್ತಿಯು ಮೈಕ್ರೊಫೋನ್‌ ಬಳಸಿ ಮಾತನಾಡಬೇಕು.

  • ಪ್ರತಿ ನ್ಯಾಯಾಲಯದ ಸಂಕೀರ್ಣದಲ್ಲಿ ನಿರ್ದಿಷ್ಟ ನಿಯಂತ್ರಣ ಕೊಠಡಿ (ಡಿಸಿಆರ್‌) ಆರಂಭಿಸಲಾಗುವುದು.

  • ಡಿಸಿಆರ್‌ನಲ್ಲಿ ನ್ಯಾಯಾಲಯದ ಅಧಿಕಾರಿ, ತಾಂತ್ರಿಕ ಮತ್ತು ವಿಡಿಯೊ ರೆಕಾರ್ಡಿಂಗ್‌ ತಜ್ಞರು ಇರಲಿದ್ದಾರೆ. ಲೈವ್‌ ಸ್ಟ್ರೀಮಿಂಗ್‌ ಮಾಡುವುದು, ರೆಕಾರ್ಡಿಂಗ್‌, ನಕಲು ಮಾಡುವುದರ ಮೇಲೆ ಡಿಸಿಆರ್‌ ನಿಗಾ ಇಡಲಿದೆ. ಅಲ್ಲದೇ, ಅನಾಗರಿಕ ಅಥವಾ ಅನಗತ್ಯವಾದ ಮಾಹಿತಿ ಸ್ಟ್ರೀಮ್‌ ಆಗದಂತೆ ಡಿಸಿಆರ್‌ ಖಾತರಿಪಡಿಸಲಿದೆ.

  • ಕೋರ್ಟ್‌ ಮಾಸ್ಟರ್‌ ಅಥವಾ ನ್ಯಾಯಾಲಯದ ಸಿಬ್ಬಂದಿ ಜೊತೆಗೆ, ಲೈವ್‌ ಸ್ಟ್ರೀಮಿಂಗ್‌ ಪ್ರಕ್ರಿಯೆ ಸಕ್ರಿಯಗೊಳಿಸಲು ತಾಂತ್ರಿಕ ತಜ್ಞರನ್ನು ಪ್ರತಿ ಕೋರ್ಟ್‌ಗೆ ನೇಮಕಾತಿ ಮಾಡಬೇಕು. ಡಿಸಿಆರ್‌ ಉಸ್ತುವಾರಿಯಲ್ಲಿ ತಾಂತ್ರಿಕ ತಜ್ಞರು ಕೆಲಸ ಮಾಡಲಿದ್ದಾರೆ.

  • ನಿಯಮಗಳಡಿ ನಿರ್ಬಂಧಿಸಿರುವುದನ್ನು ಬಿಟ್ಟು ಉಳಿದೆಲ್ಲಾ ಪ್ರಕ್ರಿಯೆಯನ್ನು ಲೈವ್‌ ಸ್ಟ್ರೀಮ್‌ ಮಾಡಲಾಗುತ್ತದೆ.

  • ವರ್ಗಾವಣೆ ಮನವಿಗಳು ಒಳಗೊಂಡಂತೆ ವೈವಾಹಿಕ ಪ್ರಕರಣಗಳು, ಲೈಂಗಿಕ ಅಪರಾಧ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376ರ ಅಡಿ ನಡೆಯುವ ಪ್ರಕ್ರಿಯೆ, ಲಿಂಗಾಧಾರಿತವಾಗಿ ಮಹಿಳೆಯರ ಮೇಲಿನ ದೌರ್ಜನ್ಯ, ಪೊಕ್ಸೊ ಕಾಯಿದೆ 2012 ಮತ್ತು ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಆರೈಕೆ) ಕಾಯಿದೆ 2015, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 327‌, ನಾಗರಿಕಾ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 153 ಬಿ ಅಡಿ ಗೌಪ್ಯ ವಿಚಾರಣೆ, ನ್ಯಾಯಾಲಯ ನಿರ್ಧರಿಸಿದ ಪ್ರಕರಣಗಳು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಬಹುದಾದ, ಸಮುದಾಯಗಳ ನಡುವೆ ದ್ವೇಷ ಹರಡಬಹುದು ಎಂದು ನ್ಯಾಯಾಲಯ ನಿರ್ಧರಿಸಿದ ಪ್ರಕರಣಗಳನ್ನು ಲೈವ್ ಸ್ಟ್ರೀಮ್ ಮಾಡುವುದಿಲ್ಲ. ಅಲ್ಲದೆ, ಪಾಟಿ ಸವಾಲು ಸೇರಿದಂತೆ ಸಾಕ್ಷಿ ದಾಖಲು, ಪಕ್ಷಕಾರರು ಮತ್ತು ಅವರ ವಕೀಲರ ವಿಶೇಷ ಸಂವಹನ, ಸಾರ್ವಜನಿಕವಾಗಿ ವಕೀಲರು ಚರ್ಚೆ ನಡೆಸದಿರುವ ಪ್ರಕರಣ, ನಿರ್ದಿಷ್ಟ ಪೀಠ ಅಥವಾ ಮುಖ್ಯ ನ್ಯಾಯಮೂರ್ತಿ ಅವರು ನಿರ್ದಿಷ್ಟ ನಿರ್ದೇಶನ ನೀಡಿರುವ ಪ್ರಕರಣಗಳನ್ನು ಲೈವ್‌ ಸ್ಟ್ರೀಮ್‌ ಮಾಡಲಾಗುವುದಿಲ್ಲ.

  • ಕೆಲವು ಪ್ರಕರಣಗಳ ಅಂತಿಮ ವಾದವನ್ನು ಲೈವ್‌ ಸ್ಟ್ರೀಮಿಂಗ್‌ನಿಂದ ನಿರ್ಬಂಧಿಸಬಹುದಾಗಿದೆ. ಕೋರ್ಟ್‌ ಮಾಸ್ಟರ್‌ ಅಥವಾ ರೀಡರ್‌ ಪಕ್ಷಕಾರರಿಗೆ ಲೈವ್‌ ಸ್ಟೀಮಿಂಗ್‌ ಆರಂಭವಾಗುವುದನ್ನು ತಿಳಿಸಬೇಕು. ಆಕ್ಷೇಪವಿದ್ದರೆ ನಿರ್ದಿಷ್ಟ ಪೀಠಕ್ಕೆ ತಿಳಿಸಬಹುದು.

  • ಪ್ರಕರಣದ ವಿಚಾರಣೆ ಅಥವಾ ನಂತರದ ಸಮಯದಲ್ಲಿ ಲೈವ್‌ ಸ್ಟ್ರೀಮಿಂಗ್‌ ಕುರಿತು ಆಕ್ಷೇಪ ವ್ಯಕ್ತಪಡಿಸಬಹುದು. ಪೀಠದ ತೀರ್ಮಾನ ಅಂತಿಮವಾಗಿರುತ್ತದೆ. ಫಾರ್ಮ್‌ Iರಲ್ಲಿ ಯಾವುದೇ ಆಕ್ಷೇಪಗಳನ್ನು ಉಲ್ಲೇಖಿಸಿ ಸಲ್ಲಿಸಬಹುದು. ಲೈವ್‌ ಸ್ಟ್ರೀಮಿಂಗ್‌ ಬಳಿಕ ಆಕ್ಷೇಪಗಳಿದ್ದರೆ ಫಾರ್ಮ್‌ IIರಲ್ಲಿ ಮನವಿ ಸಲ್ಲಿಸಬಹುದು.

  • ಮುಕ್ತ ಮತ್ತು ಪಾರದರ್ಶಕ ನ್ಯಾಯಿಕ ಪ್ರಕ್ರಿಯೆ ತತ್ವ ಆಧರಿಸಿ ಪೀಠವು ಲೈವ್‌ ಸ್ಟ್ರೀಮಿಂಗ್‌ ಕುರಿತಾದ ಆಕ್ಷೇಪವನ್ನು ನಿರ್ಧರಿಸಲಿದೆ. ಈ ಕುರಿತಾದ ಪೀಠದ ನಿರ್ಧಾರವನ್ನು ವಿಚಾರಣೆ ಮಾಡಲಾಗುವುದಿಲ್ಲ.

  • ಲೈವ್‌ ಸ್ಟ್ರೀಮ್‌ ಮಾಡದಿದ್ದಾಗ ನ್ಯಾಯಾಲಯ, ಮೇಲ್ಮನವಿ ನ್ಯಾಯಾಲಯದ ಬಳಕೆಗಾಗಿ ರೆಕಾರ್ಡಿಂಗ್‌ ಮಾಡಬೇಕು.

  • ಹಾಲಿ ನಿಯಮಗಳಿಗೆ ವಿರುದ್ಧವಾಗಿ‌ ಕಲಾಪದ ಆಡಿಯೊ-ವಿಡಿಯೊ ರೆಕಾರ್ಡಿಂಗ್ ಅನ್ನು ಯಾವುದೇ ರೀತಿಯಲ್ಲಿ ನಡೆಸುವುದನ್ನು ಸ್ಪಷ್ಟವಾಗಿ ನಿರ್ಬಂಧಿಸಲಾಗಿದೆ.

  • ಕಲಾಪದ ಸಂದರ್ಭದಲ್ಲಿ ಉಪಸ್ಥಿತರಿರುವ ಪತ್ರಕರ್ತರು, ಸಂದರ್ಶಕರ ಆಡಿಯೊ-ವಿಡಿಯೊ ಮಾಡುವಂತಿಲ್ಲ.

  • ನ್ಯಾಯಮೂರ್ತಿಗಳ ನಡುವಿನ ಸಮಾಲೋಚನೆ, ಕಲಾಪದ ಸಂದರ್ಭದಲ್ಲಿ ಸಿಬ್ಬಂದಿಗೆ ನ್ಯಾಯಮೂರ್ತಿಗಳು ನೀಡುವ ಸೂಚನೆ, ಕೋರ್ಟ್‌ ಮಾಸ್ಟರ್‌ ಅಥವಾ ರೀಡರ್‌ಗೆ ನ್ಯಾಯಮೂರ್ತಿಗಳು ನೀಡುವ ಸಂದೇಶ, ಮಾಹಿತಿ, ದಾಖಲೆ, ಕಲಾಪದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಿಗೆ ದಾಖಲೆ ನೀಡಿದ್ದು, ಕಲಾಪದ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಟಿಪ್ಪಣಿ ಮಾಡಿಕೊಳ್ಳುವುದು, ವಾದ ಮಂಡಿಸುವಾಗ ವಕೀಲರು ಟಿಪ್ಪಣಿ, ರೆಕಾರ್ಡಿಂಗ್‌ ಮಾಡಿಕೊಳ್ಳುವುದು, ತಮ್ಮ ಕಕ್ಷಿದಾರರ ಜೊತೆ ವಕೀಲರು ಮಾತುಕತೆ ನಡೆಸುವುದನ್ನು ಲೈವ್‌ ಸ್ಟ್ರೀಮಿಂಗ್‌ ಮಾಡುವಂತಿಲ್ಲ.

  • ಕಲಾಪ ದಾಖಲೀಕರಣವನ್ನು ಆರ್ಕೈವ್‌ ಮಾಡಲಾಗುತ್ತದೆ. ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ನಿರ್ದೇಶನಗಳಿಗೆ ಒಳಪಟ್ಟು ರೆಕಾರ್ಡಿಂಗ್‌ ಅನ್ನು ಕನಿಷ್ಠ ಆರು ತಿಂಗಳವರೆಗೆ ಇಟ್ಟುಕೊಳ್ಳಲಾಗುತ್ತದೆ. ನ್ಯಾಯಾಲಯದ ನಿರ್ದೇಶನದಂತೆ ನ್ಯಾಯಾಲಯದ ವೆಬ್‌ಸೈಟ್‌, ಇತರೆ ಡಿಜಿಟಲ್‌ ವೇದಿಕೆಯಲ್ಲಿ ಪೂರ್ತಿ ಅಥವಾ ಭಾಗಶಃ ರೆಕಾರ್ಡಿಂಗ್‌ ಅನ್ನು ಅಪ್‌ಲೋಡ್‌ ಮಾಡಬಹುದು.

  • ಲೈವ್‌ ಸ್ಟ್ರೀಮಿಂಗ್‌ ಸಂದರ್ಭದಲ್ಲಿ ಪಕ್ಷಕಾರರ ವೈಯಕ್ತಿಕ ಮಾಹಿತಿಗಳಾದ ಜನ್ಮ ದಿನಾಂಕ, ಮನೆ ವಿಳಾಸ, ಗುರುತಿನ ಚೀಟಿ ಸಂಖ್ಯೆ, ಬ್ಯಾಂಕ್‌ ಖಾತೆ ಮಾಹಿತಿ, ತೀರ ಹತ್ತಿರದ ಸಂಬಂಧಿಕರು, ಸಾಕ್ಷಿಗಳನ್ನು ಡಿಲೀಟ್‌ ಅಥವಾ ಮ್ಯೂಟ್‌ ಮಾಡಬೇಕು. ಇದಕ್ಕೆ ನಿಯಮ 6ರ ಉಪ ನಿಯಮ 8ರಲ್ಲಿ ವಿವರಿಸಲಾಗಿರುವ ಮಾಸ್ಕಿಂಗ್‌ ತಂತ್ರವನ್ನು ಅಳವಡಿಸಿಕೊಳ್ಳಬಹುದಾಗಿದೆ.

  • ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಕೈಬಿಡುವಂತೆ ವಕೀಲರು ಅಥವಾ ಪಾರ್ಟಿ ಇನ್‌ ಪರ್ಸನ್‌ಗಳು ನ್ಯಾಯಾಲಯವನ್ನು ಕೋರಬಹುದು.

  • ಹತ್ತು ನಿಮಿಷ ತಡವಾಗಿ ಲೈವ್‌ ಸ್ಟ್ರೀಮಿಂಗ್‌ ಮಾಡಬೇಕು. ನ್ಯಾಯಾಲಯದ ನಿರ್ದೇಶನದಂತೆ ಇದನ್ನು ಬದಲಿಸಬಹುದಾಗಿದೆ. ನ್ಯಾಯಾಲಯ ಸೂಚಿಸಿದ ಸ್ಥಳದಿಂದ ಲೈವ್‌ ಸ್ಟ್ರೀಮಿಂಗ್‌ ನಡೆಸಬೇಕು.

  • ನ್ಯಾಯಾಲಯ ಅನುಮತಿಸಿರುವವರನ್ನು ಬಿಟ್ಟು ಬೇರಾರು ಲೈವ್‌ ಸ್ಟ್ರೀಮಿಂಗ್‌ ರೆಕಾರ್ಡಿಂಗ್‌ ಅಥವಾ ಅರ್ಕೈವಲ್‌ ದತ್ತಾಂಶವನ್ನು ಹಂಚಿಕೆ ಅಥವಾ ಪ್ರಸಾರ ಮಾಡುವಂತಿಲ್ಲ (ಇದು ಪತ್ರಿಕೆ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಿಗೂ ಅನ್ವಯಿಸುತ್ತದೆ). ಈ ನಿಯಮಕ್ಕೆ ವಿರುದ್ಧವಾಗಿ ನಡೆಯುವವರನ್ನು ಕಾನೂನಿನ ಅನ್ವಯ ವಿಚಾರಣೆಗೆ ಒಳಪಡಿಸಲಾಗುವುದು. ರೆಕಾರ್ಡಿಂಗ್‌ ಮತ್ತು ದತ್ತಾಂಶ ಆರ್ಕೈವ್‌ಗೆ ಸಂಬಂಧಿಸಿದಂತೆ ನ್ಯಾಯಾಲಯ ವಿಶೇಷ ಕಾಪಿರೈಟ್‌ ಹೊಂದಿರುತ್ತದೆ. ಅನುಮತಿ ಪಡೆಯದೇ ಲೈವ್‌ ಸ್ಟ್ರೀಮ್‌ ಬಳಕೆ ಮಾಡಿದರೆ ಭಾರತೀಯ ಕಾಪಿರೈಟ್‌ ಕಾಯಿದೆ 1957, ಮಾಹಿತಿ ತಂತ್ರಜ್ಞಾನ ಕಾಯಿದೆ 2000, ನ್ಯಾಯಾಂಗ ನಿಂದನೆ ಸೇರಿದಂತೆ ವಿವಿಧ ಕಾನೂನು ನಿಬಂಧನೆಗಳ ಅಡಿ ಶಿಕ್ಷೆ ವಿಧಿಸಲಾಗುತ್ತದೆ.

  • ನ್ಯಾಯಾಲಯದ ಲಿಖಿತ ಅನುಮೋದನೆ ಇಲ್ಲದೇ ಮರು ಪ್ರಸಾರ, ಹಂಚಿಕೆ, ಅಪ್‌ಲೋಡ್‌ ಮಾಡುವುದು, ಪೋಸ್ಟ್‌ ಮಾಡುವುದು, ಮಾಡಿಫೈ, ಯಾವುದೇ ರೀತಿಯಲ್ಲಿಯೂ ಪ್ರಕಟ ಅಥವಾ ಪ್ರಸಾರ ಮಾಡುವಂತಿಲ್ಲ.

Karnataka Rules on Live Streaming and Recording of Court Proceedings-2021.pdf
Preview