Mukhtar Ansari  Facebook
ಸುದ್ದಿಗಳು

ಅಪಹರಣ, ಕೊಲೆ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿ ದೋಷಿ, 10 ವರ್ಷ ಜೈಲು: ಗಾಜಿಪುರ ನ್ಯಾಯಾಲಯ ತೀರ್ಪು

Bar & Bench

ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ದೋಷಿ ಎಂದು ಗಾಜಿಪುರ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.

ಇಂದು ತೀರ್ಪು ಪ್ರಕಟಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಶಾಸಕನಿಗೆ ಶಾಸಕನಿಗೆ 10 ವರ್ಷಗಳ ಜೈಲು ಹಾಗೂ ₹ 5 ಲಕ್ಷ ದಂಡ ವಿಧಿಸಿತು.

ಉತ್ತರ ಪ್ರದೇಶದ ಗೂಂಡಾ ಮತ್ತು ಸಮಾಜ ವಿರೋಧಿ ಚಟುವಟಿಕೆ (ತಡೆ) ಕಾಯಿದೆಯಡಿ ನಡೆದಿದ್ದ ಪ್ರಕರಣದ ವಿಚಾರಣೆ ಏಪ್ರಿಲ್ 1ರಂದು ಪೂರ್ಣಗೊಂಡಿತ್ತು.

1996ರಲ್ಲಿ ವಿಶ್ವ ಹಿಂದೂ ಪರಿಷತ್ ಪದಾಧಿಕಾರಿ ಮತ್ತು ಕಲ್ಲಿದ್ದಲು ಉದ್ಯಮಿ ನಂದಕಿಶೋರ್ ರುಂಗ್ಟಾ ಅವರ ಅಪಹರಣ  ಮತ್ತು 2005 ರಲ್ಲಿ ಭಾರತೀಯ ಜನತಾ ಪಕ್ಷದ ಶಾಸಕ ಕೃಷ್ಣಾನಂದ ರೈ ಅವರ ಕೊಲೆ ಪ್ರಕರಣದಲ್ಲಿ ಅನ್ಸಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮುಖ್ತಾರ್‌ ಪ್ರಸ್ತುತ ಉತ್ತರಪ್ರದೇಶದ ಬಾಂಡಾ ಜೈಲಿನಲ್ಲಿದ್ದಾನೆ. 2003ರಲ್ಲಿ ಜೈಲರ್‌ಗೆ ನಿಂದಿಸಿ, ಪಿಸ್ತೂಲ್ ತೋರಿಸಿ ಕೊಲ್ಲುವುದಾಗಿ ಬೆದರಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಅಲಾಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಅದಾದ ಸ್ವಲ್ಪ ಸಮಯಕ್ಕೆ  ʼ1999ರಲ್ಲಿ ಕೊಲೆ, ಸುಲಿಗೆ, ಅಪಹರಣ ದಂತಹ ಘೋರ ಅಪರಾಧಗಳನ್ನು ಎಸಗುವ ಗ್ಯಾಂಗ್ ಇರಿಸಿಕೊಂಡಿದ್ದʼ ಎಂಬ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಮುಖ್ತಾರ್‌ಗೆ ಗೂಂಡಾ ಕಾಯಿದೆಯಡಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 50,000 ದಂಡ ವಿಧಿಸಲಾಗಿತ್ತು.