ಬೈಕ್ ಟ್ಯಾಕ್ಸಿಗೆ ಸಂಬಂಧಿಸಿದ ತೀರ್ಮಾನ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ನಿರ್ಧರಿಸಲ್ಪಡುತ್ತದೆ ಎಂದು ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಬೈಕ್ ಟ್ಯಾಕ್ಸಿ ಸೇವೆಯನ್ನು ಹಲವರು ಜೀವನೋಪಾಯಕ್ಕಾಗಿ ಅವಲಂಬಿಸಿರುವುದರಿಂದ ಗಂಭೀರವಾಗಿ ಆಲೋಚಿಸುವಂತೆ ಸರ್ಕಾರಕ್ಕೆ ನ್ಯಾಯಾಲಯವು ಕಿವಿಮಾತು ಹೇಳಿದೆ.
ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧಿಸಿ ಏಕಸದಸ್ಯ ಪೀಠ ಮಾಡಿರುವ ಆದೇಶ ಪ್ರಶ್ನಿಸಿ ಓಲಾ, ಉಬರ್ ಮತ್ತು ರ‍್ಯಾಪಿಡೊ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
“ಶಾಸನಬದ್ಧವಾದ ವ್ಯವಹಾರಕ್ಕೆ ನಿಷೇಧ ಹೇರಲಾಗಿದೆ. ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿಸಿದಾಗ ಅದನ್ನು ನಿಯಂತ್ರಿಸಬಹುದು. ನಿಯಂತ್ರಣವು ಸಂಪೂರ್ಣ ನಿಷೇಧವನ್ನು ಒಳಗೊಳ್ಳುತ್ತದೆಯೇ ಎಂಬುದು ಈಗಿರುವ ಪ್ರಶ್ನೆಯಾಗಿದೆ. ನಿಯಂತ್ರಣ ಹೇರದ ಹೊರತು ಎಲ್ಲಾ ವ್ಯವಹಾರಕ್ಕೂ ಅವಕಾಶವಿದೆ. ಬೈಕ್ ಟ್ಯಾಕ್ಸಿ ಸೇವೆಯು ವಾಣಿಜ್ಯ ವಹಿವಾಟು ವ್ಯಾಪ್ತಿಯ ಹೊರಗಿಲ್ಲ” ಎಂದು ಪೀಠ ಮೌಖಿಕವಾಗಿ ಹೇಳಿದೆ.
ಆಗ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಸುರಕ್ಷತೆಯ ಕಾರಣಕ್ಕಾಗಿ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಲಾಗಿದೆ. ಬೈಕ್ ಟ್ಯಾಕ್ಸಿ ಸೇವೆಯು ಶಾಸನಬದ್ಧ ಉದ್ಯಮವಾಗಿರಬಹುದು. ಆದರೆ, ನಿಯಮ ಮತ್ತು ನಿಯಂತ್ರಣ ಕ್ರಮಗಳನ್ನು ರೂಪಿಸದ ಹೊರತು ಉದ್ಯಮ ನಡೆಸಲು ಕಾನೂನಿನಲ್ಲಿ ಅವರಿಗೆ ಅವಕಾಶವಿಲ್ಲ” ಎಂದರು.
ಆಗ ಪೀಠವು “ಸಂವಿಧಾನದ 19(1)(ಜಿ) ವಿಧಿಯಡಿ ಸಕಾರಣ ನಿರ್ಬಂಧಗಳನ್ನು ಒಳಗೊಂಡು ಶಾಸನಬದ್ಧ ಉದ್ಯಮ ನಡೆಸಬಹುದಾಗಿದೆ. ಅದಾಗ್ಯೂ, ಇಲ್ಲಿ ಯಾವುದೇ ನಿಯಂತ್ರಣವಿಲ್ಲ. ಸದ್ಯ ಬೈಕ್ ಟ್ಯಾಕ್ಸಿಗೆ ಅಕ್ಷರಶಃ ನಿರ್ಬಂಧ ವಿಧಿಸಲಾಗಿದೆ. ತಮ್ಮ ಉದ್ಯಮ ನಿಷೇಧಿಸಲಾಗಿದೆ ಎಂದು ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿರುವವರು ನ್ಯಾಯಾಲಯದ ಮುಂದೆ ಬಂದಿದ್ದಾರೆ. ಸರಿಯೋ, ತಪ್ಪೋ ಅದು ಅವರ ಪ್ರಶ್ನೆಯಾಗಿದೆ. ಬೈಕ್ ಟ್ಯಾಕ್ಸಿ ಸೇವೆಯನ್ನು ನಿಯಂತ್ರಿಸದಿದ್ದರೆ, ಅದನ್ನು ನಿಯಂತ್ರಿಸಲು ಯಾವುದೇ ನೀತಿ ಇಲ್ಲದಿದ್ದರೆ, ಸಂವಿಧಾನದ ಅಡಿ ಆ ಉದ್ಯಮ ನಡೆಸಲು ಅವರಿಗೆ ಹಕ್ಕಿದೆ. ನಿಯಂತ್ರಣ ಕ್ರಮಗಳು ಅಸ್ತಿತ್ವದಲ್ಲಿರದಿದ್ದರೆ ಅವರನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ. ಅವರಿಗೆ ಸಂಪೂರ್ಣವಾದ ಅವಕಾಶವಿದೆ ಎಂದರ್ಥ. ನಿಮ್ಮ ವಾದ ಹೇಗಿದೆಯೆಂದರೆ ಸರ್ಕಾರವು ನೀತಿಯನ್ನು ಹೊಂದಿಲ್ಲ ಎಂದರೆ ಅದರ ಅರ್ಥ ಪ್ರಜ್ಞಾಪೂರ್ವಕವಾಗಿ ನಿಷೇಧ ಹೇರಲಾಗಿದೆ ಎನ್ನುವಂತಿದೆ” ಎಂದು ಸರ್ಕಾರದ ನಿಲುವಿನ ಕುರಿತು ಪೀಠ ಕುಟುಕಿತು.
ಇದಕ್ಕೆ ಎಜಿ ಅವರು “ವಿಶೇಷವಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಾಗುತ್ತದೆ” ಎಂದರು. ಆಗ ಪೀಠವು “ಈ ವಾದವು ಪ್ರಯಾಣಿಕರ ಕೊನೆಯ ಹಂತದ ಪ್ರಯಾಣವನ್ನು ಸಂಪರ್ಕಿಸುವ ನಿಮ್ಮದೇ ನೀತಿಗೆ ವಿರುದ್ಧವಾಗಿದೆ. ಬೈಕ್ ದಟ್ಟಣೆ ಉಂಟು ಮಾಡುತ್ತದೆ ಎಂಬುದಕ್ಕೆ ಆಧಾರವಿದೆಯೇ? ನಿಮ್ಮ ಪ್ರಕಾರ ಆಟೊ ಕಡಿಮೆ ದಟ್ಟಣೆ ಉಂಟು ಮಾಡುತ್ತದೆಯೇ” ಎಂದು ಖಾರವಾಗಿ ಪ್ರಶ್ನಿಸಿತು. ಇದಕ್ಕೆ ಎಜಿ ಅವರು “ರಾಜ್ಯದಲ್ಲಿ ಆರು ಲಕ್ಷ ಬೈಕ್ ಟ್ಯಾಕ್ಸಿಗಳಿವೆ. ಬೈಕ್ ಟ್ಯಾಕ್ಸಿ ಸೇವೆಯನ್ನು ಸಾರಿಗೆ ವಿಧಾನವಾಗಿ ಅನುಮತಿಸುವುದು ಸೂಕ್ತವೇ ಎಂಬ ಪ್ರಶ್ನೆ ಇದೆ” ಎಂದರು.
ಅಂತಿಮವಾಗಿ ಪೀಠವು “ವಿಚಾರಣೆಯನ್ನು ಒಂದು ತಿಂಗಳು ಮುಂದೂಡಲಾಗುವುದು. ನೀತಿಯಿಂದ ಪೀಠವನ್ನು ಸಂತುಷ್ಟಗೊಳಿಸುವ ಅಗತ್ಯವಿಲ್ಲ. ನೀತಿಯು ಸ್ವೇಚ್ಛೆಯಿಂದ ಕೂಡಿದೆಯೇ ಇಲ್ಲವೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಲಿದೆ. ನೀತಿಯ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಅದು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ” ಎಂದಿತು.
ಇದಕ್ಕೆ ಎಜಿ ಅವರು “ಸರ್ಕಾರವು ಪ್ರಜ್ಞಾಪೂರ್ವಕ ತೀರ್ಮಾನ ಕೈಗೊಳ್ಳಲಿದೆ” ಎಂದರು. ಮುಂದುವರಿದು, “ಬೈಕ್ ಟ್ಯಾಕ್ಸಿ ಸೇವೆಗೆ ಮಾರ್ಗಸೂಚಿ ರೂಪಿಸುವುದನ್ನು ಸರ್ಕಾರವು ಪರಿಗಣಿಸುತ್ತಿಲ್ಲ. ಇದಕ್ಕೆ ನೀತಿಯ ಅಗತ್ಯವಿದೆಯೇ? ಇದೆ ಎಂದಾದರೆ ಯಾವ ನೀತಿ ಎಂಬ ಕುರಿತು ನಿರ್ಧರಿಸಲಿದೆ” ಎಂದರು.
ಹಾಲಿ ಪ್ರಕರಣದಲ್ಲಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಗಂಭೀರ ಆಲೋಚನೆ ನಡೆಸಲಾಗುವುದು ಎಂಬ ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂದ ಪೀಠವು ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿತು. ವಿಚಾರಣೆಯ ಕೊನೆಯಲ್ಲಿ ಪೀಠವು “ಸರ್ಕಾರವು ಗಂಭೀರವಾಗಿ ಆಲೋಚಿಸಬೇಕು. ಏಕೆಂದರೆ ಇಲ್ಲಿ ಹಲವರ ಜೀವನೋಪಾಯವಿದೆ” ಎಂದಿತು.