Mohammed zubair, Karnataka High Court 
ಸುದ್ದಿಗಳು

ಗಾಜಿಯಾಬಾದ್‌ ದಾಳಿ ವಿಡಿಯೊ: ʼಆಲ್ಟ್‌ನ್ಯೂಸ್‌ʼ ಜುಬೈರ್‌ ಕೋರಿದ ಟ್ರಾನ್ಸಿಟ್‌ ಜಾಮೀನು ಸಂಬಂಧ ಹೈಕೋರ್ಟ್‌ ನೋಟಿಸ್‌

ಗಾಜಿಯಾಬಾದ್‌ನಲ್ಲಿ ಮುಸ್ಲಿಮ್‌ ಸಮುದಾಯದ ವ್ಯಕ್ತಿಯ ಗಡ್ಡವನ್ನು ಕೆಲವು ದಾಳಿಕೋರರು ಕತ್ತರಿಸಿದ್ದಾರೆ ಎಂಬ ಟ್ವೀಟ್‌ಗೆ ಸಂಬಂಧಿಸಿದಂತೆ ಪತ್ರಿಕೋದ್ಯಮಿ ಜುಬೈರ್‌ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Bar & Bench

ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ಕೋರಿ ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕರಾದ ಮೊಹಮ್ಮದ್‌ ಜುಬೈರ್‌ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಗಾಜಿಯಾಬಾದ್‌ನಲ್ಲಿ ಮುಸ್ಲಿಮ್‌ ಸಮುದಾಯದ ವ್ಯಕ್ತಿಯ ಗಡ್ಡವನ್ನು ಕೆಲವು ದಾಳಿಕೋರರು ಕತ್ತರಿಸಿದ್ದಾರೆ ಎಂಬ ಟ್ವೀಟ್‌ಗೆ ಸಂಬಂಧಿಸಿದಂತೆ ಜುಬೈರ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ನೋಟಿಸ್‌ ಜಾರಿ ಮಾಡಿದ್ದು, ವಿಚಾರಣೆಯನ್ನು ಜೂನ್‌ 29ಕ್ಕೆ ಮುಂದೂಡಿದ್ದಾರೆ.

ಎಫ್‌ಐಆರ್‌ಗೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಳ್ಳಲು ಜೂನ್‌ 28ರಂದು ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ ಉತ್ತರ ಪ್ರದೇಶ ಪೊಲೀಸರು ಜುಬೈರ್‌ಗೆ ನೋಟಿಸ್‌ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಲಾಯಿತು.

“ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ಸಿಗದಿದ್ದರೆ ಅರ್ಜಿದಾರರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದೇ ಮತ್ತೊಂದು ರಾಜ್ಯದ ಪೊಲೀಸರು ಅರ್ಜಿದಾರರನ್ನು ಬಂಧಿಸಬಹುದಾಗಿದೆ. ಅರ್ಜಿದಾರರನ್ನು ಬಂಧಿಸಿ, ದೂರು ದಾಖಲಾಗಿರುವ ತಮ್ಮ ರಾಜ್ಯಕ್ಕೆ ಪೊಲೀಸರು ಕರೆದೊಯ್ದ ಮೇಲೆ ಅರ್ಜಿದಾರರು ಕೇವಲ ಸಾಮಾನ್ಯ ಜಾಮೀನಿಗೆ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಜೂನ್‌ 29ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ. ಅದೇ ಎಫ್‌ಐಆರ್‌ನಲ್ಲಿ ಆರೋಪಿಯಾಗಿರುವ ಪತ್ರಕರ್ತೆ ರಾಣಾ ಅಯೂಬ್‌ ಅವರಿಗೆ ಬಾಂಬೆ ಹೈಕೋರ್ಟ್‌ ಮಂಗಳವಾರ ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.