ರಕ್ತ ಸಂಬಂಧ ಅಥವಾ ವಿವಾಹದ ಮೂಲಕ ಸಂಪರ್ಕ ಹೊಂದಿಲ್ಲದ ಕಾರಣ ಗಂಡನ ಗೆಳತಿ ಅಥವಾ ಉಪಪತ್ನಿಯರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗದು ಎಂದು ಆಂಧ್ರಪ್ರದೇಶ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. (ಅನುಮಾಲಾ ಅರುಣಾ ದೀಪಿಕಾ ಮತ್ತು ಆಂಧ್ರಪ್ರದೇಶ ಸರ್ಕಾರ ನಡುವಣ ಪ್ರಕರಣ) .
ಗಂಡನ ರಕ್ತ ಹಂಚಿಕೊಂಡು ಅಥವಾ ವಿವಾಹದ ಮೂಲಕ ಸಂಬಂಧಿಕರಾಗಿರುವವರು ಮಾತ್ರ ಮಹಿಳೆಯರ ವಿರುದ್ಧದ ಕ್ರೌರ್ಯವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ವಿಚಾರಣೆಗೆ ಹೊಣೆಗಾರರಾಗಿರುತ್ತಾರೆ ಎಂದು ನ್ಯಾಯಮೂರ್ತಿ ಚೀಕಟಿ ಮಾನವೇಂದ್ರನಾಥ ರಾಯ್ ಅವರು ತೀರ್ಪಿನ ವೇಳೆ ಪುನರುಚ್ಚರಿಸಿದರು.
ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ತಮ್ಮ ವಿರುದ್ಧ ಐಪಿಸಿ ಸೆಕ್ಷನ್ 498 ಎ ಮತ್ತು 114 (ಪ್ರಚೋದನೆ) ಅಡಿಯಲ್ಲಿ ದಾಖಲಾದ ಪ್ರಕರಣವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಅರ್ಜಿದಾರೆ ಆರೋಪಿಯ ಗೆಳತಿಯಾಗಿದ್ದು ಆತ ದೂರುದಾರೆಯ ಪತಿಯಾಗಿದ್ದಾನೆ. ಆರೋಪಿಯ ಜೊತೆಗೆ ತನ್ನ ವಿರುದ್ಧವೂ ದೂರು ನೀಡಿದ ಸಂಬಂಧ ಆರೋಪಿಯ ಗೆಳತಿ ನ್ಯಾಯಾಲಯದ ಮೊರೆ ಹೋಗಿದ್ದರು.
ತನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿದ್ದ ಅವರು ರಕ್ತ ಅಥವಾ ವಿವಾಹದ ಮೂಲಕ ಸಂಪರ್ಕ ಹೊಂದಿದ ಗಂಡನ ಸಂಬಂಧಿ ಮಾತ್ರ ಸೆಕ್ಷನ್ 498 ಎ ಐಪಿಸಿ ಅಡಿಯಲ್ಲಿ ಕಾನೂನು ಕ್ರಮಕ್ಕೆ ಜವಾಬ್ದಾರರಾಗಿರುತ್ತಾರೆ. ತಾನು ಹಾಗಲ್ಲದ ಕಾರಣ ಎಫ್‌ಐಆರ್ ತಪ್ಪಾಗಿದೆ ಎಂದು ವಾದಿಸಿದ್ದರು.
ಅರ್ಜಿದಾರೆಯ ನಿಲುವನ್ನು ಒಪ್ಪಿದ ನ್ಯಾಯಾಲಯ ಯು ಸುವೇತಾ ವರ್ಸಸ್ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಆಧರಿಸಿ ಈ ಆದೇಶ ಹೊರಡಿಸಿದೆ. ಐಪಿಸಿ ಸೆಕ್ಷನ್ 498-ಎ ಅಡಿಯಲ್ಲಿ ಅಪರಾಧ ಎಸಗಿದ ವ್ಯಕ್ತಿಗಳು ಗಂಡ ಮತ್ತು ಸಂಬಂಧಿಕರು ಮಾತ್ರ ಆಗಿರಬೇಕು. ಗೆಳತಿ, ಸಂಬಂಧಿಯಲ್ಲದ ಕಾರಣ, ಐಪಿಸಿ ಸೆಕ್ಷನ್ 498-ಎ ಅಡಿ ಪ್ರಕರಣ ದಾಖಲಿಸಲಾಗದು” ಎಂದು ತೀರ್ಪಿನಲ್ಲಿ ತಿಳಿಸಲಾಗಿತ್ತು.
ಅದರಂತೆ ಅರ್ಜಿದಾರರ ವಿರುದ್ಧ ಮುಂದಿನ ಕ್ರಮಗಳನ್ನು ತಡೆಹಿಡಿಯಲು ಆಂಧ್ರಪ್ರದೇಶ ಹೈಕೋರ್ಟ್ ಆದೇಶಿಸಿತು. ಜೊತೆಗೆ ಆಕೆಯ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ನಿರ್ದೇಶಿಸಿತು. ಆದರೆ, ಆರೋಪಿ ಪತಿಯ ವಿರುದ್ಧ ತನಿಖೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.