CJI BR Gavai  
ಸುದ್ದಿಗಳು

ಲಿಂಗ ಸಮಾನತೆ ಕೇವಲ ಮಹಿಳೆಯರ ಹೊಣೆಯಲ್ಲ, ಪುರುಷರೂ ಕೊಡುಗೆ ನೀಡಬೇಕು: ಸಿಜೆಐ ಗವಾಯಿ

ನವದೆಹಲಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ನ್ಯಾ. ಸುನಂದಾ ಭಂಡಾರೆ ಸ್ಮಾರಕ 30ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು 'ಸರ್ವರಿಗೂ ನ್ಯಾಯ: ಲಿಂಗ ಸಮಾನತೆ ಮತ್ತು ಎಲ್ಲರನ್ನೂ ಒಳಗೊಂಡ ಭಾರತ ನಿರ್ಮಾಣ' ಎಂಬ ವಿಷಯವಾಗಿ ಮಾತನಾಡಿದರು.

Bar & Bench

ಮಹಿಳೆಯರು ಮತ್ತು ಪುರುಷರು ಒಗ್ಗೂಡಿ ಅಡೆತಡೆಗಳನ್ನು ಒಡೆದಾಗ ಮಾತ್ರ ಲಿಂಗಸಮಾನತೆ ಸಾಕಾರಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ತಿಳಿಸಿದರು.

ನವದೆಹಲಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ  ನ್ಯಾ. ಸುನಂದಾ ಭಂಡಾರೆ ಸ್ಮಾರಕ 30ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು 'ಸರ್ವರಿಗೂ ನ್ಯಾಯ: ಲಿಂಗ ಸಮಾನತೆ ಮತ್ತು ಎಲ್ಲರನ್ನೂ ಒಳಗೊಂಡ ಭಾರತ ನಿರ್ಮಾಣ' ಎಂಬ ವಿಷಯವಾಗಿ ಮಾತನಾಡಿದರು.

ಅಧಿಕಾರ ಅನುಭವಿಸುತ್ತಿರುವ ಪುರುಷರು ಅಧಿಕಾರ ಹಂಚಿಕೊಳ್ಳುವುದನ್ನು ತಮಗಾಗುವ ನಷ್ಟ ಎಂಬಂತೆ ನೋಡಬಾರದು ಬದಲಿಗೆ ಸಮಾಜದ ವಿಮೋಚನೆಯತ್ತ ಇಡುವ ಹೆಜ್ಜೆ ಎಂಬಂತೆ ಭಾವಿಸಬೇಕು ಎಂದು ಅವರು ಹೇಳಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಲಿಂಗತ್ವ ನ್ಯಾಯ ಸಾಧನೆ ಎಂಬುದು ಕೇವಲ ಮಹಿಳೆಯರ ಹೊಣೆಗಾರಿಕೆಯಲ್ಲ.

  • ಸಂಸ್ಥೆಗಳು, ಕೆಲಸದ ಸ್ಥಳಗಳು ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿ ಅಧಿಕಾರದಲ್ಲಿರುವ ಪುರುಷರೂ ಅಧಿಕಾರವನ್ನು ಪುನರ್‌ಕಲ್ಪಿಸಿಕೊಳ್ಳುವ ಅಗತ್ಯವಿದೆ.

  • ಅಧಿಕಾರ ಅನುಭವಿಸುತ್ತಿರುವ ಪುರುಷರು ಅಧಿಕಾರ ಹಂಚಿಕೊಳ್ಳುವುದನ್ನು ತಮಗಾಗುವ ನಷ್ಟ ಎಂಬಂತೆ ನೋಡಬಾರದು ಬದಲಿಗೆ ಸಮಾಜದ ವಿಮೋಚನೆಯತ್ತ ಇಡುವ ಹೆಜ್ಜೆ ಎಂಬಂತೆ ಭಾವಿಸಿದಾಗ ಮಾತ್ರ ಸಮಾಜದ ಪ್ರಗತಿಯಾಗುತ್ತದೆ.

  • ಲಿಂಗ ಸಮಾನ ಭಾರತದ ಹಾದಿ ಸಂಘರ್ಷಮಯವಾಗದೆ ಸಹಕಾರದಿಂದ ಕೂಡಿರಬೇಕು.

  • ಗಂಡಸರು ಹೆಂಗಸರು ಒಗ್ಗೂಡಿ ಸಂವಿಧಾನ ಕನಸು ಕಂಡು ಸಮಾನತೆಯ ಶಿಲ್ಪವನ್ನು ಕಟೆಯಬೇಕು.

  • 1950ರಿಂದ – 1975ನೇ ಇಸವಿಯವರೆಗಿನ ಅವಧಿಯನ್ನು ಸಮಾನತೆಯ ಕುರಿತ ಮೂಲ ಹಂತ ಎಂದು ಪರಿಗಣಿಸಬಹುದು.

  • 1975 – 2000ರ ಅವಧಿ ಮಹಿಳೆಯ ಹಕ್ಕುಗಳಿಗೆ ಮಾತ್ರ ಸೀಮಿತವಾಗಿರದೆ ಆಕೆಯ ಆತ್ಮಗೌರವ ಹಾಗೂ ಸ್ವಾಯತ್ತತೆಯ ಗಾಢ ಅಂಶಗಳತ್ತ ತಿರುಗಿತು.

  • 2000ರಿಂದ ಈಗಿನ ಅವಧಿ ಕೌಟುಂಬಿಕ ಹಿಂಸೆ ತಡೆ ಕಾಯಿದೆ, ಗರ್ಭಪಾತ ಮತ್ತು ಸಂತಾನೋತ್ಪತ್ತಿಯ ಹಕ್ಕುಗಳ ರಕ್ಷಣೆ ಹಾಗೂ ತೃತೀಯ ಲಿಂಗಿಗಳು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳ ಮಾನ್ಯತೆ ನೀಡುವತ್ತ ಹೊರಳಿತು.

  • ಆದರೆ ಈ ಯಾನ ಸುಲಭವಾಗಿರಲಿಲ್ಲ. ನ್ಯಾಯಾಂಗವೂ ಆಗಾಗ ಎಡವಿದೆ.

  • ಮಥುರಾ ಪ್ರಕರಣದಲ್ಲಿ ಅತ್ಯಾಚಾರ ನಡೆದಾಗ ಬುಡಕಟ್ಟು ಸಮುದಾಯದ ಸಂತ್ರಸ್ತೆ ಹೆಚ್ಚು ಪ್ರತಿರೋಧ ತೋರಲಿಲ್ಲ ಎಂಬ ನೆಪವೊಡ್ಡಿ ಅತ್ಯಾಚಾರದ ಆರೋಪ ಹೊತ್ತು ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಆರೋಪ ಮುಕ್ತಗೊಳಿಸಲಾಗಿತ್ತು. ಮತ್ತೊಂದೆಡೆ ಈ ಪ್ರಕರಣವೇ ಆಧುನಿಕ ಭಾರತೀಯ ಮಹಿಳಾ ಹಕ್ಕು ಚಳವಳಿಗೆ ನಾಂದಿ ಹಾಡಿತು.

  • ಮಥುರಾ ಪ್ರಕರಣದಲ್ಲಿನ ತೀರ್ಪು ಸಮ್ಮತಿ ಎನ್ನುವುದರ ಕುರಿತಾದ ಪಿತೃಪ್ರಧಾನವೂ, ಪ್ರತಿಗಾಮಿಯೂ ಆದ ಅರ್ಥೈಸುವಿಕೆಯನ್ನು ಪ್ರತಿಫಲಿಸಿತು. ಇದು, ಲೈಂಗಿಕ ದೌರ್ಜನ್ಯ ನಡೆಯಲು ಕಾರಣವಾಗುವ ಅಧಿಕಾರದ ಸಾಮಾಜಿಕ ಸ್ವರೂಪ, ಬಲವಂತಪಡಿಸುವಿಕೆ ಮತ್ತು ದೌರ್ಬಲ್ಯಗಳಂತಹ ಸಂಗತಿಗಳನ್ನು ಮರೆಮಾಚಿತು. ನನ್ನ ಅಭಿಪ್ರಾಯದಲ್ಲಿ ಈ ತೀರ್ಪು ಭಾರತದ ಸಾಂವಿಧಾನಿಕ ಹಾಗೂ ನ್ಯಾಯಿಕ ಇತಿಹಾಸದಲ್ಲಿ ಅತ್ಯಂತ ಯಾತನಾಮಯ ಕ್ಷಣಗಳಲ್ಲಿ ಒಂದಾಗಿದೆ. ಇದನ್ನೊಂದು ಸಾಂಸ್ಥಿಕ ಮುಜುಗರದ ಕ್ಷಣ ಎನ್ನಬಹುದು. ಯಾವ ವ್ಯಕ್ತಿಯ ರಕ್ಷಣೆಯನ್ನು ಕಾನೂನು ವ್ಯವಸ್ಥೆಯು ಮಾಡಬೇಕಿತ್ತೋ ಆ ವ್ಯಕ್ತಿಯ ಘನತೆಯನ್ನು ಕಾಪಾಡಲು ಅದು ವಿಫಲವಾಗಿತ್ತು.

  • ಲಿಂಗತ್ವ ನ್ಯಾಯ ಕೇವಲ ನ್ಯಾಯಾಲಯಗಳ ಸಾಧನೆಯಲ್ಲ. ನಾಗರಿಕ ಸಮಾಜದ ಜಾಗೃತಿ, ಮಹಿಳಾ ಚಳವಳಿಗಳ ನಿರಂತರ ಹೋರಾಟ ಮತ್ತು ಸಾಮಾನ್ಯ ನಾಗರಿಕರ ಧೈರ್ಯ ಇವೇ ನ್ಯಾಯಾಂಗವನ್ನು ಸಂವಿಧಾನ ಒದಗಿಸಿದ ಸಮಾನತೆಯತ್ತ ಜವಾಬ್ದಾರಿಯುತವಾಗಿ ಹೆಜ್ಜೆ ಇರಿಸುವಂತೆ ಮಾಡಿವೆ.

  • ಯಾನ ಇಲ್ಲಿಗೇ ಮುಗಿದಿಲ್ಲ. ಸಾಂಕೇತಿಕ ಚಿಹ್ನೆ ಅಥವಾ ತೋರಿಕೆಯ ಪ್ರತಿನಿಧಿತ್ವದ ಬದಲಿಗೆ ಮಹಿಳೆಯರು ಎಲ್ಲೆಡೆ ಅಧಿಕಾರ ಹಾಗೂ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಸಮಾನ ಪಾಲು ಪಡೆಯುವಂತಾಗಬೇಕು.