Flooded Roads 
ಸುದ್ದಿಗಳು

ಮೋರಿ ದುರಂತ: ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದ ದೆಹಲಿ ಹೈಕೋರ್ಟ್

ಘಟನೆಯ ಕುರಿತು ದೆಹಲಿ ಮಹಾನಗರ ಪಾಲಿಕೆ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವ ನಡುವೆಯೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Bar & Bench

ದೆಹಲಿಯ ಗಾಜಿಪುರದಲ್ಲಿ ಮಹಿಳೆ ಮತ್ತು ಆಕೆಯ ಮೂರು ವರ್ಷದ ಪುತ್ರ ಮೋರಿ ನೀರಿನಲ್ಲಿ ಕೊಚ್ಚಿ ಹೋದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್‌ ಕರ್ತವ್ಯ ನಿರ್ವಹಿಸಲು ವಿಫಲವಾದರೆ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

ದೆಹಲಿಯ ಗಾಜಿಪುರ ಪ್ರದೇಶದಲ್ಲಿನ ಚರಂಡಿಗಳನ್ನು ಮುಚ್ಚಲು ಅಥವಾ  ತಡೆಗೋಡೆ ನಿರ್ಮಿಸಲು ವಿಫಲವಾದ ದೆಹಲಿ ಮಹಾನಗರ ಪಾಲಿಕೆ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿತು.

ಈ ಸಂಬಂಧ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿದ ನ್ಯಾಯಾಲಯ ಪಾಲಿಕೆ ವಿಸರ್ಜಿಸುವಂತೆ ಸರ್ಕಾರಕ್ಕೆ ಸೂಚನೆ ನೀಡುವುದಾಗಿ ಎಚ್ಚರಿಸಿತು ಅಲ್ಲದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ತಾಕೀತು ಮಾಡಿತು.

ದೆಹಲಿ ಪಾಲಿಕೆ ಕ್ಲಬ್‌ ರೀತಿ ಆಗಿದೆ. ಅಲ್ಲಿ ಹೋಗಬೇಕು ಒಂದು ಕಪ್‌ ಚಹಾ ಸೇವಿಸಿ ವಾಪಸಾಗಬೇಕು. ಈ ವ್ಯಕ್ತಿ [ನ್ಯಾಯಾಲಯದಲ್ಲಿ ಹಾಜರಿದ್ದ ಉಪ ಆಯುಕ್ತ] ಕಚೇರಿಗೆ ಬಂದರೂ ಬಾರದಿದ್ದರೂ ವಾಸ್ತವಿಕ ಪರಿಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಪಾಲಿಕೆಯನ್ನು ವಿಸರ್ಜಿಸಿ ಎಂದು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಲು ಸೂಕ್ತವಾದ ಪ್ರಕರಣ ಇದು. ದೆಹಲಿಯಲ್ಲಿ ಕೆಲಸ ಮಾಡುವುದು ಹೀಗೆಯೇ? ಸಂಪುಟ ಸಭೆಗೆ ದಿನ ನಿಗದಿಯಾಗಿಲ್ಲ, ಸ್ಥಾಯಿ ಸಮಿತಿ ಸಭೆಗೆ ದಿನ ನಿಗದಿಯಾಗಿಲ್ಲ. ಸಚಿವ ಸಂಪುಟ ಮತ್ತು ಸ್ಥಾಯಿ ಸಮಿತಿ ಸಭೆ ನಡೆಯದಿದ್ದರೆ ಬಜೆಟ್ ಮಂಜೂರಾತಿ ಹೇಗೆ? ಇದು ಹೇಗಿದೆಯೆಂದರೆ ನಾವು ಪೀಠದಲ್ಲಿ ಕೂರದೆ ನ್ಯಾಯತೀರ್ಮಾನವಾಗಬೇಕು ಎಂದಂತಿದೆ ಎಂದು ಪೀಠ ಕುಟುಕಿತು.

ಕಡೆಗೆ ನ್ಯಾಯಾಲಯ ತೆರೆದ ಮೋರಿಗಳನ್ನು ಮುಚ್ಚಬೇಕು ಮತ್ತು ಚರಂಡಿಗಳಿಗೆ ಬೀಳದಂತೆ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿತು. ಅಲ್ಲದೆ. ಪ್ರಕರಣದ ಸ್ಥಿತಿಗತಿ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರು ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶಿಸಿತು.

ಪೊಲೀಸ್ ತನಿಖೆಯ ಪ್ರಕರಣವಾಗಿರುವುದರಿಂದ ಸಾವು ಸಂಭವಿಸಿದ ಪ್ರದೇಶ ಪಾಲಿಕೆ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆಯೇ ಎಂದು ತೀರ್ಪು ನೀಡುವುದಿಲ್ಲ ಎಂದು ಪೀಠ ಹೇಳಿದೆ. ಆದರೂ ತಪ್ಪಿತಸ್ಥ ಅಧಿಕಾರಿಗಳ ಹೆಸರನ್ನು ಪ್ರಕರಣದಲ್ಲಿ ಸೇರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ವರದಿಗಳ ಪ್ರಕಾರ, 22 ವರ್ಷದ ತನುಜಾ ಎಂಬ ಮಹಿಳೆ ಮತ್ತು ಆಕೆಯ 3 ವರ್ಷದ ಮಗ ಪ್ರಿಯಾಂಶ್ ಚರಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು.