Justice Rajiv Shakdher  
ಸುದ್ದಿಗಳು

ವಿಕಲಚೇತನ ವಕೀಲರು ಕೂಡ ಸಾಮಾನ್ಯ ವಕೀಲರಷ್ಟೇ ಸಾಮರ್ಥ್ಯವುಳ್ಳವರು: ನ್ಯಾ. ರಾಜೀವ್ ಶಕ್ದೆರ್ ಕರೆ

Bar & Bench

ವಕೀಲರು ಮತ್ತು ಕಾನೂನು ಕ್ಷೇತ್ರದ ವಿಸ್ತೃತ ಸಮುದಾಯ ವಿಕಲಾಂಗ ವ್ಯಕ್ತಿಗಳಿಗೆ ಉದ್ಯೋಗಾವಕಾಶ ಸೃಷ್ಟಿಸಬೇಕು ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರಾಜೀವ್ ಶಕ್ದೆರ್‌ ಕರೆ ನೀಡಿದರು.

ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ, ಜಲ್ದಿ  (ಜಸ್ಟೀಸ್‌, ಆಕ್ಸೆಸ್‌ ಅಂಡ್‌ ಲೋಯರಿಂಗ್‌ ಡಿಲೇಸ್‌ ಇನ್‌ ಇಂಡಿಯಾ) ಹಾಗೂ ನವಿ ಸಂಘಟನೆಗಳು ಶನಿವಾರ ದೆಹಲಿಯ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋರ್ಟ್ 'ಡಿಸೈನ್ ಹ್ಯಾಂಡ್‌ಬುಕ್‌: ಡಿಸೈನ್ ಗೈಡ್ ಫಾರ್ ಯೂಸರ್ ಸೆಂಟ್ರಿಕ್ ಡಿಸ್ಟ್ರಿಕ್ಟ್ ಕೋರ್ಟ್ಸ್ ಇನ್ ಇಂಡಿಯಾ' (ಭಾರತದ ಜಿಲ್ಲಾ ನ್ಯಾಯಾಲಯಗಳನ್ನು ಬಳಕೆದಾರ ಸ್ನೇಹಿಗೊಳಿಸುವ ನಿಟ್ಟಿನಲ್ಲಿ ರೂಪಿಸಲಾದ ಮಾರ್ಗದರ್ಶಿ ಕೈಪಿಡಿ) ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜಲ್ದಿ ಸಂಘಟನೆ ಕೈಪಿಡಿ ಸಿದ್ಧಪಡಿಸಿದೆ.

ಕಾನೂನು ಕ್ಷೇತ್ರದ ಸಾಮಾನ್ಯರು ಮತ್ತು ವಿಶೇಷ ಸಾಮರ್ಥ್ಯವುಳ್ಳವರ  ಕ್ಷಮತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ಒತ್ತಿ ಹೇಳಿದರು.

ನ್ಯಾಯಮೂರ್ತಿಗಳ ಭಾಷಣದ ಪ್ರಮುಖಾಂಶಗಳು

  • ದೆಹಲಿ ಕಾನೂನು ಸೇವಾ ಸಮಿತಿಯಲ್ಲಿ ಭಿನ್ನ ಸಾಮರ್ಥ್ಯವುಳ್ಳ ಮಂದಿಗೆ ಕೆಲ ಹುದ್ದೆಗಳನ್ನು ಮೀಸಲಿಡಲಾಗಿದೆ. ಕಿರಿಯ ವಕೀಲರಿಗೆ ಇಂತಹ ಅವಕಾಶಗಳನ್ನು ಹಿರಿಯ ವಕೀಲರು ನೀಡಬೇಕು. ಅವರು ಸಾಮಾನ್ಯರಷ್ಟೇ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವುಳ್ಳವರು.

  • ವಿಕಲಚೇತನರೊಂದಿಗೆ ನಿಧಾನವಾಗಿ, ಸುಸಂಬದ್ಧ ರೀತಿಯಲ್ಲಿ, ತಾಳ್ಮೆಯಿಂದ ಹಾಗೂ ಸೂಕ್ಷ್ಮಸಂವೇದನೆಯಿಂದ ಮಾತನಾಡಬೇಕು ಏಕೆಂದರೆ ಅವರು ಹೆಚ್ಚು ಶ್ರಮದಿಂದ ಕೆಲಸ ಮಾಡುತ್ತಿರುತ್ತಾರೆ.

  • ವಿಭಿನ್ನ ಸಾಮರ್ಥ್ಯವುಳ್ಳ ಜನರ ವಿಚಾರಕ್ಕೆ ಬಂದಾಗ ದೆಹಲಿ ಹೈಕೋರ್ಟ್‌ ಸಾಕಷ್ಟು ಕೆಲಸಗಳನ್ನು ಮಾಡಿದೆ. ವಿಕಲಚೇತನರಿಗಾಗಿ ಸ್ಕ್ರೀನ್ ರೀಡರ್‌, ಸಂಕೇತ ಭಾಷೆಯಂತಹ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.

  • ನ್ಯಾಯಾಲಯಕ್ಕೆ ಬರುವ ವಿಕಲಚೇತನ ವಕೀಲರು ಮತ್ತು ದಾವೆದಾರರಿಗೆ ನೆರವು ನೀಡಲು ಲಿಫ್ಟ್‌, ದೃಶ್ಯ ಶ್ರವ್ಯ ಸಾಧನ, ಆನ್‌ಲೈನ್‌ ವ್ಯಾಜ್ಯ ಇತ್ಯರ್ಥ, ರಿಮೋಟ್‌ ವಿಚಾರಣೆಯಂತಹ  ವಿವಿಧ ಸವಲತ್ತುಗಳನ್ನು ಒದಗಿಸಲಾಗಿದೆ.  

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಬಿ ಡಿ ಅಹಮದ್, ಗೀತಾ ಮಿತ್ತಲ್ , ನವೀನ್ ರಾವ್ ಹಾಗೂ ವಕೀಲ ರಾಹುಲ್ ಬಜಾಜ್ ಉಪಸ್ಥಿತರಿದ್ದರು.